ಕಾಮಗಾರಿಗೆ ರು. 20 ಕೋಟಿ
ಕ.ಪ್ರ.ವಾರ್ತೆ ಕಡೂರು ಡಿ.26
ರಾಜ್ಯ ಸರ್ಕಾರ ಕಡೂರು ತಾಲೂಕನ್ನು ಬರಪೀಡಿತ ಪ್ರದೇಶ ಎಂದು ಘೋಷಿಸಿದ್ದು, ಸರ್ಕಾರದಿಂದ ಸೇತುವೆ, ರಸ್ತೆ ಕಾಮಗಾರಿಗಾಗಿ ರು. 20 ಕೋಟಿ ಬಿಡುಗಡೆಯಾಗಿದೆ ಎಂದು ಶಾಸಕ ವೈ.ಎಸ್.ವಿ.ದತ್ತ ಹೇಳಿದರು.
ಕಡೂರು ಪಟ್ಟಣದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ದತ್ತ, ಕೈ ಬಿಟ್ಟು ಹೋಗಿದ್ದ ಕಡೂರು ತಾಲೂಕನ್ನು ಬರಪೀಡಿತ ಪಟ್ಟಿಗೆ ಸೇರ್ಪಡೆಗೊಳಿಸಿದ ಮುಖ್ಯಮಂತ್ರಿ ಸಿರಾಮಯ್ಯ ಅವರನ್ನು ಕ್ಷೇತ್ರದ ಜನರ ಪರವಾಗಿ ಅಭಿನಂದಿಸುತ್ತೇನೆ ಎಂದರು.
ಬೇಸಿಗೆ ಸಮೀಪಿಸುತ್ತಿದ್ದು, ಕುಡಿಯುವ ನೀರು, ವಿದ್ಯುತ್, ಮೇವಿನ ಸಮಸ್ಯೆ ಲಕ್ಷಣ ಗೋಚರಿಸುತ್ತಿದೆ. ಈಗ ಬರಪೀಡಿತ ತಾಲೂಕಿಗೆ ಅನುದಾನ ಬರಲಿದೆ. ಯಾವುದೇ ಸಮಸ್ಯೆ ತಲೆದೋರದಂತೆ ಬೇಸಿಗೆ ನಿಭಾಯಿಸಲು ಅಧಿಕಾರಿಗಳು ಕ್ರಮ ಕೈಗೊಳ್ಳುವಂತೆ ಸೂಚಿಸಿರುವುದಾಗಿ ತಿಳಿಸಿದರು.
ಕಾಮಗಾರಿ ಅಂತಿಮ: ಭದ್ರಾ ನದಿಯಿಂದ ಕಡೂರು, ಬೀರೂರು ಪಟ್ಟಣಗಳಿಗೆ ಶಾಶ್ವತ ನೀರೊದಗಿಸುವ ಕಾಮಗಾರಿ ಅಂತಿಮವಾಗಿದ್ದು, ಜನವರಿ ಅಂತ್ಯದೊಳಗೆ ಕುಡಿಯುವ ನೀರು ದೊರಕಲಿದೆ. ಈ ಯೋಜನೆಯಲ್ಲಿ ಗ್ರಾಮೀಣ ಪ್ರದೇಶಗಳಿಗೂ ನೀರು ಲಭ್ಯವಾಗಲಿದೆ ಎಂದರು.
ಗ್ರಾಮೀಣ ಪ್ರದೇಶಗಳ ಅಭಿವೃದ್ಧಿ ಕಾಮಗಾರಿಗಳಿಗಾಗಿ ಬಿಡುಗಡೆಯಾಗಿರುವ ರು. 10.50 ಕೋಟಿಯಲ್ಲಿ ಬೀರೂರು, ಯಗಟಿ, ಸಿಂಗಟಗೆರೆ, ಪಂಚನಹಳ್ಳಿ, ಬೆಲಗೂರು, ಚನ್ನಾಪುರ ಬೊಮ್ಮೇನಹಳ್ಳಿ ರಸ್ತೆ ಕಾಮಗಾರಿ ಕೈಗೊಳ್ಳಲಾಗುವುದು ಎಂದವರು ತಿಳಿಸಿದರು.
ರು. 1.5 ಕೋಟಿ: ಕಡೂರು ಮಲ್ಲೇಶ್ವರ ಮಧ್ಯೆ ಮತ್ತು ಯಗಟಿ ಗ್ರಾಮದಲ್ಲಿ ಸೇತುವೆ ನಿರ್ಮಾಣಕ್ಕೆ 1.5 ಕೋಟಿರೂ, ಸಿ ಎಂ ಜಿ ಎಸ್ ಐ ಯೋಜನೆ ಅಡಿಯಲ್ಲಿ ರಾಜ್ಯ ಸರ್ಕಾರ 20 ಕೀ.ಮೀ.ನ ರಸ್ತೆ ಕಾಮಗಾರಿಗೆ 14 ಕೋಟಿರೂ ಮಂಜೂರು ಮಾಡಿದೆ ಎಂದರು.
ಕಡೂರು ವಿಧಾನಸಭಾ ಕ್ಷೇತ್ರದ ಯಗಟಿ ಪ್ರಥಮ ದರ್ಜೆ ಕಾಲೇಜು ಕಟ್ಟಡ ನಿರ್ಮಾಣಕ್ಕೆ ರಾಜ್ಯ ಸರ್ಕಾರ ರು. 12 ಕೋಟಿ ಬಿಡುಗಡೆ ಮಾಡಿದ್ದು, ಕಟ್ಟಡಕ್ಕೆ 10ಎಕರೆ ಭೂಮಿಯ ಅಗತ್ಯ ಇರುವುದರಿಂದ ಸರ್ಕಾರಿ ಅಥವಾ ಖಾಸಗಿ ಭೂಮಿ ಖರೀದಿಸಿ ಕಟ್ಟಡ ನಿರ್ಮಾಣ ಕೈಗೊಳ್ಳಲಾಗುವುದು ಎಂದರು. ಶುಕ್ರವಾರ ಬಿಜೆಪಿ ಕರೆದಿರುವ ಕಡೂರು ಬಂದ್ಗೆ ತಮ್ಮ ಬೆಂಬಲವಿದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ದತ್ತ , ಈ ಹಿಂದೆ ಅಧಿಕಾರದಲ್ಲಿದ್ದ ಬಿಜೆಪಿ ತಾಲೂಕಿನ ಮೂಲ ಸೌಕರ್ಯ ನೀಡದೇ ಇದೀಗ ಬಂದ್ ಕರೆ ನೀಡಿರುವುದು ಔಚಿತ್ಯವಿಲ್ಲ ಎಂದರು.
ಅಡಕೆ ಹಾನಿಕಾರಕ ಎಂದು ನ್ಯಾಯಾಲಯಕ್ಕೆ ವರದಿ ನೀಡಿರುವುದರಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಯದ್ದು ಪ್ರಮುಖ ಪಾತ್ರವಿದೆ. ಆದ್ದರಿಂದ ಅಡಿಕೆ ಬೆಳೆಗಾರರ ಪರವಾಗಿ ಈ ಎರಡೂ ಪಕ್ಷಗಳಿಗೆ ಮಾತನಾಡುವ ನೈತಿಕ ಹಕ್ಕಿಲ್ಲ ಎಂದು ಟೀಕಿಸಿದರು.
ಜೆಡಿಎಸ್ ನಗರ ಘಟಕದ ಅಧ್ಯಕ್ಷ ಭಂಡಾರಿ ಶ್ರೀನಿವಾಸ್, ಮುಖಂಡ ಬಿ.ಟಿ. ಗಂಗಾಧರನಾಯ್ಕ, ಸೀಗೇಹಡ್ಲು ಹರೀಶ್, ಎನ್. ಇಮಾಮ್, ಕೆ.ಎಸ್. ತಿಪ್ಪೇಶ್, ಮಹೇಶ್ ಮೊದಲಾದವರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

