ಆರ್ಟಿಒ ಕಚೇರಿ ಅವಾಂತರ: ಪರದಾಟ
ಮೂಡಿಗೆರೆ: ಚಿಕ್ಕಮಗಳೂರು ಜಿಲ್ಲೆಯ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ಸಾರ್ವಜನಿಕರಿಗೆ ವಿತರಿಸುವ ಗಣಕೀಕೃತ ಚಾಲನಾ ಪರವಾನಗಿ ಮತ್ತು ನೊಂದಣಿ ಪತ್ರಗಳಲ್ಲಿ ವ್ಯಾಪಕ ವ್ಯತ್ಯಾಸಗಳು ಕಂಡು ಬಂದಿದ್ದು, ಇದರಿಂದ ವಾಹನ ಮಾಲೀಕರು ಹಾಗೂ ಚಾಲನಾ ಪರವಾನಗಿ ಪಡೆದವರು ತೀವ್ರ ತೊಂದರೆ ಎದುರಿಸುವಂತಾಗಿದೆ.
ಸಾರಿಗೆ ಕಚೇರಿಯಿಂದ ವಿತರಿಸುವ ಚಾಲನಾ ಪತ್ರ ಹಾಗೂ ನೊಂದಣಿ ಪತ್ರಗಳಲ್ಲಿ ಮಾಲೀಕರ ಹೆಸರು, ಚಾರ್ಸಿ ಸಂಖ್ಯೆ ಹಾಗೂ ಚಾಲನಾ ಪತ್ರಗಳಲ್ಲಿ ಹೆಸರು, ಇನ್ಸಿಲ್ಗಳು ಡಾಟಾ ಎಂಟ್ರಿ ಮಾಡುವಾಗ ತಪ್ಪು ತಪ್ಪಾಗಿ ನಮೂದಿಸಲಾಗುತ್ತಿದೆ. ಇದನ್ನು ಸರಿಪಡಿಸುವಂತೆ ಕಚೇರಿಯಲ್ಲಿ ವಿಚಾರಿಸಿದರೆ ಪ್ರತಿ ಕಾರ್ಡ್ಗೆ 200 ರು. ಮರು ಪಾವತಿ ಮಾಡುವಂತೆ ನಂತರ 40 ರು.ಗಳ ಅಂಚೆ ಕವರ್ ಅರ್ಜಿಯೊಂದಿಗೆ ಲಗ್ಗತ್ತಿಸುವಂತೆ ಹೇಳಲಾಗುತ್ತಿದೆ ಎಂದು ಎಚ್.ಆರ್. ಮಂಜುನಾಥ್ ಆರೋಪಿಸಿದ್ದಾರೆ.
ಇವರ ಚಾಲನಾ ಪತ್ರದಲ್ಲಿ ಇವರ ತಂದೆಯ ಹೆಸರು ರಾಮೇಗೌಡ ಬದಲು ರಂಗೇಗೌಡ ಎಂದು ನಮೂದಿಸಲಾಗಿದೆ. ಈ ಬಗ್ಗೆ ಸರಿಪಡಿಸುವಂತೆ ಕೋರಿ 200 ರು.ಗಳನ್ನು ಪಾವತಿಸಿ ಹೊಸ ಕಾರ್ಡನ್ನು ಪಡೆಯುವಾಗ ಪುನಃ ರಂಗೇಗೌಡ ಎಂದು ನಮೂದಿಸಿ ನೀಡಿದ್ದಾರೆ ಎಂದು ಆರೋಪಿಸಿದರು. ವಾಹನ ಪರವಾನಗಿ ಪತ್ರದಲ್ಲಿ ಯು.ಸಿ. ನಯನ ಎಂಬವರ ಹೆಸರು ವಿ.ಸಿ. ನಯನ ಎಂದು ನಮೂದಿಸಲಾಗಿದೆ. ವಾಹನದ ನೊಂದಣಿ ಕಾರ್ಡ್ನಲ್ಲಿ ಕೆ.ಎಸ್. ಇಬ್ರಾಹಿಂ ಎಂಬ ಹೆಸರು ಬದಲು ಇರಾಯಿಂ ಎಂದು ನಮೂದಿಸಲಾಗಿದೆ.
ನಾಲ್ಕು ಚಕ್ರದ ವಾಹನದ ಮಾಲೀಕ ನೊಂದಣಿ ಕಾರ್ಡ್ ಮಾಡಿಸುವಾಗ ಚಾರ್ಸಿ ಸಂಖ್ಯೆಯನ್ನು ತಪ್ಪಾಗಿ ನಮೂದಿಸಲಾಗಿದೆ. ಈ ರೀತಿ ಇಲಾಖೆಯ ಬೇಜವಾಬ್ದಾರಿಯಿಂದ ನಮೂದಿಸಿದ ಕಾರ್ಡ್ಗಳ ಮಾಲೀಕರ ವಾಹನಗಳು ಅಪಘಾತಕ್ಕೀಡಾದರೆ ವಿಮಾ ಕಂಪನಿಗಳು ವಿಮೆ ನೀಡಲು ನಿರಾಕರಿಸುವ ಸಾಧ್ಯತೆಗಳಿವೆ.
ಆದ್ದರಿಂದ ಡಾಟಾ ಎಂಟ್ರಿ ಮಾಡುವಾಗ ತಪ್ಪಾಗಿ ನಮೂದಿಸುವ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳುವುದರ ಜೊತೆಗೆ ಬೇಜವಾಬ್ದಾರಿಯಿಂದ ಮಾಡಿದ ತಪ್ಪಿಗಾಗಿ ಅದನ್ನು ಸರಿಪಡಿಸಿಕೊಳ್ಳಲು 200 ರು.ಗಳನ್ನು ವಾಹನ ಪರವಾನಗಿ ಪಡೆದವರ ಹಾಗೂ ಮಾಲೀಕರ ಮೇಲೆ ಹೊರೆ ಹಾಕದಂತೆ ಉಚಿತವಾಗಿ ಸರಿಪಡಿಸಿಕೊಡಬೇಕು.
ಅಲ್ಲದೆ ಇದರ ಹೊಣೆಗಾರಿಕೆಯನ್ನು ಪ್ರಾದೇಶಿಕ ಸಾರಿಗೆ ಇಲಾಖೆ ಅಧಿಕಾರಿಗಳು ಹೊತ್ತುಕೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

