110 ಬೋರ್ಗಳಲ್ಲಿ ಗಡಸು ನೀರು
ಚಿಕ್ಕಮಗಳೂರು: ಪ್ರಕೃತಿ ವಿಕೋಪಕ್ಕೆ ಪದೇ ಪದೇ ಗುರಿಯಾಗುತ್ತಿರುವ ಚಿಕ್ಕಮಗಳೂರು ಜಿಲ್ಲೆಯಲ್ಲಿ ಒಂದೆಡೆ ಕುಡಿಯುವ ನೀರಿನ ಹಾಹಾಕಾರ ಎದುರಾಗಿದೆ. ಇನ್ನು ಕೆಲವೆಡೆ ಪ್ಲೋರೈಡ್ ಹಾಗೂ ಕಬ್ಬಿಣಾಂಶದ ನೀರು ಸಮಸ್ಯೆಯಾಗಿ ಕಾಡುತ್ತಿದೆ.
ಮಲೆನಾಡಿನ ತಪ್ಪಲಿನಲ್ಲಿ ಸದಾ ಹಚ್ಚ ಹಸಿರಾಗಿರುವ ಶೋಲಾ ಕಾಡುಗಳಲ್ಲಿ ಹರಿಯುವ ಝರಿಗಳು ನೋಡುಗರನ್ನು ಆಕರ್ಷಿಸುತ್ತವೆ. ಇಲ್ಲಿನ ನೀರು ಮತ್ತೆ ಮತ್ತೆ ಕುಡಿಯಬೇಕೆಂದೆನಿಸುತ್ತದೆ. ಬಹಳಷ್ಟು ಪ್ರವಾಸಿಗರು ಈ ನೀರನ್ನು ಇಷ್ಟಪಡುತ್ತಾರೆ. ಇಲ್ಲಿ ವಾಸವಾಗಿರುವ ಜನರು ಕುಡಿಯಲು ಇದೇ ನೀರನ್ನು ಅವಲಂಬಿಸಿದ್ದಾರೆ.
ಇಲ್ಲಿ ಅಘಾತಕಾರಿ ವಿಷಯವೆಂದರೆ ಚಿಕ್ಕಮಗಳೂರು ಜಿಲ್ಲೆಯಲ್ಲಿ 118 ನೀರಿನ ಮೂಲಗಳಲ್ಲಿ ಪ್ಲೋರೈಡ್ ಹಾಗೂ ಕಬ್ಬಿಣಾಂಶದ ನೀರಿದೆ. ಇವುಗಳಲ್ಲಿ 110 ಕೊಳವೆ ಬಾವಿಗಳು ಇನ್ನುಳಿದಂತೆ ಇತರೆ ಮೂಲಗಳು. ಪಂಚಾಯತ್ರಾಜ್ ಎಂಜಿನಿಯರಿಂಗ್ ಇಲಾಖೆ ಪ್ಲೋರೈಡ್ಯುಕ್ತ ಹಾಗೂ ಕಬ್ಬಿಣಾಂಶದ ನೀರಿರುವ ಮೂಲಗಳನ್ನು ಪತ್ತೆ ಹಚ್ಚಿದ್ದಾರೆ.
ಇವುಗಳಲ್ಲಿ ಚಿಕ್ಕಮಗಳೂರು ತಾಲೂಕೊಂದರಲ್ಲೇ 75 ಬೋರ್ವೆಲ್ಗಳು ಇನ್ನುಳಿದಂತೆ ಕಡೂರು ತಾಲೂಕಿನಲ್ಲಿ 16, ತರೀಕೆರೆ ತಾಲೂಕಿನಲ್ಲಿ 19 ಇನ್ನುಳಿದಂತೆ ಮಲೆನಾಡಿನ ತಾಲೂಕುಗಳಾದ ಕೊಪ್ಪದಲ್ಲಿ 1, ಮೂಡಿಗೆರೆಯಲ್ಲಿ 3, ಎನ್.ಆರ್.ಪುರದಲ್ಲಿ 2, ಶೃಂಗೇರಿಯಲ್ಲಿ 2 ಬೋರ್ವೆಲ್ಗಳನ್ನು ಪತ್ತೆ ಹಚ್ಚಲಾಗಿದೆ. ಆ ನೀರನ್ನು ಬಳಸದಂತೆ ಸಂಬಂಧಿತ ಬೋರ್ವೆಲ್ಗಳ ಮೇಲೆ ನೀರನ್ನು ಕುಡಿಯಲು ಬಳಸದಂತೆ ನಾಮಫಲಕ ಹಾಕಿದ್ದಾರೆ. ಇನ್ನುಳಿದಂತೆ ಇತರೆ ಉಪಯೋಗಕ್ಕೆ ಈ ನೀರು ಬಳಸಬಹುದು.
550 ಅಡಿ ಆಳ: ಬರಪೀಡಿತ ತರೀಕೆರೆ ಹಾಗೂ ಕಡೂರು ತಾಲೂಕುಗಳಲ್ಲಿ ನೀರಿನ ಅಂತರ್ಜಲ ಮಟ್ಟ ಕುಸಿದಿದೆ. ಇವೆರಡು ತಾಲೂಕುಗಳಲ್ಲಿ 550 ಅಡಿಗಳಷ್ಟು ಬೋರ್ವೆಲ್ ಕೊರೆಸಿದರೂ ಸಮರ್ಪಕವಾಗಿ ನೀರು ಸಿಗುತ್ತಿಲ್ಲ. 2001ರಲ್ಲಿ ಇದೇ ಪರಿಸ್ಥಿತಿ ನಿರ್ಮಾಣಗೊಂಡಿತ್ತು. ಕಳೆದ ವರ್ಷ ಮುಂಗಾರು ಮಳೆ ಕೈಕೊಟ್ಟಿದ್ದರಿಂದ ಬರಗಾಲ ಬಂದಿದ್ದು, ನೀರಿನ ಅಂತರ್ಜಲ ಮಟ್ಟ ಕುಸಿದಿದೆ.
106 ಗ್ರಾಮ: ಮುಂದಿನ ದಿನಗಳಲ್ಲಿ ಜಿಲ್ಲೆಯ 106 ಗ್ರಾಮಗಳಲ್ಲಿ ಕುಡಿಯುವ ನೀರಿನ ತೊಂದರೆ ಕಾಣಿಸಿಕೊಳ್ಳಲಿದೆ ಎಂದು ಪಂಚಾಯತ್ರಾಜ್ ಎಂಜಿನಿಯರ್ನ ಕಾರ್ಯಪಾಲಕ ಅಭಿಯಂತರರಾದ ಎಂ.ಡಿ. ಮುದ್ದುಕೃಷ್ಣಮೂರ್ತಿ ತಿಳಿಸಿದ್ದಾರೆ.
ನೀರಿನ ಕೊರತೆ ನೀಗಿಸಲು ಸುಮಾರು ರು. 107 ಲಕ್ಷ ಅಗತ್ಯತೆ ಇದೆ. ಈ ಸಂಬಂಧ ರಾಜ್ಯ ಸರ್ಕಾರಕ್ಕೆ ಹಣ ಬಿಡುಗಡೆ ಕೋರಿ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಹೇಳಿದ್ದಾರೆ.
ಬರ ನಿರ್ವಹಣೆಯಲ್ಲಿ ಬಿಡುಗಡೆಯಾದ ಅನುದಾನದಲ್ಲಿ ತರೀಕೆರೆ ತಾಲೂಕಿನಲ್ಲಿ 62, ಕಡೂರಿನಲ್ಲಿ 144 ಹಾಗೂ ಚಿಕ್ಕಮಗಳೂರು ತಾಲೂಕಿನಲ್ಲಿ 24 ಬೋರ್ವೆಲ್ ಕೊರೆಸಲಾಗಿದೆ. ಶೇ.90ರಷ್ಟು ಬೋರ್ವೆಲ್ಗಳಲ್ಲಿ ನೀರು ಬಂದಿದೆ ಎಂದಿದ್ದಾರೆ.
ಕುಡಿವ ನೀರು ಸರಬರಾಜಿಗೆ ವಿದ್ಯುತ್ ಸಂಪರ್ಕ ಬೇಕಾಗಿದೆ. ಚಿಕ್ಕಮಗಳೂರು ತಾಲೂಕಿನಲ್ಲಿ 28, ಮೂಡಿಗೆರೆಯಲ್ಲಿ 15, ಕೊಪ್ಪದಲ್ಲಿ 3 ಹಾಗೂ ಎನ್.ಆರ್.ಪುರ ತಾಲೂಕಿನಲ್ಲಿ 16 ಕಾಮಗಾರಿಗೆ ವಿದ್ಯುತ್ ಸಂಪರ್ಕ ಸಿಗಬೇಕಾಗಿದೆ. ಈ ಕೆಲಸ ಪ್ರಗತಿಯಲ್ಲಿದೆ ಎಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

