ಚಿಕ್ಕಮಗಳೂರು

ಮುಗಿಯಿತು ನಾಮಪತ್ರ ಸಲ್ಲಿಕೆ

Published On :

ಚಿಕ್ಕಮಗಳೂರು: ನಗರ ಸ್ಥಳೀಯ ಸಂಸ್ಥೆಗಳಿಗೆ ನಾಮಪತ್ರ ಸಲ್ಲಿಸುವ ಪ್ರಕ್ರಿಯೆ ಶನಿವಾರ ಮಧ್ಯಾಹ್ನ 3 ಗಂಟೆಗೆ ಮುಕ್ತಾಯಗೊಂಡಿತು. ಫೆ. 25 ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ.
ಜಿಲ್ಲೆಯ 8 ನಗರ ಸ್ಥಳೀಯ ಸಂಸ್ಥೆಗಳಲ್ಲಿ ಒಟ್ಟು 148 ವಾರ್ಡ್‌ಗಳಿದ್ದು, ಇವುಗಳಿಗೆ 898 ನಾಮಪತ್ರಗಳು ಬಂದಿವೆ.
ಚಿಕ್ಕಮಗಳೂರು ನಗರಸಭೆಯ 35 ಸ್ಥಾನಗಳಿಗೆ 282 ನಾಮಪತ್ರ ಸಲ್ಲಿಸಲಾಗಿದೆ. ಶೃಂಗೇರಿ ಪಪಂನ 11 ಸ್ಥಾನಗಳಿಗೆ 37 ನಾಮಪತ್ರ, ಮೂಡಿಗೆರೆ ಪಪಂನ 11 ಸ್ಥಾನಗಳಿಗೆ 44 ನಾಮಪತ್ರ, ಕೊಪ್ಪ ಪಪಂನ 11 ಸ್ಥಾನಗಳಿಗೆ 42 ನಾಮಪತ್ರ ಸಲ್ಲಿಕೆಯಾಗಿವೆ. ಎನ್.ಆರ್.ಪುರ ಪಪಂನ 11 ಸ್ಥಾನಗಳಿಗೆ 55 ನಾಮಪತ್ರ  ಸಲ್ಲಿಸಲ್ಪಟ್ಟಿವೆ.
168 ನಾಮಪತ್ರ: ತರೀಕೆರೆ ಪುರಸಭೆಯ 23 ಸ್ಥಾನಗಳಿಗೆ 168 ನಾಮಪತ್ರಗಳು ಸಲ್ಲಿಕೆಯಾಗಿದ್ದರೆ, ಕಡೂರು ಪುರಸಭೆಯ 23 ಸ್ಥಾನಗಳಿಗೆ 152 ನಾಮಪತ್ರ ಸ್ವೀಕಾರವಾಗಿದೆ. ಬೀರೂರು ಪುರಸಭೆಯ 23 ಸ್ಥಾನಗಳಿಗೆ 119 ನಾಮಪತ್ರಗಳು ಸಲ್ಲಿಕೆಯಾಗಿವೆ. ಉಮೇದುವಾರಿಕೆ ಹಿಂಪಡೆಯಲು ಫೆ. 27 ಕೊನೆಯ ದಿನವಾಗಿದೆ.
2001ರ ಜನಗಣತಿಯ 2007ರ ಮೀಸಲಾತಿಯ ಪ್ರಕಾರ ಈ ಬಾರಿಯ ಚುನಾವಣೆ ನಡೆಯುತ್ತಿರುವುದರಿಂದ ಹಿಂದಿನ 5 ವರ್ಷಗಳ ಕಾಲ ಸ್ಥಳೀಯ ಸಂಸ್ಥೆಗಳಲ್ಲಿ ಸದಸ್ಯರಾಗಿದ್ದವರೇ ಈಗ  ಮತ್ತೆ ಸ್ಪರ್ಧೆ ಮಾಡಿದ್ದಾರೆ.   
ಕಳೆದ ಬಾರಿ ಅಲ್ಪಮತಗಳ ಅಂತರದಿಂದ ಸೋತವರು ಸಹ ಮತ್ತೆ ಅದೇ ವಾರ್ಡ್‌ಗಳಿಂದ ಸ್ಪರ್ಧೆ ಮಾಡಿದ್ದಾರೆ. ಇನ್ನು ಕೆಲವರು ತಾವು ಅಪೇಕ್ಷಿತ ವಾರ್ಡ್‌ಗಳಿಂದ ತಮ್ಮ ಪಕ್ಷ ಟಿಕೆಟ್ ನೀಡದೇ ಇರುವುದರಿಂದ ಬೇರೆ ಪಕ್ಷಗಳಿಂದ ಸ್ಪರ್ಧೆ ಮಾಡುತ್ತಿದ್ದಾರೆ.
ಕೊನೆಕ್ಷಣ: ಚಿಕ್ಕಮಗಳೂರು ನಗರಸಭೆಯ 35 ವಾರ್ಡ್‌ಗಳಿಗೆ ಬಿಜೆಪಿ ಮೊದಲ ಬಾರಿಗೆ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟ ಮಾಡಿತ್ತು. ಇನ್ನುಳಿದ ವಾರ್ಡ್‌ಗಳಲ್ಲಿ ಹೆಚ್ಚು ಮಂದಿ ಆಕಾಂಕ್ಷಿಗಳಿದ್ದರಿಂದಾಗಿ ಎರಡನೇ ಪಟ್ಟಿಯನ್ನು ಬಹಿರಂಗವಾಗಿ ಪ್ರಕಟ ಮಾಡದೇ ಕೆಲವರನ್ನು ವಿಶ್ವಾಸಕ್ಕೆ ತೆಗೆದು ಪಟ್ಟಿಯನ್ನು ಅಂತಿಮಗೊಳಿಸಿದೆ.
ಆದರೆ, ಕಾಂಗ್ರೆಸ್ ಪಕ್ಷ ಮಾತ್ರ ಜಾಣತನದ ಹೆಜ್ಜೆ ಹಾಕಿದೆ. ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾದ ಶನಿವಾರದಂದು ತನ್ನ ಅಭ್ಯರ್ಥಿಗಳ ವಾರ್ಡ್‌ವಾರು ಪಟ್ಟಿಯನ್ನು ಪ್ರಕಟ ಮಾಡಿದೆ. ಈ ಪಟ್ಟಿ 2 ದಿನ ಮೊದಲೇ ಪ್ರಕಟಿಸಿದ್ದರೆ, ಆಂತರಿಕ ಬಿಕ್ಕಟ್ಟು ಸೃಷ್ಟಿಯಾಗುತ್ತದೆ. ಟಿಕೆಟ್ ಸಿಗದೆ ಇದ್ದವರು ಬೇರೆ ಪಕ್ಷಗಳಿಗೆ ಹೋಗುತ್ತಾರೆ ಎಂಬ ಉದ್ದೇಶದಿಂದ ಕೊನೆ ಕ್ಷಣದಲ್ಲಿ ಪಟ್ಟಿ ಪ್ರಕಟಿಸಿ, ಪಕ್ಷಾಂತರಿಗಳಿಗೆ ಮೂಗುದಾರ ಹಾಕುವ  ಕೆಲಸ ಮಾಡಿದೆ.
ನಗರಸಭೆಯ 35 ವಾರ್ಡ್‌ಗಳ ಪೈಕಿ ಕಾಂಗ್ರೆಸ್ ವಾರ್ಡ್ ಸಂಖ್ಯೆ 5, 22 ಹಾಗೂ 29ರಲ್ಲಿ ತನ್ನ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿಲ್ಲ. ಒಂದು ಮೂಲದ ಪ್ರಕಾರ ಇಲ್ಲಿ ಸ್ವತಂತ್ರವಾಗಿ ಸ್ಪರ್ಧೆ ಮಾಡಿರುವ ಅಭ್ಯರ್ಥಿಗಳಿಗೆ ಬೆಂಬಲ ಸೂಚಿಸುವುದು.
ಆದರೆ, ಇಲ್ಲಿ ಬಿಜೆಪಿಯನ್ನು ಹೊರತುಪಡಿಸಿ ಇತರೆ ಪಕ್ಷಗಳೊಂದಿಗೆ ಆಂತರಿಕ ಒಪ್ಪಂದ ಮಾಡಿಕೊಳ್ಳುವ ಸಾಧ್ಯತೆಯನ್ನು ತಳ್ಳಿ ಹಾಕುವಂತ್ತಿಲ್ಲ. ಇನ್ನುಳಿದಂತೆ ಜೆಡಿಎಸ್ 29 ವಾರ್ಡ್‌ಗಳಲ್ಲಿ ಹಾಗೂ ಕೆಜೆಪಿ 27 ವಾರ್ಡ್‌ಗಳಲ್ಲಿ ಸ್ಪರ್ಧೆ ಮಾಡಿದೆ.
ಚುನಾವಣಾ ವೀಕ್ಷಕರ ಭೇಟಿ: ನಗರ ಸ್ಥಳೀಯ ಸಂಸ್ಥೆ ಚುನಾವಣೆ ಸಂಬಂಧ ವೀಕ್ಷಕರಾಗಿ ನೇಮಕಗೊಂಡಿರುವ ರಾಜ್ಯ ವಕ್ಫ್ ಮಂಡಳಿ ಕಾರ್ಯನಿರ್ವಹಣಾಧಿಕಾರಿ ಎ.ಬಿ. ಇಬ್ರಾಹಿಂ ಅವರು ಶನಿವಾರ ನಗರಕ್ಕೆ ಭೇಟಿ ನೀಡಿದರು.
ಚಿಕ್ಕಮಗಳೂರು ನಗರಸಭೆ, ಕೊಪ್ಪ, ಶೃಂಗೇರಿ ಮತ್ತು ಮೂಡಿಗೆರೆ ಪಟ್ಟಣ ಪಂಚಾಯತ್ ಚುನಾವಣೆಗೆ ವೀಕ್ಷಕರಾಗಿರುವ ಅವರು ಶನಿವಾರದಂದು ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿ ಅವರೊಂದಿಗೆ  ಪೂರ್ವಭಾವಿ ಸಿದ್ಧತೆ ಬಗ್ಗೆ ಸಭೆ ನಡೆಸಿದರು.
ಚುನಾವಣೆ ಸಂಬಂಧ ಸಾರ್ವಜನಿಕರು ದೂರುಗಳೇನಾದರೂ ಇದ್ದಲ್ಲಿ ಚುನಾವಣಾ ವೀಕ್ಷಕರ ಮೊಬೈಲ್  ಸಂಖ್ಯೆ 9480326578 ಸಂಪರ್ಕಿಸಬಹುದು.
ಶಸ್ತ್ರಾಸ್ತ್ರಗಳನ್ನು ಠೇವಣಿ ಇಡಲು ಸೂಚನೆ: ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ಹಿನ್ನೆಲೆಯಲ್ಲಿ ಸಾರ್ವಜನಿಕ ಶಾಂತಿ, ಶಿಸ್ತುಪಾಲನಾ ಮುಂಜಾಗ್ರತಾ ಕ್ರಮವಾಗಿ ಚುನಾವಣೆ ನಡೆಯುವ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಸಾರ್ವಜನಿಕರು ಪರವಾನಗಿ ಹೊಂದಿರುವ ಎಲ್ಲಾ ಶಸ್ತ್ರಾಸ್ತ್ರಗಳನ್ನು  ಸಂಬಂಧಿಸಿದ ಪೊಲೀಸ್ ಠಾಣೆಗಳಲ್ಲಿ ಠೇವಣಿ ಇಡುವಂತೆ ಜಿಲ್ಲಾಧಿಕಾರಿ ವಿ. ಯಶವಂತ್ ಆದೇಶ ಹೊರಡಿಸಿದ್ದಾರೆ.
ಎಲ್ಲಾ ಶಸ್ತ್ರಾಸ್ತ್ರ ಪರವಾನಗಿಗಳನ್ನು ಫೆ. 22ರಿಂದ ಮಾರ್ಚ್ 15 ರವರೆಗೆ ನಿಲಂಬನಾ ಸ್ಥಿತಿಯಲ್ಲಿ ಇರುವಂತೆ ಚಾಲನಾ ರಹಿತಗೊಳಿಸಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.