ಚಿಕ್ಕಮಗಳೂರು

ಕಡೂರು ಬಂದ್ ಶಾಂತಿಯುತ

Published On :

ಕ.ಪ್ರ.ವಾರ್ತೆ, ಕಡೂರು, ಡಿ.27
ತಾಲೂಕಿನ ಅಭಿವೃದ್ಧಿ ಬಗ್ಗೆ ನಿರ್ಲಕ್ಷ ಧೋರಣೆ ತಾಳುತ್ತಿರುವ ರಾಜ್ಯ ಸರ್ಕಾರ ಮತ್ತು ಶಾಸಕರು, ಅಡಕೆ ನಿಷೇಧಕ್ಕೆ ಮುಂದಾಗಿರುವ ಕೇಂದ್ರ ಸರ್ಕಾರದ ನೀತಿ ಖಂಡಿಸಿ ತಾಲೂಕು ಬಿಜೆಪಿ ನೀಡಿದ್ದ ಕಡೂರು ಬಂದ್ ಸಂಪೂರ್ಣವಾಯಿತು.
ಬಂದ್ ಹಿನ್ನೆಲೆಯಲ್ಲಿ ಶುಕ್ರವಾರ ಬೆಳಿಗ್ಗೆಯಿಂದಲೇ ಪಟ್ಟಣದ ಎಲ್ಲ ಅಂಗಡಿ ಮುಂಗಟ್ಟುಗಳು ಮುಚ್ಚಿದ್ದವು. ಮಾಜಿ ಶಾಸಕ ವೈ.ಸಿ. ವಿಶ್ವನಾಥ್, ತಾಲೂಕು ಬಿಜೆಪಿ ಅಧ್ಯಕ್ಷ ಕೆ.ಎಚ್. ಶಂಕರ್, ನಗರ ಘಟಕದ ಅಧ್ಯಕ್ಷ ಎ.ಮಣಿ ನೇತೃತ್ವದಲ್ಲಿ ಬಂದ್ ಆಚರಿಸಲಾಯಿತು.
ಅಗತ್ಯ ವಸ್ತುಗಳಾದ ಹಾಲು, ಔಷಧಿ, ಹೂವು, ಸೊಪ್ಪು ಮತ್ತಿತರ ಅಗತ್ಯ ವಸ್ತುಗಳ ಮಾರಾಟ ಮಾತ್ರ ಸಾಗಿತ್ತು. 2 ದಿನದಿಂದಲೇ ಕಡೂರು ಬಂದ್ ಹಿನ್ನೆಲೆಯಲ್ಲಿ ಕರಪತ್ರದೊಂದಿಗೆ ಪ್ರತಿ ಹೊಟೇಲ್, ಅಂಗಡಿಗಳಿಗೆ ತೆರಳಿ ಬಂದ್‌ಗೆ ಸಹಕರಿಸುವಂತೆ ಕಾರ್ಯಕರ್ತರು ಕೋರಿದರು. ವರ್ತಕರು, ಸಾರ್ವಜನಿಕರು ಕರೆಗೆ ಸಹಕರಿಸಿದರು.
ಪಟ್ಟಣದ ಸರ್ಕಾರಿ ಪದವಿ ಕಾಲೇಜು, ಸರ್ಕಾರಿ ಪದವಿಪೂರ್ವ ಕಾಲೇಜು, ಪ್ರೌಢಶಾಲೆಗಳು, ಖಾಸಗಿ ಶಾಲೆಗಳಾದ ದೀಕ್ಷಾ, ಹೈವೇ, ಎಂ.ಎಸ್.ಆರ್ ಸೇರಿದಂತೆ ಅನೇಕ ಸರ್ಕಾರಿ ಮತ್ತು ಖಾಸಗಿ ಶಾಲಾ- ಕಾಲೇಜುಗಳು ಮುಚ್ಚಿದ್ದವು. ಸರ್ಕಾರಿ ಕಚೇರಿಗಳು, ಬ್ಯಾಂಕುಗಳು ಹಾಗೂ ನ್ಯಾಯಾಲಯ ಕಾರ್ಯ ಚಟುವಟಿಕೆ ನಡೆದವು.
ಇದೇ ಸಂದರ್ಭ ಪಟ್ಟಣದಾದ್ಯಂತ ಮೆರವಣಿಗೆ ನಡೆಸಿ ರಾಜ್ಯ ಮತ್ತು ಕೇಂದ್ರದ ಕಾಂಗ್ರೆಸ್ ಸರ್ಕಾರದ ವಿರುದ್ಧ ಪ್ರತಿಭಟಿಸಿದ ಬಿಜೆಪಿ ನಾಯಕರು ಕೆ.ಎಲ್.ವಿ. ವೃತ್ತದಲ್ಲಿ ಘೋಷಣೆ ಕೂಗಿದರು.
ಪ್ರತಿಭಟನೆಯಲ್ಲಿ ತಾಲೂಕು ಬಿಜೆಪಿ ಅಧ್ಯಕ್ಷ ಕೆ.ಎಚ್.ಶಂಕರ್ ಮಾತನಾಡಿ, ಕಡೂರು ತಾಲೂಕು ಬರಕ್ಕೆ ತುತ್ತಾಗಿದ್ದು, ಸಿದ್ದರಾಮಯ್ಯನವರು ಕಡೂರು ಬರಪೀಡಿತ ತಾಲೂಕು ಪಟ್ಟಿಯಿಂದ ಕೈ ಬಿಟ್ಟಿರುವುದು ಖಂಡನೀಯ.  ಕಡೂರು ವಿಧಾನಸಭಾ ಕ್ಷೇತ್ರದಲ್ಲಿ ಸಮಸ್ಯೆಗಳಿವೆ. ಸ್ಥಳೀಯ ಶಾಸಕ ವೈ.ಎಸ್.ವಿ. ದತ್ತ ಕ್ಷೇತ್ರದ ಶಾಸಕರಾಗಿ ಬೆಂಗಳೂರಿನಲ್ಲಿದ್ದಾರೆ. 15 ದಿನಕ್ಕೊಮ್ಮೆ ಕ್ಷೇತ್ರಕ್ಕೆ ಬಂದು ಹೋಗುವ ಮೂಲಕ ಕೇವಲ ಕಾರ್ಯಕ್ರಮಗಳಿಗೆ ಸೀಮಿತಗೊಳಿಸಿಕೊಂಡಿದ್ದಾರೆ. ಸಮಸ್ಯೆಗಳ ಬಗ್ಗೆ ಗಮನಹರಿಸದೆ ಕ್ಷೇತ್ರದ ಅಭಿವೃದ್ಧಿ ಬಗ್ಗೆ ಯಾವುದೇ ರೀತಿ ಗಮನಹರಿಸದೆ ಸ್ಥಳೀಯ ಸಮಸ್ಯೆಗಳಿಗೆ ಗಮನಕೊಡುತ್ತಿಲ್ಲ ಎಂದರು.
ಮಾಜಿ ಶಾಸಕ ಡಾ. ವೈ.ಸಿ. ವಿಶ್ವನಾಥ್ ಮಾತನಾಡಿ, ಹೆಬ್ಬೆ ತಿರುವು ಯೋಜನೆ ಮತ್ತು ಎತ್ತಿನಹೊಳೆ ಯೋಜನೆಗೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ತಾತ್ವಿಕ ಅನುಮೋದನೆ ಸಿಕ್ಕಿದೆ. ರಾಜ್ಯದ ಕಾಂಗ್ರೆಸ್ ಸರ್ಕಾರ ಈ ಯೋಜನೆಗಳ ಜಾರಿಗೆ ಕೂಡಲೇ ಕ್ರಮ ಕೈಗೊಳ್ಳಬೇಕು.
ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಅರೇಕಲ್ ಪ್ರಕಾಶ್, ನಗರ ಘಟಕದ ಅಧ್ಯಕ್ಷ ಎ.ಮಣಿ ಮಾತನಾಡಿದರು. ತಹಸೀಲ್ದಾರ್ ಮೂಲಕ ರಾಜ್ಯಪಾಲರು ಹಾಗೂ ರಾಷ್ಟ್ರಪತಿಗಳಿಗೆ ಮನವಿ ಅರ್ಪಿಸಲಾಯಿತು.
ಬಿಜೆಪಿ ನಗರ ಘಟಕದ ಅಧ್ಯಕ್ಷ ಎ.ಮಣಿ, ಜಿಲ್ಲಾ ಕಾರ್ಯದರ್ಶಿ ಪ್ರಕಾಶ್, ತಾ.ಪ. ಸದಸ್ಯ ಶಿವಕುಮಾರ್, ಪುರಸಭಾ ಸದಸ್ಯ ರಾಜೇಶ್, ತಾಲೂಕು ಕಾರ್ಯದರ್ಶಿ ಬಂಕ್ ಮಂಜು, ಜಿಗಣೇಹಳ್ಳಿ ಮಂಜುನಾಥ್, ಕುರುಬಗೆರೆ ಮಹೇಶ್, ಸುರೇಶ್, ಶ್ರೀನಿವಾಸ್, ಪ್ರಕಾಶ್, ಸೋಮಯ್ಯ ಇದ್ದರು.

ಖಾಗ್ರಿ ಯೋಜನೆ: ಸಂಚಾರಿ ವಾಹನಕ್ಕೆ ಚಾಲನೆ
ನರಸಿಂಹರಾಜಪುರ:  ತಾಲೂಕಿನ ಕಾನೂರು ಗ್ರಾಮ ಪಂಚಾಯ್ತಿಗೆ ಆಗಮಿಸಿದ ರಾಷ್ಚೀಯ ಉದ್ಯೋಗ ಖಾತ್ರಿ ಯೋಜನೆಯ ಬಗ್ಗೆ ಮಾಹಿತಿ ನೀಡುವ ಸಂಚಾರಿ ವಾಹನಕ್ಕೆ ಕಾನೂರು ಗ್ರಾಮ ಪಂಚಾಯ್ತಿ ಅಧ್ಯಕ್ಷೆ ರಂಜಿತ ಶುಕ್ರವಾರ ಚಾಲನೆ ನೀಡಿದರು.ಗ್ರಾಪಂ ಉಪಾಧ್ಯಕ್ಷ ತಮ್ಮಯ್ಯ, ಪಿಡಿಓ ಶ್ರೀನಿವಾಸ್, ಕಾರ್ಯದರ್ಶಿ ಪ್ರೇಂಕುಮಾರ್, ಸದಸ್ಯರು, ರಾಷ್ಚೀಯ ಉದ್ಯೋಗ ಖಾತ್ರಿ ಯೋಜನೆಯ ಗ್ರಾಮಸ್ಥರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.