ಚಿಕ್ಕಮಗಳೂರು

ಸೌಲಭ್ಯ ಕಲ್ಪಿಸಲು ಆಗ್ರಹ

Published On :

ಕ.ಪ್ರ.ವಾರ್ತೆ, ಕಡೂರು,  ಜು.31
ಮಲ ಸ್ವಚ್ಛತೆಯ ಕಾಯಕ ಮಾಡುತ್ತಿರುವ ಮ್ಯಾನುಯಲ್ ಸ್ವಾವೆಂಜರ್ಗಳಿಗೆ ಪರ್ಯಾಯ ಮಾರ್ಗ ಕಲ್ಪಿಸಿ, ಸರ್ಕಾರದಿಂದ ಅಗತ್ಯ ಸೌಲಭ್ಯ ಕಲ್ಪಿಸಬೇಕು ಎಂದು ಕಾರ್ಮಿಕರು ಸರ್ಕಾರಕ್ಕೆ ಪುರಸಭೆ ಅಧಿಕಾರಿಗಳ ಮೂಲಕ ಮನವಿ ಮಾಡಿದರು.
ಕಡೂರು ಪಟ್ಟಣದ ಪುರಸಭೆ ಮುಂಭಾಗ ಬಿಜೆಪಿ ನಗರ ಘಟಕದ ಅಧ್ಯಕ್ಷ ಕೆ.ಎಸ್. ಸೋಮಪ್ರಸಾದ್, ಎಸ್ಟಿ ಎಸ್ಟಿ ನಗರ ಮೋರ್ಚಾ ಕಾರ್ಯದರ್ಶಿ ಇ. ನಾಗರಾಜ್, ನಗರ ಯುವ ಮೋರ್ಚಾ ಅಧ್ಯಕ್ಷ ಪ್ರಕಾಶ್ ನೇತೃತ್ವದಲ್ಲಿ ಅಂಬೇಡ್ಕರ್ ನಗರದಲ್ಲಿನ ಮಲ ಸ್ವಚ್ಛತೆಯ ಕಾಯಕ ಮಾಡುತ್ತಿರುವ ಹಲವು ಕುಟುಂಬದ  ಮಹಿಳೆಯರು, ಪುರುಷರು ಪುರಸಭೆಗೆ ಮುತ್ತಿಗೆ ಹಾಕಿ ನಮ್ಮ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿದರು.
ಸರ್ಕಾರಕ್ಕೆ ವರದಿ: ಇದೇ ಸಂದರ್ಭದಲ್ಲಿ ಮಾತನಾಡಿದ ಕಾರ್ಮಿಕರು, ಆದಿ ಕರ್ನಾಟಕ ಜನಾಂಗಕ್ಕೆ ಸೇರಿ ತೆಲುಗು ಭಾಷೆ ಮಾತನಾಡುತ್ತಿರುವ ನಾವು ಮಲ ಸ್ವಚ್ಛತೆ ಕೆಲಸ ಮಾಡಿಕೊಂಡು ಬರುತ್ತಿದ್ದೇವೆ. ಸರ್ಕಾರ ಮಲ ಹೊರುವ ಪದ್ಧತಿ ನಿಷೇಧಿಸಿದ್ದರೂ, ಪುರಸಭೆಯಿಂದ ಕಡೂರು ಪಟ್ಟಣದಲ್ಲಿ ಮಲ ಸ್ವಚ್ಛತೆ ಕೆಲಸ ಮಾಡುತ್ತಿರುವವರು ಯಾರೂ ಇಲ್ಲ ಎಂದು ಸರ್ಕಾರಕ್ಕೆ ವರದಿ ಕಳುಹಿಸಲಾಗಿದೆ.
ನಾವು ಹಲವಾರು ವರ್ಷಗಳಿಂದ ಇದೇ ವೃತ್ತಿಯನ್ನೇ ಮಾಡೊಕಂಡು ಬರುತ್ತಿದ್ದು, ಅನ್ಯಮಾರ್ಗ ಗೊತ್ತಿಲ್ಲದೆ  ಈ ಕಾಯಕ ಮಾಡಿಕೊಂಡು ಬರುತ್ತಿದ್ದೇವೆ. ಮಾನ್ಯುಯಲ್ ಸ್ಯಾನಿಟರಿ ಸ್ಕ್ಯಾವೆಂಜರ್ ಕೆಲಸ ಮಾಡುತ್ತಿರುವ ನಾವು ಕಡೂರು ಪಟ್ಟಣದ 5 ಮತ್ತು 6ನೇ ವಾರ್ಡಿನಲ್ಲಿ ವಾಸವಾಗಿದ್ದೇವೆ.
ಆದರೆ ಪುರಸಭೆಯಿಂದ 12 ಹಾಗೂ 13 ನೇ ವಾರ್ಡ್ ಮಾತ್ರ ಸರ್ವೆ ನಡೆಸಿ ಈ ವಾರ್ಡುಗಳಲ್ಲಿ ಯಾರೂ ಕೂಡ ಸ್ಕಾವಂಜರ್ಸ್ ಇಲ್ಲ ಎಂದು ವರದಿ ಕಳುಹಿಸಲಾಗಿದೆ. ಯಾವ ಮಾನದಂಡ ಇಟ್ಟುಕೊಂಡು ಸಾಮಾನ್ಯ ವರ್ಗದವರು ಮಾತ್ರ ವಾಸಿಸುತ್ತಿರುವ 12 ಹಾಗು 13 ನೇ ವಾರ್ಡಿನಲ್ಲಿ ಸರ್ವೆ ನಡೆಸಲಾಗಿದೆ ಎಂದು ಕೇಳುತ್ತಿದ್ದೇವೆ.
ಸವಲತ್ತು ಸಿಗದು: ಈ ವರದಿ ನೀಡಿರುವುದರಿಂದ ನಮಗೆ ಸರ್ಕಾರದ ಯಾವ ಸವಲತ್ತುಗಳೂ ಸಿಗದೇ ಇರುವ ಸಾಧ್ಯತೆ ಹಿನ್ನೆಲೆಯಲ್ಲಿ ನಾವು ಪುರಸಭೆಗೆ ಮುತ್ತಿಗೆ ಹಾಕಿ, ಸರ್ಕಾರ ನಮಗೆ ಈ ವೃತ್ತಿ ನಿಷೇಧಿಸಿರುವ ಹಿನ್ನೆಲೆಯಲ್ಲಿ ಪರ್ಯಾಯ ಮಾರ್ಗ ಕಲ್ಪಿಸಿ, ಸರ್ಕಾರದ ಸವಲತ್ತು ದೊರಕುವಂತೆ ಮಾಡಬೇಕು ಎಂದು ಮನವಿ ಮಾಡುತ್ತಿದ್ದೇವೆ ಎಂದು ಮನವಿ ಪತ್ರ ನೀಡಿದರು.
ಸ್ಕಾವೆಂಜರ್ಸ್ಗಳಿಂದ ಮನವಿ ಸ್ವೀಕರಿಸಿದ ಪುರಸಭೆಯ ಮುಖ್ಯಾಧಿಕಾರಿ ಕುಮಾರನಾಯ್ಕ ಮಾತನಾಡಿ, ಸ್ಕ್ಯಾವೆಂಜರ್ಸ್ಗಳು ನೀಡಿರುವ ಮನವಿಯನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತರುವ ಮೂಲಕ ಅಭಿವೃದ್ಧಿ  ಅಧಿಕಾರಿಗಳೊಂದಿಗೆ ಚರ್ಚಿಸಿ, ಅವರ ಮಾರ್ಗದರ್ಶನದಂತೆ ಮುಂದಿನ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಇದೇ ಸಂದರ್ಭದಲ್ಲಿ ಪುರಸಭಾ ಸದಸ್ಯ ಕೆ.ಎಂ. ಸೋಮಶೇಖರ್, ಎನ್.ಬಶೀರ್ ಸಾಬ್, ಮುಖಂಡ ಗೋವಿಂದಸ್ವಾಮಿ, ಈರಪ್ಪ, ಮಹೇಶ್, ಬಾಬಮ್ಮ, ಎಚ್. ಮಂಜುನಾಥ್, ಪದ್ಮ, ಪರಶುರಾಮಪ್ಪ, ಮಂಜುನಾಥ್, ಚಂದ್ರಶೇಖರ್, ಆನಂದ್, ಸುರೇಶ್ ಯಲ್ಲಮ್ಮ ಮೊದಲಾದವರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.