ಚಿಕ್ಕಮಗಳೂರು

ಮೆಸ್ಕಾಂ ನಿರ್ಲಕ್ಷ್ಯ ಖಂಡಿಸಿ ಪ್ರತಿಭಟನೆ

Published On :

ಸಖರಾಯಪಟ್ಟಣ: ಅನಿಯಮಿತ ವಿದ್ಯುತ್ ನಿಲುಗಡೆ ಹಾಗೂ ಮೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆ ವಿರುದ್ಧ ಸಖರಾಯಪಟ್ಟಣದಲ್ಲಿ ಗುರುವಾರ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಪ್ರತಿಭಟನೆ ನಡೆಸಿದರು.
  ಕರ್ನಾಟಕ ರಕ್ಷಾಣಾ ವೇದಿಕೆಯ ನೇತೃತ್ವದಲ್ಲಿ ಶಾಲಾ ಕಾಲೇಜು ವಿದ್ಯಾರ್ಥಿ, ಸಾರ್ವಜನಿಕರು ಪಟ್ಟಣದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ ನಂತರ ಮೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿ ಧರಣಿ ನಡೆಸಿದರು.
ಇಡೀ ಪಟ್ಟಣ ಕತ್ತಲಲ್ಲಿ: ಈ ಸಂದರ್ಭದಲ್ಲಿ ಮಾತನಾಡಿದ ಕರವೇ ಹೋಬಳಿ ಅಧ್ಯಕ್ಷ ದಿನೇಶ್ ಶಿವಪುರ, ಮೆಸ್ಕಾಂ ಅಧಿಕಾರಿಗಳ ಬೇಜವಾಬ್ದಾರಿತನದಿಂದಾಗಿ ವಿದ್ಯುತ್ ಇಲ್ಲದೆ ಇಡೀ ಪಟ್ಟಣ ಕತ್ತಲಲ್ಲಿ ಮುಳುಗಿದೆ. ಇದರ ಪರಿಣಾಮ ಜನ ಮತ್ತು  ಜಾನುವಾರುಗಳಿಗೆ ಕುಡಿಯಲು ನೀರಿಲ್ಲದಂತಾಗಿದೆ. ಪರೀಕ್ಷೆಗಳು ಸಮೀಪಿಸುತ್ತಿದ್ದು, ವಿದ್ಯಾರ್ಥಿಗಳು ಪರದಾಡುವಂತಾಗಿದೆ ಎಂದು ಆರೋಪಿಸಿದರು.
ತೀವ್ರ ತರಾಟೆ: ಸ್ಥಳಕ್ಕಾಗಮಿಸಿದ ಜೂನಿಯರ್ ಇಂಜಿನಿಯರ್ ರಾಘವೇಂದ್ರ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡ ಗ್ರಾ.ಪಂ. ಅಧ್ಯಕ್ಷೆ ಸುಮಿತ್ರಮ್ಮ, ಉಪಾಧ್ಯಕ್ಷ ಮೋಹನ್ ಕುಮಾರ್ ಸೇರಿದಂತೆ ಸಾರ್ವಜನಿಕರು ಇಡೀ ದಿನ ಕರೆಂಟ್ ತೆಗೆದರೆ ಪರೀಕ್ಷೆ ಎದುರಿಸಬೇಕಾದ ವಿದ್ಯಾರ್ಥಿಗಳು ಏನು ಮಾಡಬೇಕು ಎಂದು ಪ್ರಶ್ನಿಸಿದರು.
   ಸುತ್ತ ಮುತ್ತಲ ಗ್ರಾಮಗಳಲ್ಲಿ ಕರೆಂಟ್ ಇರುತ್ತದೆ. ಆದರೆ, ಸಖರಾಯಪಟ್ಟಣದಲ್ಲಿ ಮಾತ್ರ ಏಕೆ ನಿಲುಗಡೆಯಾಗುತ್ತದೆ. ವಿದ್ಯುತ್ ಬಗ್ಗೆ ಮಾಹಿತಿಗಾಗಿ ದೂರವಾಣಿ ಕರೆ ಮಾಡಿದರೆ ಏಕೆ ಸ್ವೀಕರಿಸುವುದಿಲ್ಲ ಎಂದು ಪ್ರಶ್ನಿಸಿದ ಮುಖಂಡರು, ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಸ್ಪಷ್ಟ ಉತ್ತರ ನೀಡುವವರೆಗೆ ಪ್ರತಿಭಟನೆ ಕೈಬಿಡುವುದಿಲ್ಲ ಎಂದು ಪಟ್ಟು ಹಿಡಿದರು.
ಕಚೇರಿ ಮುಚ್ಚಿ: ಕಡೂರಿನಿಂದ ಸ್ಥಳಕ್ಕಾಗಮಿಸಿ ಪ್ರತಿಭಟನೆ ಕೈಬಿಡುವಂತೆ ಮನ ವೊಲಿಸಲು ಮುಂದಾದ ಸಹಾಯಕ ಕಾರ್ಯಪಾಲಕ ಅಭಿಯಂತ ಪರುಶುರಾಮಪ್ಪ ಅವರನ್ನು ಸುತ್ತುವರೆದು ವಾಗ್ವಾದ ನಡೆಸಿದ ಸಾರ್ವಜನಿಕರು ಸಮರ್ಪಕವಾಗಿ ಕರೆಂಟ್ ನೀಡಲಾಗದಿದ್ದರೆ ಕಚೇರಿ ಮುಚ್ಚಿ ಎಂದು ಆಕ್ರೋಶ ವ್ಯಕ್ತಪಸಿದರು.
ವಿದ್ಯುತ್ ಸಮಸ್ಯೆಯನ್ನು ಸರಿಪಡಿಸದಿದ್ದಲ್ಲಿ ವಿದ್ಯುತ್ ಶುಲ್ಕವನ್ನು ಪಾವತಿಸುವುದಿಲ್ಲ, ವಿದ್ಯಾರ್ಥಿಗಳ ಭವಿಷ್ಯದ ದೃಷ್ಠಿಯಿಂದ ಪ್ರತಿದಿನ ಕನಿಷ್ಠ ಸಂಜೆ 6 ರಿಂದ 10 ಗಂಟೆಯ ವರೆಗೆ ಕರೆಂಟ್ ಒದಗಿಸುವಂತೆ ಆಗ್ರಹಿಸಿದರು.
   ಅಂತಿಮವಾಗಿ ಪ್ರತಿದಿನ ಸಂಜೆ 7 ರಿಂದ 9 ರವರೆಗೆ ವಿದ್ಯುತ್ ನೀಡುವ ಭರವಸೆ ದೊರೆತ ಹಿನ್ನೆಲೆಯಲ್ಲಿ ಪ್ರತಿಭಟನೆಯನ್ನು ಕೈಬಿಡಲಾಯಿತು.
ಕರವೇ ಹೋಬಳಿ ಉಪಾಧ್ಯಕ್ಷ ಎಸ್.ಎಸ್. ನಂದೀಶ್, ಕಾರ್ಯದರ್ಶಿ ಚೇತನ್ ಪ್ರಕಾಶ್, ದೇವನೂರು ಕುಮಾರ್, ರಿಜ್ವಾನ್, ಅಪ್ಪು, ಸತೀಶ್, ರತ್ನಾಕರ್ ಮತ್ತು ಅನ್ವರ್ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.