ಚಿಕ್ಕಮಗಳೂರು

ಮೈ ದುಂಬಿ ಹರಿದ ಮದಗದ ಕೆರೆ

Published On :

ಕ.ಪ್ರ.ವಾರ್ತೆ, ಕಡೂರು,  ಜು.23
ಬಯಲು ಪ್ರದೇಶದ ರೈತರನ್ನು ಕೈ ಹಿಡಿದು ಕಾಪಾಡುತ್ತಿರುವ ಜೀವಜಲ ಕಡೂರು ತಾಲೂಕಿನ ಇತಿಹಾಸ ಪ್ರಸಿದ್ಧ ಎಮ್ಮೇದೊಡ್ಡಿಯ ಮದಗದಕೆರೆ ಮೈ ದುಂಬಿ ಹರಿಯುವ ಮೂಲಕ ಸಂಪ್ರದಾಯದಂತೆ ಕಳೆದ ಮಂಗಳವಾರ ಮಧ್ಯರಾತ್ರಿ ಕೋಡಿ ಬಿದ್ದು ತಾಲೂಕಿನ ರೈತರು ಹರ್ಷದಲ್ಲಿ ಮುಳುಗುವಂತೆ ಮಾಡಿದೆ.
ಮಂಗಳವಾರ ಮಧ್ಯರಾತ್ರಿ ಮದಗದಕೆರೆ ಕೋಡಿ ಬಿದ್ದು, 3 ಇಂಚು ಕೋಡಿ ಮೇಲೆ ಹರಿಯುಲು ಆರಂಭಿಸಿತು. ಕಳೆದ ವರ್ಷ ಬರಗಾಲದಿಂದ ಮಲೆನಾಡಿನಲ್ಲಿ ಮಳೆ ಬಾರದ ಕಾರಣ ಮದಗದಕೆರೆಯಲ್ಲಿ ನೀರು ಇಲ್ಲದೆ ರೈತರು ಕಂಗಾಲಾಗಿ ಅಡಕೆ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿ ನೂರಾರು ತೋಟಗಳ ಕೊಳವೆ ಬಾವಿಗಳಲ್ಲಿ ನೀರಿಲ್ಲದೆ ಬತ್ತಿಹೋಗುವ ಮೂಲಕ ಅನೇಕ ರೈತರು ಸಂಕಷ್ಟಕ್ಕೆ ಸಿಲುಕಿದ್ದರು. ಈ ವರ್ಷ ಕೆರೆ ಕೋಡಿ ರೈತರಲ್ಲಿ ಹರ್ಷ ಮೂಡಿಸಿತು.
ಕಟ್ಟುನಿಟ್ಟಿನ ನಿರ್ಧಾರ: ಕೆರೆಯಲ್ಲಿ ಕೇವಲ 60 ಅಡಿ ನೀರು ಸಂಗ್ರಹವಾಗಿ ನೀರು ಕಡಿಮೆಯಿದೆ ಎಂಬ ಕಾರಣದಿಂದ ರೈತರು ಮತ್ತು ಅಡಿಕೆ ಬೆಳೆಗಾರರ ಸಂಘ ಸೇರಿ ಕಟ್ಟಪ್ಪಣೆ ಮಾಡಿದ್ದರಿಂದ ಕಳೆದ ವರ್ಷ ರೈತರು ಬತ್ತ ಸೇರಿದಂತೆ ಯಾವುದೇ ಇತರೆ ಬೆಳೆ ಮಾಡಬಾರದು ಎಂದು ನಿರ್ಧಾರ ತೆಗೆದುಕೊಂಡಿದ್ದರು.
ಬರಗಾಲದ ಬೇಗೆಯಿಂದ ಅಂತರ್ಜಲ ಬತ್ತಿ, ಕೊಳವೆಬಾವಿ ಬತ್ತಿ ಕುಡಿಯುವ ನೀರು ಇಲ್ಲದೆ ಕಡೂರು ಹಾಗೂ ಬೀರೂರು ಪಟ್ಟಣಗಳು ಮತ್ತು ಈ ಮದಗದಕೆರೆ ವ್ಯಾಪ್ತಿಯ ಸುಮಾರು 8 ಕೆರೆ ಬತ್ತಿ ಜನ ಜಾನುವಾರು ಸಂಕಷ್ಟ ಅನುಭವಿಸುವಂತಾಗಿತ್ತು. ಆನಂತರ ರೈತರು ಪ್ರತಿಭಟನೆ ಹಾದಿ ತುಳಿದಾಗ ಜಿಲ್ಲಾಧಿಕಾರಿ ಆದೇಶದಂತೆ ನೀರು ಹರಿಸಲಾಯಿತು. ಈ ಬಾರಿ ಉತ್ತಮ ಮಳೆಯಾಗುವ ಮೂಲಕ ಕೋಡಿಬಿದ್ದು ಹರಿಯುತ್ತಿದೆ.
ಕೆರೆಯ ಇತಿಹಾಸ: ಚಿತ್ರದುರ್ಗದ ಪಾಳೇಗಾರರ ಆಡಳಿತಾವಧಿ ಕಾಲದಲ್ಲಿ ಮದಗದ ನಾಯಕ ಎಂಬುವನು ಕಡೂರು ಸುತ್ತಮುತ್ತಲಿನ ಪ್ರದೇಶವನ್ನು ತನ್ನ ಪ್ರಾಬಲ್ಯದಲ್ಲಿ ಇಟ್ಟುಕೊಂಡು ಆಳುತ್ತಿದ್ದ ಈ ಭಾಗದಲ್ಲಿ ಒಂದು ಕೆರೆಯಿತ್ತು.  
ಈ ಕೆರೆಯಲ್ಲಿ ನೀರು ಸಂಗ್ರಹಿಸಿ, ಸುತ್ತ ಮುತ್ತಲುನ ರೈತರಿಗೆ ಅನುಕೂಲ ಮಾಡಿಕೊಡಬೇಕು ಎನ್ನುವ ಸದುದ್ದೇಶದಿಂದ ಈ ಕೆರೆ ನಿರ್ಮಾಣ ಮಾಡಿದನೆಂಬ ಇತಿಹಾಸವಿದೆ. ಕೆರೆಯ ಪಕ್ಕದಲ್ಲಿ ಮದಗದ ಕೆಂಚಮ್ಮನವರ ದೇವಾಲಯ ಹಾಗೂ ವೀರಗಲ್ಲುಗಳು ಇದ್ದು, ಹರಕೆ ಹೊತ್ತು ಬರುವ ಭಕ್ತರು ಕೆಂಚಮ್ಮನವರಿಗೆ ಹರಕೆ ತೀರಿಸುವ ಮೂಲಕ ಕೆಂಚಮ್ಮನವರನ್ನು ಆರಾಧಿಸಿ ಇಲ್ಲಿಯೇ ಅಡುಗೆ ಮಾಡಿ ಊಟಮಾಡಿ ತೆರಳುವ ಮೂಲಕ ಮದಗದಕೆರೆ ಪ್ರವಾಸೀ ತಾಣವೂ ಆಗುತ್ತಾ ಬಂದಿದೆ.
ತಾಯಿಹಳ್ಳದಿಂದಲೂ ನೀರು: ಮಲೆನಾಡಿನಲ್ಲಿ ಮಳೆ ಬಂದರೆ ಚಿಕ್ಕಮಗಳೂರು ಹೊಸಪೇಟೆಯ ಬಳಿಯಿರುವ ಹೊನ್ನಮ್ಮಳ (ತಾಯಿಹಳ್ಳ)ದಿಂದ ಮದಗದಕೆರೆ ಮತ್ತು ಅಯ್ಯನಕೆರೆಗೆ ಪ್ರತ್ಯೇಕ ಕಾಲುವೆಯಾಗಿ ಹರಿದು ಬಯಲು ಪ್ರದೇಶದ ಕೆರೆಗಳಿಗೆ ನೀರು ನೈಸರ್ಗಿಕವಾಗಿ ಹರಿದು ಬರುವುದು ಈ ಕೆರೆಯ ವಿಶೇಷವಾಗಿದೆ.
ಸುಮಾರು 69 ಅಡಿ ಆಳವಿರುವ ಈ ಕೆರೆಯ ವ್ಯಾಪ್ತಿಗೆ ಎಂಟಕ್ಕೂ ಹೆಚ್ಚು ಕೆರೆಗಳು ಬರಲಿದ್ದು, ಈ ಭಾಗದ ಸುಮಾರು 1,700 ಹೆಕ್ಟೇರ್ ಪ್ರದೇಶದ ರೈತರ ಅಡಕೆ, ತೆಂಗು, ಬತ್ತ ಸೇರಿದಂತೆ ಅಚ್ಚುಕಟ್ಟು ಪ್ರದೇಶಕ್ಕೆ ನೀರು ಹರಿಯುತ್ತದೆ.
ಈ ಮದಗದಕೆರೆ ಕಡೂರು ತಾಲೂಕಿನ ಜನರ ನೀರಿನ ದಾಹ ತಣಿಸಿ, ರೈತರ ಸಂಕಷ್ಟ ತೀರಿಸುವ ನಿಟ್ಟಿನಲ್ಲಿ ಮದಗದಕೆರೆಯ ಗಂಗಮ್ಮ ಮೈದುಂಬಿ ಹರಿಯುತ್ತಿದ್ದಾಳೆ.
ಮದಗದ ಕೆರೆ ಕೋಡಿ ಬಿದ್ದ ಹಿನ್ನೆಲೆಯಲ್ಲಿ ತಾಲೂಕು ದಂಡಾಧಿಕಾರಿ ಎನ್.ಎಸ್.ಶಾರದಾಂಬ ಅಧಿಕಾರಿ ಸಿಬ್ಬಂದೊಯಂದಿಗೆ ಭೇಟಿ ನೀಡಿ ಪರಿಶೀಲಿಸಿದರು.

ಜಿಲ್ಲೆಯಲ್ಲಿ ಮುಂದುವರೆದ ಮುಂಗಾರು
ಚಿಕ್ಕಮಗಳೂರು: ಜಿಲ್ಲೆಯಲ್ಲಿ ಮುಂಗಾರು ಮಳೆ ಮಂಗಳವಾರವೂ ಮುಂದುವರೆದಿತ್ತು. ಆದರೆ, ಕಳೆದ ಎರಡು ದಿನಗಳಿಗೆ ಹೋಲಿಕೆ ಮಾಡಿದರೆ ಕೆಲವೆಡೆ ಮಳೆಯ ಪ್ರಮಾಣ ಇಳಿಮುಖವಾಗಿದೆ. ಇನ್ನು ಕೆಲವೆಡೆ ಎಂದಿನಂತಿದೆ.
ಮೂಡಿಗೆರೆ, ಶೃಂಗೇರಿ ತಾಲೂಕುಗಳಲ್ಲಿ ಮಳೆ ಇಳಿಮುಖವಾಗಿದೆ. ಆದರೆ, ಕೊಪ್ಪ ಹಾಗೂ ಎನ್.ಆರ್. ಪುರ ಮತ್ತು ಚಿಕ್ಕಮಗಳೂರು ತಾಲೂಕುಗಳಲ್ಲಿ ಎಂದಿನಂತೆ ಮಳೆ ಮುಂದುವರೆದಿದ್ದು, ತರೀಕೆರೆ ಮತ್ತು ಕಡೂರು ತಾಲೂಕುಗಳಲ್ಲಿ ಉತ್ತಮ ಮಳೆಯಾಗಿದೆ.
ಮಳೆಯ ಆರ್ಭಟ ಕಡಿಮೆಯಾಗಿದೆ. ಆದರೆ, ನಿರಂತರವಾಗಿ ಬರುತ್ತಿರುವ ಮಳೆ ಜನರಿಗೆ ಕಿರಿ ಕಿರಿಯಾಗಿದೆ. ಜಿಲ್ಲೆಯ ವಿವಿಧೆಡೆ ಕಳೆದ 24 ಗಂಟೆಗಳಲ್ಲಿ ಬಿದ್ದ ಮಳೆಯ ವಿವರ ಈ ಕೆಳಕಂಡಂತೆ ಇದೆ.
ಚಿಕ್ಕಮಗಳೂರು ನಗರ- 10 ಮಿ.ಮೀ., ಸಂಗಮೇಶ್ವರಪೇಟೆ- 30, ಬ್ಯಾರವಳ್ಳಿ- 80, ಕಡೂರು- 0.6, ಬೀರೂರು- 4.6, ಪಂಚನಹಳ್ಳಿ- 4.6, ಕೊಪ್ಪ- 125.8, ಹರಿಹರಪುರ- 125, ಜಯಪುರ- 61.6,  ಕಮ್ಮರಡಿ- 127.7, ಬಸರೀಕಟ್ಟೆ- 59, ಮೂಡಿಗೆರೆ- 36.7, ಕೊಟ್ಟಿಗೆಹಾರ- 64.8, ಕಳಸ- 69.6, ಎನ್.ಆರ್.ಪುರ- 30.5, ಬಾಳೆಹೊನ್ನೂರು- 38.8, ಶೃಂಗೇರಿ- 74, ಕಿಗ್ಗಾ- 118.1, ಕೆರೆಕಟ್ಟೆ- 109.6, ತರೀಕೆರೆ- 23, ಲಕ್ಕವಳ್ಳಿ- 24.5, ಅಜ್ಜಂಪುರ- 15, ಶಿವನಿಯಲ್ಲಿ 11 ಮಿ.ಮೀ. ಮಳೆ ಬಂದಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.