ಚಿಕ್ಕಮಗಳೂರು

'ಪರಿಸರ ಸಂರಕ್ಷಣೆ ಜಾಗತಿಕ ಹೊಣೆಗಾರಿಕೆ'

Published On :

ಚಿಕ್ಕಮಗಳೂರು: ಪರಿಸರ ಸಂರಕ್ಷಣೆ ಜಾಗತಿಕ ಹೊಣೆಗಾರಿಕೆ. ವಾಯುಮಾಲಿನ್ಯ ತಡೆಗಟ್ಟಲು ಯುವಜನತೆ ಕಂಕಣಬದ್ಧರಾಗಬೇಕು. ಗುಡ್ಡ, ಬೆಟ್ಟಗಳ ಹಸಿರು ರಾಶಿಯನ್ನು ಕಾಪಾಡುವ ಪ್ರತಿಜ್ಞೆ ಕೈಗೊಳ್ಳಬೇಕೆಂದು ಜಿ.ಪಂ. ಅಧ್ಯಕ್ಷೆ ರೇಖಾ ಹುಲಿಯಪ್ಪಗೌಡ ಕರೆ ನೀಡಿದ್ದಾರೆ.  
ನಗರದ ಐ.ಡಿ.ಎಸ್.ಜಿ. ಪ್ರಥಮ ದರ್ಜೆ ಕಾಲೇಜಿನ ಭಾರತ ಸ್ಕೌಟ್ಸ್ ಮತ್ತು ಗೈಡ್ಸ್‌ನ ರೋವರ್ಸ್ ಮತ್ತು ರೇಂಜರ್ಸ್ ಘಟಕಗಳಿಂದ ಪರಿಸರ ಸಂರಕ್ಷಣೆ ಕುರಿತು ಜನಜಾಗೃತಿ ಮೂಡಿಸಲು ಸೈಕಲ್ ಜಾಥವನ್ನು ಕಾಲೇಜು ಆವರಣದಲ್ಲಿ ಗುರುವಾರ ಉದ್ಘಾಟಿಸಿ ಮಾತನಾಡಿದ ಅವರು, ಪ್ರಕೃತಿಯ ಅನೇಕ ವೈರುಧ್ಯಗಳಿಗೆ ಪರಿಸರ ಸಂರಕ್ಷಣೆಯೇ ಉತ್ತರ ಎಂದರು.
ವಿಪರೀತ ವಾಯುಮಾಲಿನ್ಯ: ವೇಗದ ಯುಗದಲ್ಲಿ ವಾಹನಗಳ ಬಳಕೆ ಹಾಗೂ ಕೈಗಾರಿಕೆಗಳಿಂದಾಗಿ ವಿಪರೀತ ವಾಯುಮಾಲಿನ್ಯ ಉಂಟಾಗುತ್ತಿದೆ. ಬೈಸಿಕಲ್‌ಗಳನ್ನು ಹೆಚ್ಚಾಗಿ ಬಳಸುವುದರಿಂದ ಇಂಧನ ಉಳಿಸುವುದರ ಜೊತೆಗೆ ವಾಯು ಮಾಲಿನ್ಯವನ್ನು ನಿಯಂತ್ರಿಸಬಹುದು. ಚೀನಾದಲ್ಲಿ ಬೈಸಿಕಲ್‌ಗಳ ಬಳಕೆ ವ್ಯಾಪಕವಾಗಿದ್ದು, ಇದಕ್ಕಾಗಿಯೇ ವಿಶೇಷ ಪಥಗಳನ್ನು ಮೀಸಲಿಟ್ಟಿದ್ದಾರೆ ಎಂದ ಅವರು, ನಮ್ಮ ವಿದ್ಯಾರ್ಥಿ ಯುವಜನರು ಇತರೆ ವಾಹನಗಳಿಗಿಂತ ಬೈಸಿಕಲ್‌ಗಳನ್ನು ಬಳಸಬೇಕು.  ಎಂದು ಹೇಳಿದರು. ಸ್ಕೌಟ್ಸ್ ಮತ್ತು ಗೈಡ್ಸ್ ಜೀವನದ ಒಂದು ಸರಳ ಸಂಹಿತೆ ಆಗಿದ್ದು, ಸಮಾಜಕ್ಕೆ ಮತ್ತು ದೇಶಕ್ಕೆ ರಚನಾತ್ಮ ಕೊಡುಗೆ ನೀಡುವಂತೆ ಉತ್ತೇಜಿಸುತ್ತದೆ ಎಂದರು.
ಕಾಲೇಜು ಪ್ರಾಂಶುಪಾಲೆ ಡಾ. ಜರೀನಾ ಕೌಸರ್ ಅಧ್ಯಕ್ಷತೆ ವಹಿಸಿದ್ದರು, ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷ ತಮ್ಮಯ್ಯ, ಕಾರ್ಯಾಧ್ಯಕ್ಷ ಬಿ.ಎಚ್. ನರೇಂದ್ರ ಪೈ, ವಿವಿಧ ವಿಭಾಗಗಳ ಮುಖ್ಯಸ್ಥರಾದ ಡಾ. ರಾಜಣ್ಣ, ಡಾ. ಸುಂದರೇಶ್ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.