ಸಾಧನೆಗೆ ಏಕಾಗ್ರತೆ ಅಗತ್ಯ
ನರಸಿಂಹರಾಜಪುರ: ಗ್ರಾಮ ದೇವತೆಯಾದ ಮಾರಿಕಾಂಬಾ ಅತ್ಯಂತ ಶಕ್ತಿ ದೇವತೆಯಾಗಿದ್ದಾಳೆ ಎಂದು ಶೃಂಗೇರಿಯ ಆದಿಚುಂಚನಗಿರಿ ಶಾಖಾ ಮಠದ ಗುಣನಾಥ ಶ್ರೀಗಳು ತಿಳಿಸಿದರು.
ಅವರು ಶುಕ್ರವಾರ ನೂತನವಾಗಿ ನಿರ್ಮಾಣಗೊಳ್ಳಲಿರುವ ಮಾರಿಕಾಂಬ ದೇವಸ್ಥಾನದ ಭೂಮಿ ಪೂಜೆ ಹಾಗೂ ಶಿಲಾನ್ಯಾಸ ನೆರವೇರಿಸಿ ನಂತರ ನಡೆದ ಧಾರ್ಮಿಕ ಸಭೆಯ ಸಾನ್ನಿಧ್ಯ ವಹಿಸಿ ಆಶೀರ್ವಾಚನ ನೀಡಿದರು.
ನಮ್ಮ ದುಡಿಮೆಯಲ್ಲಿ ಸ್ವಲ್ಪ ಭಾಗವನ್ನಾದರೂ ದಾನ, ಧರ್ಮಕ್ಕೆ ಮೀಸಲಿಡಬೇಕು. ಯಾವುದೇ ಕೆಲಸವನ್ನಾದರೂ ಶ್ರದ್ಧೆ, ಏಕಾಗ್ರತೆಯಿಂದ ಮಾಡಿದರೆ ಯಶಸ್ಸು ಕಾಣಬಹುದು ಎಂದ ಅವರು, ಈ ಭೂಮಿಯ ಮೇಲೆ ಯಾರೂ ಶಾಶ್ವತರಲ್ಲ. ಭಗವಂತ ಮಾತ್ರ ಶಾಶ್ವತವಾಗಿರುತ್ತಾನೆ. ಮೋಕ್ಷ ಪಡೆಯಲು ಒಂದೊಂದೇ ಮೆಟ್ಟಿಲು ಏರಬೇಕು ಎಂದು ಅವರು ತಿಳಿಸಿದರು.
ಎಲ್ಲಾ ಧರ್ಮದ ಸಾರವು ಒಂದೇ: ಆದಿಚುಂಚನಗಿರಿ ಶಿವಮೊಗ್ಗ ಶಾಖಾ ಮಠದ ಪ್ರಸನ್ನನಾಥ ಶ್ರೀ ಆಶೀರ್ವಾಚನ ನೀಡಿ, ಎಲ್ಲಾ ಧರ್ಮದ ಸಾರವೂ ಒಂದೇ ಆಗಿದೆ. ಎಲ್ಲಾ ಧರ್ಮಗಳು ಶಾಂತಿಯನ್ನೇ ಬೋಧಿಸುತ್ತದೆ. ಧರ್ಮದ ಆಚರಣೆಯಲ್ಲಿ ಮಾತ್ರ ವಿಭಿನ್ನತೆ ಕಾಣುತ್ತೇವೆ. ದೇವಸ್ಥಾನ ಕಟ್ಟಲು ಶ್ರೀಮಂತ ದಾನಿಗಳ ನೆರವು ಪಡೆಯುತ್ತೇವೆ. ಜೊತೆಗೆ ಆರ್ಥಿಕವಾಗಿ ದುರ್ಬಲರಾಗಿರುವ ಭಕ್ತರ ಅಳಿಲು ಸೇವೆಯನ್ನೂ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಕೋಟೆ ಮಾರಿಕಾಂಬ ದೇವಸ್ಥಾನದ ಸಮಿತಿಯ ಅಧ್ಯಕ್ಷ ಕೆ.ವಿ. ವಸಂತಕುಮಾರ್ ಮಾತನಾಡಿದರು. ಕೋಟೆ ಮಾರಿಕಾಂಬ ದೇವಸ್ಥಾನ ಸಮಿತಿಯ ಕಾರ್ಯದರ್ಶಿ ಕೆ.ಪಿ. ಸುರೇಶ್ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ವಿಪ ಸದಸ್ಯ ಎಂ. ಶ್ರೀನಿವಾಸ್, ತಾಲೂಕು ಒಕ್ಕಗಲಿಗರ ಸಂಘದ ಕಾರ್ಯದರ್ಶಿ ಎಚ್.ಟಿ. ರಾಜೇಂದ್ರ, ಉದ್ಯಮಿ ಹಾಗೂ ದಾನಿ ಮುಂಬಯಿ ಕೃಷ್ಣಮೂರ್ತಿ, ಬಸ್ತಿಮಠದ ವ್ಯವಸ್ಥಾಪಕ ಪ್ರಭಾಕರ ರೈ, ಕಾಫಿ ಬೆಳೆಗಾರ ಎಚ್.ಎನ್. ಚಂದ್ರಶೇಖರ್, ಜಮೀನ್ದಾರ್ ಪ್ರಕಾಶ್ ನಾಡಿಗ್, ಉದ್ಯಮಿ ರಾಜಗೋಪಾಲ ಶ್ರೇಷ್ಠಿ, ವಿವಿಧ ಸಮಾಜದ ಮುಖಂಡರಾದ ಆರ್. ಸದಾಶಿವ, ಸೂಸಲವಾನಿ ವೆಂಕಟೇಶ್, ಎಚ್.ಬಿ. ರಘುವೀರ್, ನಿವೃತ್ತ ಪೊಲೀಸ್ ಅಧಿಕಾರಿ ಧರ್ಮರಾಜ್, ಗ್ರಾಹಕರ ವೇದಿಕೆ ಅಧ್ಯಕ್ಷ ಚಕ್ರಪಾಣಿ, ಮಾನೋರಾಂ, ಪೊದುವಾಳ್, ಡಿ.ಕೆ. ಗಂಗಾಧರ್, ಎಲ್. ನಾಗರಾಜ್, ಕೆ. ಅಣ್ಣಪ್ಪ, ಕೆ.ಎಚ್. ಮಂಜುನಾಥಯ್ಯ, ಚಂದ್ರಪ್ಪ, ರತ್ನೇಶ್, ಜಿ. ರಾಮಚಂದ್ರ, ಅರುಣ್ ಕುಮಾರ್, ಎಸ್. ರಂಗಣ್ಣ, ಇ. ನಾಗರಾಜ್ ಮೊದಲಾದವರು ಇದ್ದರು.
ಹರಿಹರಪುರ ಪ್ರಬೋಧಿನಿ ಗುರುಕುಲದವರು ವೇದಘೋಷ ಮಾಡಿದರು. ಎಂ.ಸಿ. ಸುಮ ಸ್ವಾಗತಿಸಿದರು. ಕೆ.ಪಿ. ಸುರೇಶ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಪ್ರಶಾಂತ ಶೆಟ್ಟಿ ವಂದಿಸಿದರು. ಬೆಳಗ್ಗೆ ಆಗಮಿಸಿದ ಶೃಂಗೇರಿಯ ಆದಿಚುಂಚನಗಿರಿ ಶಾಖಾ ಮಠದ ಗುಣನಾಥ ಶ್ರೀಗಳಿಗೆ ಉಮಾ ಮಹೇಶ್ವರ ದೇವಸ್ಥಾನದ ಸಮೀಪ ಮಹಿಳೆಯರು ಪೂರ್ಣಕುಂಭದೊಂದಿಗೆ ಸ್ವಾಗತಿಸಿದರು.
ನಂತರ ಮಂಗಳವಾದ್ಯದೊಂದಿಗೆ ಶ್ರೀಗಳನ್ನು ಮೆರವಣಿಗೆಯಲ್ಲಿ ಕರೆತರಲಾಯಿತು. ಸಭಾ ಕಾರ್ಯಕ್ರಮದ ನಂತರ ಕೋಟೆ ಆಂಜನೇಯ ದೇವಸ್ಥಾನದಲ್ಲಿ ಶ್ರೀಗಳಿಗೆ ಪಾದಪೂಜೆ ನಡೆಸಲಾಯಿತು.
ಶೃಂಗೇರಿ ಶಾರದಾ ಪೀಠ ಮತ್ತು ಬಸ್ತಿಮಠದ ಜ್ವಾಲಾಮಾಲಿನಿ ಅತಿಶಯ ಕ್ಷೇತ್ರದಿಂದ ಭಕ್ತರಿಗೆ ಅನ್ನಪ್ರಸಾದ ಏರ್ಪಡಿಸಲಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

