ಕಡೂರು ಇನ್ನು 'ಬರಪೀಡಿತ'
ಕ.ಪ್ರ.ವಾರ್ತೆ ಚಿಕ್ಕಮಗಳೂರು ಡಿ.24
ಈ ವರ್ಷ ಮತ್ತೆ ಕಡೂರು ಬರಪೀಡಿತ ತಾಲೂಕುಗಳ ಪಟ್ಟಿಗೆ ಸೇರ್ಪಡೆಗೊಂಡಿದೆ.
ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ವರದಿಯ ಆಧಾರದ ಮೇಲೆ ರಾಜ್ಯ ಸರ್ಕಾರ ಘೋಷಣೆ ಮಾಡಿದೆ. ಇಲ್ಲಿ ವಿಷಾದಕರ ಸಂಗತಿ ಎಂದರೆ, ಕಡೂರು ಇದೇ ಮೊದಲ ಬಾರಿಗೆ ಬರಪೀಡಿತ ತಾಲೂಕುಗಳ ಪಟ್ಟಿಗೆ ಸೇರಿದಲ್ಲ, ಕಳೆದ ಐದು ವರ್ಷಗಳಿಂದ ಬರಪೀಡಿತ ತಾಲೂಕುಗಳ ಪಟ್ಟಿಗೆ ಸೇರುತ್ತಲೇ ಬರುತ್ತಿದೆ.
ನೀರು, ಮೇವಿನ ಕೊರತೆ: ಕಡೂರು ತಾಲೂಕು ಪಕ್ಕಾ ಬಯಲುಸೀಮೆ ಪ್ರದೇಶ. ಇಲ್ಲಿನ ರೈತರು ಮಳೆಯ ಮೇಲೆ ಅವಲಂಬಿತರಾಗಿದ್ದಾರೆ. ಸಕಾಲದಲ್ಲಿ ವಾಡಿಕೆಯಷ್ಟು ಮಳೆ ಬರದೆ ಹೋದರೆ ಬರದ ಛಾಯೆ ಮೂಡುವುದು ಗ್ಯಾರಂಟಿ.
ಕೆಲವು ವರ್ಷಗಳ ಹಿಂದೆ ಇಲ್ಲಿ ಇದೇ ಪರಿಸ್ಥಿತಿ ಇದೆ. ಒಂದೆಡೆ ರೈತರು ತಮ್ಮ ಬೆಳೆಯನ್ನು ಕಳೆದುಕೊಳ್ಳುತ್ತಿದ್ದರೆ, ಇನ್ನೊಂದೆಡೆ ಮಳೆ ಇಲ್ಲದೆ ಭೂಮಿಯ ಅಂತರ್ಜಲ ಬತ್ತಿ ಹೋಗಿ ಕುಡಿಯುವ ನೀರಿನ ಬೋರ್ವೆಲ್ಗಳು ಒಣಗಿ ನಿಂತಿರುತ್ತವೆ. ಜಾನುವಾರುಗಳ ಸ್ಥಿತಿಯನ್ನು ಹೇಳುವಂತ್ತಿಲ್ಲ. ಕುಡಿಯುವ ನೀರು ಮತ್ತು ಮೇವಿನ ಕೊರತೆಯಿಂದ ಜಾನುವಾರು ಸಾಕಾಣಿಕೆ ಕಷ್ಟವಾಗಿತ್ತು.
ಇದು, ಕೇವಲ ಒಂದು ಹಳ್ಳಿಯ ಅಥವಾ ಹೋಬಳಿಯ ಪರಿಸ್ಥಿತಿಯಲ್ಲ, ಇಡೀ ಕಡೂರು ತಾಲೂಕಿನಲ್ಲಿ ಇದೇ ಪರಿಸ್ಥಿತಿ. ಕಳೆದ ವರ್ಷದಲ್ಲಿ ಸರ್ಕಾರ ಪ್ರಕೃತಿ ವಿಕೋಪ ಪರಿಹಾರ ನಿಧಿಯಡಿಯಲ್ಲಿ ಈ ತಾಲೂಕಿಗೆ ಅನುದಾನ ನೀಡಿತ್ತು.
ಈ ಅನುದಾನದಲ್ಲಿ ಬೋರ್ವೆಲ್ಗಳನ್ನು ಅಳಪಡಿಸುವ ಹಾಗೂ ಟ್ಯಾಂಕರ್ ್ಮೂಲಕ ನೀರು ಕೊಡುವ ಕೆಲಸ ನಡೆದಿತ್ತು. ಇನ್ನು ಕಡೂರು ಹಾಗೂ ಬೀರೂರು ಪಟ್ಟಣಗಳಿಗೆ ಮದಗದಕೆರೆಯ ನೀರನ್ನು ಕಾಲುವೆಯ ಮೂಲಕ ಹರಿಸುವ ಕೆಲಸ ನಡೆದಿತ್ತು. ಹೀಗೆ, ಬರದ ಪರಿಸ್ಥಿತಿ ಕಡೂರು ತಾಲೂಕಿನಲ್ಲಿ ಭೀಕರವಾಗಿರುತ್ತದೆ.
ದತ್ತ ಪ್ರಯತ್ನ: ಈ ವರ್ಷದಲ್ಲಿ ಚಿಕ್ಕಮಗಳೂರು ತಾಲೂಕಿನಲ್ಲಿ ವಾಡಿಕೆಗಿಂತ ಹೆಚ್ಚು ಮಳೆ ಸುರಿಯಿತು. ಸತತವಾಗಿ ಎರಡು ತಿಂಗಳು ಸುರಿದ ಮಳೆಗೆ ಅಡಕೆ, ಕಾಫಿ ಸೇರಿದಂತೆ ಇತರೆ ವಾಣಿಜ್ಯ ಬೆಳೆಗಳಿಗೆ ಮಲೆನಾಡು ಭಾಗದಲ್ಲಿ ಅಪಾರ ನಷ್ಟ ಸಂಭವಿಸಿತು. ಆದರೆ, ಇದೇ ಜಿಲ್ಲೆಯಲ್ಲಿರುವ ಕಡೂರು ತಾಲೂಕಿನಲ್ಲಿ ಮಳೆಯ ಕೊರತೆಯಿಂದ ರೈತರು ತಮ್ಮ ಫಸಲನ್ನು ಕಳೆದುಕೊಂಡರು. ಈಗಾಗಲೇ ಕಡೂರು ತಾಲೂಕಿನ ಕೆಲವೆಡೆ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ.
ರಾಜ್ಯ ಸರ್ಕಾರ ಈ ವರ್ಷದಲ್ಲಿ ಮೊದಲ ಹಂತದಲ್ಲಿ 64 ತಾಲೂಕುಗಳನ್ನು ಬರಪೀಡಿತ ತಾಲೂಕುಗಳೆಂದು ಘೋಷಣೆ ಮಾಡಿತ್ತು. ಆಗ ಕಡಿಮೆ ಮಳೆ ಬಿದ್ದಿರುವ ಕಡೂರು ತಾಲೂಕನ್ನು ಸರ್ಕಾರ ಪರಿಗಣಿಸಿರಲಿಲ್ಲ.
ನವೆಂಬರ್ 19 ರಂದು ಚಿಕ್ಕಮಗಳೂರು- ಕಡೂರು ನೂತನ ರೈಲು ಮಾರ್ಗದ ಉದ್ಘಾಟನಾ ಸಮಾರಂಭಕ್ಕೆ ಆಗಮಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕಡೂರು ಕ್ಷೇತ್ರದ ಶಾಸಕ ವೈಎಸ್ವಿ ದತ್ತ ಅವರು ಮನವಿ ಸಲ್ಲಿಸಿ ಬರಪೀಡಿತ ತಾಲೂಕನ್ನಾಗಿ ಘೋಷಣೆ ಮಾಡುವಂತೆ ಮನವಿ ಮಾಡಿದ್ದರು.
ಆಗ ಸ್ಥಳದಲ್ಲಿಯೇ ಇದ್ದ ಜಿಲ್ಲಾಧಿಕಾರಿ ಬಿ.ಎಸ್. ಶೇಖರಪ್ಪ ಅವರನ್ನು ಕರೆದು ಮುಖ್ಯಮಂತ್ರಿಯವರು ಮಾತನಾಡಿದರು. ಬಳಿಕ ತಮ್ಮ ಭಾಷಣದಲ್ಲಿ ದತ್ತ ಅವರ ಮನವಿಯ ಬಗ್ಗೆ ಪ್ರಸ್ತಾಪಿಸಿದ ಮುಖ್ಯಮಂತ್ರಿಯವರು ಕಡೂರು ತಾಲೂಕಿನಲ್ಲಿ ಬಿದ್ದ ಮಳೆಯ ವಿವರ ಹಾಗೂ ಅಲ್ಲಿನ ಸ್ಥಿತಿಗತಿಯ ಬಗ್ಗೆ ವರದಿ ಕಳುಹಿಸುವಂತೆ ಸೂಚನೆ ನೀಡಿದ್ದರು.
ಜಿಪಂ ನಿರ್ಣಯ: ಇದರ ಜತೆಗೆ ಜಿಲ್ಲಾ ಪಂಚಾಯ್ತಿಯ ಸಾಮಾನ್ಯಸಭೆಯಲ್ಲಿ ಬರಪೀಡಿತ ತಾಲೂಕನ್ನಾಗಿ ಘೋಷಣೆ ಮಾಡುವಂತೆ ನಿರ್ಣಯ ಕೈಗೊಂಡು ಸರ್ಕಾರಕ್ಕೆ ಕಳುಹಿಸಲಾಗಿತ್ತು.
ಹೀಗೆ ಜನ ಪ್ರತಿನಿಧಿಗಳ ನಿರಂತರ ಪ್ರಯತ್ನದಿಂದಾಗಿ ಬರಪೀಡಿತ ತಾಲೂಕುಗಳ ಪಟ್ಟಿಗೆ ಸೇರ್ಪಡೆಗೊಂಡಿದೆ. ಇದರಿಂದಾಗಿ ಮುಂದೆ ಎದುರಾಗಬಹುದಾದ ಕುಡಿಯುವ ನೀರು, ಜಾನುವಾರುಗಳಿಗೆ ಕುಡಿಯುವ ನೀರು ಮತ್ತು ಮೇವಿಗೆ ಸರ್ಕಾರದಿಂದ ವಿಶೇಷ ಅನುದಾನ ಬರಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

