ಚಿಕ್ಕಮಗಳೂರು

ಕೋತಿಕಾಟ: ಮೀನುಬಲೆಗೆ ಸಹಾಯಧನ

Published On :

ಕ.ಪ್ರ.ವಾರ್ತೆ  ಕೊಪ್ಪ  ಡಿ.19
ಏಲಕ್ಕಿ ಹಾಗೂ ಕಾಳುಮೆಣಸು ಬೆಳೆಗೆ ಮಂಗಗಳ ಹಾವಳಿ ತೀವ್ರತರವಾಗಿದೆ. ಸಮಸ್ಯೆ ನಿವಾರಣೆಗೆ ಮೀನು ಬಲೆ ಬೇಲಿ ನಿರ್ಮಿಸಲು ಸಂಬಾರ ಮಂಡಳಿ ಸಹಾಯಧನ ನೀಡಲಿದೆ ಎಂದು ಸಂಬಾರ ಮಂಡಳಿಯ ಶಿವಮೊಗ್ಗ ಸಹಾಯಕ ನಿರ್ದೇಶಕ ಎ.ಸಿ.ಗಿರೀಶ್ ಕುಮಾರ್ ಹೇಳಿದರು.
ತಾಲೂಕಿನ ಗಡಿಭಾಗದ ಮೇಳಿಗೆಯಲ್ಲಿ ಕೊಪ್ಪ ಏಲಕ್ಕಿ ಮಂಡಳಿ ಏರ್ಪಡಿಸಿದ್ದ ಸಂಬಾರು ಪದಾರ್ಥಗಳ ಗುಣಮಟ್ಟ ಅಭಿವೃದ್ಧಿ ವಿಚಾರ ಸಂಕೀರ್ಣದಲ್ಲಿ ಮಾತನಾಡಿದ ಅವರು, ಮಂಗಗಳ ಬಗ್ಗೆ ಪೂಜ್ಯತೆಯ ಭಾವನೆ ಹೊಂದಿರುವ ಬೆಳೆಗಾರರು ಅವುಗಳ ಕಾಟ ತಡೆಯಲಾಗದೆ ತೀವ್ರ ನಷ್ಟ ಅನುಭವಿಸುತ್ತಿದ್ದಾರೆ. ಆಲಮನೆ ಜಗದೀಶ್ ಎನ್ನುವ ರೈತರು ಆವಿಷ್ಕರಿಸಿರುವ ಮೀನು ಬಲೆ ಮಂಗಗಳ ನಿಯಂತ್ರಣಕ್ಕೆ ಪರಿಣಾಮಕಾರಿ ಎಂಬುದನ್ನು ಮನಗಂಡು ಸಂಬಾರು ಮಂಡಳಿ ನಿರ್ದೇಶಕ ಜಯಪುರ ಅಬುಲ್ ಕಲಾಂ ಅವರ ಆಸಕ್ತಿಯಿಂದಾಗಿ ಮಂಡಳಿ ಬೆಳೆಗಾರರ ಬಲೆ ಖರೀದಿಗೆ ಸಹಾಯಧನ ನೀಡಲು ಮುಂದಾಗಿದೆ ಎಂದರು.
ಏಲಕ್ಕಿ ಮರುನಾಟಿ, ಬಾವಿ ನಿರ್ಮಾಣಕ್ಕೆ ಮಂಡಳಿ ಸಹಾಯಧನ ಒದಗಿಸುತ್ತಿದೆ. ಏಲಕ್ಕಿ ರಫ್ತಿಗೆ ಗಮನಹರಿಸಿದೆ. ವಿದೇಶಿಗಳು ಸ್ಪರ್ಧೆಗಳ ನಡುವೆ ಪಶ್ಚಿಮಘಟ್ಟಗಳ ವ್ಯಾಪ್ತಿಯ ಕಾಳು ಮೆಣಸು, ಏಲಕ್ಕಿ ಉತ್ತಮ ಬೇಡಿಕೆ ಇದೆ. ಆಸಕ್ತಿ ರೈತರಿಗೆ ಪ್ರವಾಸದ ಮೂಲಕ ಉತ್ತಮ ಬೆಳೆಗಾರರನ್ನು ಪರಿಚಯಿಸುವ ಕಾರ್ಯಕ್ರಮ ಮಂಡಳಿ ಹಾಕಿಕೊಂಡಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ವೆನಿಲಾ ಬೆಳೆಗಾರರ ಸಂಘದ ಅಧ್ಯಕ್ಷ ಕನ್ನಂಗಿ ಶೇಷಾದ್ರಿ ಮಾತನಾಡಿ, ಏಲಕ್ಕಿ ಮಂಡಳಿಯನ್ನು ವಾಣಿಜ್ಯ ಸಚಿವಾಲಯದಿಂದ ಬೇರ್ಪಡಿಸಬೇಕು. ಬೆಳೆಗಾರರು ತಮ್ಮ ಬೆಳೆಗಳ ಬಗ್ಗೆ ಮಾಹಿತಿ ಪಡೆಯಲು ಕೃಷಿ, ತೋಟಗಾರಿಕೆ, ಸಂಬಾರು ಮಂಡಳಿಗಳಿಗೆ ಅಲೆಯುವ ಕಾರ್ಯ ನಿಲ್ಲಬೇಕಾಗಿದೆ ಎಂದರು. ತಾಲೂಕಿನ ಬೆಳೆಗಾರನ ಆವಿಷ್ಕಾರಕ್ಕೆ ಮನ್ನಣೆ ನೀಡಿ ಮಂಗಗಳ ನಿಯಂತ್ರಣಕ್ಕೆ ಬಲೆ ನೀಡುವ ಯೋಜನೆ ರೂಪಿಸಿರುವುದು ಸ್ವಾಗತಾರ್ಹ ಎಂದರು.
ಮೇಳಿಗೆ ಗ್ರಾಪಂ ಅಧ್ಯಕ್ಷೆ ಲೀಲಾ ಕಾರ್ಯಕ್ರಮ ಉದ್ಘಾಟಿಸಿದರು. ಕೊಪ್ಪ ಸಂಬಾರು ಮಂಡಳಿ ಕೆ.ವಿ. ಅನಿಲ್ ಕುಮಾರ್, ಮಂಡಳಿಯ ಧರ್ಮಪ್ಪ, ಮೋಹನ್ ಮೊದಲಾದವರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.