ಜಿಲ್ಲೆಯಲ್ಲಿ ಶೇ.29.3 ಬಿತ್ತನೆ
ಕ.ಪ್ರ.ವಾರ್ತೆ ಚಿಕ್ಕಮಗಳೂರು ಜು.1
ಜಿಲ್ಲೆಯಲ್ಲಿ ಮುಂಗಾರಿನಲ್ಲಿ 1,61,730 ಹೆಕ್ಟೇರ್ ಬಿತ್ತನೆಯ ಗುರಿ ಹೊಂದಲಾಗಿದ್ದು, ಈವರೆಗೆ 47,380 ಹೆಕ್ಟೇರ್ನಲ್ಲಿ ಬಿತ್ತನೆಯಾಗಿದ್ದು, ಶೇ.29.3 ರಷ್ಟು ಪ್ರಗತಿ ಸಾಧಿಸಲಾಗಿದೆ.
ಕಳೆದ ವರ್ಷದಲ್ಲಿ ಇದೇ ಅವಧಿಯಲ್ಲಿ ಆಗಿದ್ದ ಬಿತ್ತನೆ ಶೇ.16 ರಷ್ಟು ಮಾತ್ರ. ಅಂದರೆ, ಬಿತ್ತನೆಯಲ್ಲಿ ನಿರೀಕ್ಷಿತ ಮಟ್ಟದಲ್ಲಿ ಗುರಿ ಮುಟ್ಟಲಾಗಿದೆ.
ಶೇ.90 ರಷ್ಟು ಪ್ರಗತಿ: 47,380 ಹೆಕ್ಟೇರ್ನಲ್ಲಿ ಬಿತ್ತನೆಯಾಗಿದ್ದು, ಈ ಪೈಕಿ 23,850 ಹೆಕ್ಟೇರ್ನಲ್ಲಿ ಮೆಕ್ಕೆಜೋಳ ಬಿತ್ತನೆಯಾಗಿದೆ. ಮುಂಗಾರಿನಲ್ಲಿ ಮೆಕ್ಕೆಜೋಳದ ಬಿತ್ತನೆಯ ಗುರಿ 26700 ಹೆಕ್ಟೇರ್.
ಇದರಲ್ಲಿ ಕಡೂರು ತಾಲೂಕಿನಲ್ಲಿ 11,200 ಹೆಕ್ಟೇರ್, ತರೀಕೆರೆ- 9000 ಹೆಕ್ಟೇರ್, ಚಿಕ್ಕಮಗಳೂರು ತಾಲೂಕಿನಲ್ಲಿ 3650 ಹೆಕ್ಟೇರ್ನಲ್ಲಿ ಬಿತ್ತನೆಯಾಗಿದೆ. ಅಂದರೆ ಶೇ.90 ರಷ್ಟು ಪ್ರಗತಿ ಸಾಧಿಸಲಾಗಿದೆ. ಇತರೆ ಬೆಳೆಗಳಿಗೆ ಹೋಲಿಕೆ ಮಾಡಿದರೆ ಅತಿ ಹೆಚ್ಚು ಪ್ರದೇಶದಲ್ಲಿ ಮೆಕ್ಕೆಜೋಳ ಬಿತ್ತನೆಯಾಗಿದೆ.
ಎಳ್ಳು- 4835 ಹೆಕ್ಟೇರ್, ಸೂರ್ಯಕಾಂತಿ- 4430, ನೆಲಗಡಲೆ- 4340, ಹೆಸರು- 3250, ಹತ್ತಿ 1335 ಹೆಕ್ಟೇರ್ನಲ್ಲಿ ಬಿತ್ತನೆಯಾಗಿದೆ. ಇದೀಗ ರಾಗಿ ಬಿತ್ತನೆ ಕಾರ್ಯ ಭರದಿಂದ ನಡೆಯುತ್ತಿದ್ದು, ಕಡೂರು ತಾಲೂಕಿನಲ್ಲಿ 32,000, ತರೀಕೆರೆ- 12,500 ಹಾಗೂ ಚಿಕ್ಕಮಗಳೂರು ತಾಲೂಕಿನಲ್ಲಿ 3500 ಹೆಕ್ಟೇರ್ನಲ್ಲಿ ರಾಗಿ ಬಿತ್ತನೆಯ ಗುರಿಯನ್ನು ಹೊಂದಲಾಗಿದೆ. ಸದ್ಯ ಮಳೆ ಬಿಡುವು ನೀಡುತ್ತಿರುವುದರಿಂದ ರಾಗಿ ಬಿತ್ತನೆಗೆ ಪೂರಕವಾದ ವಾತಾವರಣ ಇದೆ.
ವಾಡಿಕೆಗೂ ಮೀರಿ ಮಳೆ: ಚಿಕ್ಕಮಗಳೂರು ಜಿಲ್ಲೆಯಲ್ಲಿ ಈವರೆಗೆ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ. ಅಂದರೆ, ಶೇ.128.1 ರಷ್ಟು ಮಳೆ ಬಿದ್ದಿದೆ.
ಮೇ ತಿಂಗಳ ಕೊನೆಯಲ್ಲಿ ನಂತರ ಜೂನ್ ಮೊದಲ ವಾರದಲ್ಲಿ ಬಂದ ಮಳೆಯಿಂದಾಗಿ ಬಿತ್ತನೆ ಕಾರ್ಯಕ್ಕೆ ಪೂರಕವಾದ ವಾತಾವರಣ ಇದ್ದರಿಂದ ಬಿತ್ತನೆಯಲ್ಲಿ ಶೇ.29.3 ರಷ್ಟು ಪ್ರಗತಿ ಸಾಧಿಸಲಾಗಿದೆ.
ಕಳೆದ ವರ್ಷ ಮುಂಗಾರು ವೈಫಲ್ಯತೆಯಿಂದಾಗಿ ತರೀಕೆರೆ, ಕಡೂರು ತಾಲೂಕುಗಳು ಹಾಗೂ ಚಿಕ್ಕಮಗಳೂರು ಮತ್ತು ಮೂಡಿಗೆರೆ ತಾಲೂಕುಗಳ ಕೆಲವು ಹೋಬಳಿಗಳಲ್ಲಿ ಬರಗಾಲ ಬಂದಿತ್ತು. ಬಿತ್ತನೆ ಮಾಡಿದ್ದ ಫಸಲು ಕೈ ಸೇರುವ ಮುನ್ನವೇ ನೆಲದಲ್ಲಿ ಕರಗಿ ಹೋಯಿತು.
ನಂತರದ ದಿನಗಳಲ್ಲಿ ಕುಡಿಯುವ ನೀರಿನ ಹಾಹಾಕಾರ ಮತ್ತು ಜಾನುವಾರುಗಳಿಗೆ ಮೇವಿನ ಕೊರತೆ ರೈತರ ಗಾಯದ ಮೇಲೆ ಬರೆ ಎಳೆದಿತ್ತು. ಆದರೆ, ಈ ವರ್ಷದಲ್ಲಿ ಮಳೆ ರೈತರಿಗೆ ಈವರೆಗೆ ನಿರಾಶೆ ಮೂಡಿಸಿಲ್ಲ. ಅಂದರೆ ವಾಡಿಕೆಗಿಂತ ಹೆಚ್ಚು ಮಳೆ ಜಿಲ್ಲೆಯಲ್ಲಿ ಬಂದಿದೆ. ಅದರಲ್ಲೂ ಮುಂಗಾರು ಮಳೆಯನ್ನು ಅವಲಂಬಿತ ತರೀಕೆರೆ ಮತ್ತು ಕಡೂರು ತಾಲೂಕುಗಳಲ್ಲಿ ಈ ಬಾರಿ ಬಿತ್ತನೆಯಲ್ಲಿ ಹೆಚ್ಚು ಪ್ರಗತಿ ಕಂಡು ಬಂದಿದೆ. ಮಳೆ ಆಗಾಗ ಬಿಡುವು ನೀಡುತ್ತಿರುವುದರಿಂದ ಕೃಷಿ ಚಟುವಟಿಕೆಗೆ ಅನುಕೂಲವಾಗಿದೆ.
ಜಿಲ್ಲೆಯ 7 ತಾಲೂಕು ಕೇಂದ್ರಗಳ ವಾಡಿಕೆ ಹಾಗೂ ಬಿದ್ದ ಮಳೆಯ ವಿವರ ಈ ಕೆಳಕಂಡಂತೆ ಇದೆ.
ಚಿಕ್ಕಮಗಳೂರು- ವಾಡಿಕೆ ಮಳೆ 295 ಮಿ.ಮೀ. ಈವರೆಗೆ ಬಿದ್ದ ಮಳೆ 440, ಕಡೂರು- ವಾಡಿಕೆ 185, ಬಿದ್ದಮಳೆ 219, ಕೊಪ್ಪ- 720 (838), ಮೂಡಿಗೆರೆ- 657 (892), ಎನ್.ಆರ್.ಪುರ- 426 (617), ಶೃಂಗೇರಿ- 926 (1060), ತರೀಕೆರೆ- 243 (352) ಮಿ.ಮೀ. ಮಳೆ ಬಂದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

