ಗುಟ್ಕಾ ನಿಷೇಧ: ಗಾಯದ ಮೇಲೆ ಬರೆ
ವಿಶೇಷ ವರದಿ
ಕ.ಪ್ರ.ವಾರ್ತೆ, ಚಿಕ್ಕಮಗಳೂರು, ಜೂ.1
ನೀರಿನಲ್ಲಿ ಮುಳುಗುವವರನ್ನು ಕೈ ಹಿಡಿದು ಎತ್ತಲು ಬಂದವರು, ಅದೇ ನೀರಿನಲ್ಲಿ ತಳ್ಳಿದರು..,
- ಹಳದಿ ಎಲೆ ರೋಗ ಪೀಡಿತ ಅಡಕೆ ತೋಟಗಳ ಮೂರು ಜಿಲ್ಲೆಗಳ ರೈತರಿಗೆ ಅನ್ವಯವಾಗುವ ಮಾತಿದು.
ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರಕ್ಕೆ ಬರುವಾಗ ಹಳದಿ ಎಲೆ ರೋಗ ಪೀಡಿತ ಚಿಕ್ಕಮಗಳೂರು, ಶಿವಮೊಗ್ಗ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳ ತೋಟ ಮಾಲೀಕರು ಬಹಳಷ್ಟು ನಿರೀಕ್ಷೆಯನ್ನು ಹೊಂದಿದ್ದರು. ಸಂಕಷ್ಟದಲ್ಲಿರುವ ತಮ್ಮನ್ನು ರಕ್ಷಿಸಬಹುದೆಂಬ ಆಶಾಭಾವನೆ ಹೊಂದಿದ್ದರು. ಇದಕ್ಕೆ ಸ್ಪಂದಿಸುವ ಮೊದಲೇ ಸರ್ಕಾರ ಗುಟ್ಕಾ ನಿಷೇಧ ಮೂಲಕ ತಣ್ಣಿರು ಎರಚಿ ಗಾಯದ ಮೇಲೆ ಬರೆ ಎಳೆದಿದೆ.
59 ಸಾವಿರ ಹೆಕ್ಟೇರ್: ಕಳೆದ ಆರು ದಶಕಗಳ ಹಿಂದೆ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಅಡಕೆ ತೋಟಗಳಲ್ಲಿ ಕಾಣಿಸಿಕೊಂಡ ಹಳದಿ ಎಲೆ ರೋಗ ಕೇವಲ ಕೊಪ್ಪ ತಾಲೂಕಿಗೆ ಮಾತ್ರ ಸೀಮಿತವಾಗಿಲ್ಲ. ಇದು, ಚಿಕ್ಕಮಗಳೂರು ಜಿಲ್ಲೆಯ ಮೂರು ತಾಲೂಕುಗಳಿಗೆ ವಿಸ್ತರಿಸಿಕೊಂಡಿದ್ದು, ಇದೀಗ ಮತ್ತೆ ಆಸುಪಾಸಿನ ತಾಲೂಕುಗಳಿಗೂ ಹರಡುತ್ತಿದೆ. ಈ ರೋಗ ನೆರೆಯ ಶಿವಮೊಗ್ಗ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಿಗೂ ವ್ಯಾಪಿಸಿದೆ.
ಕೃಷಿ ತಜ್ಞರಾದ ಗೋರಕ್ ಸಿಂಗ್ ಅವರು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿರುವ ವರದಿಯ ಪ್ರಕಾರ ಈ ಮೂರು ಜಿಲ್ಲೆಗಳಲ್ಲಿ ಸುಮಾರು 59 ಸಾವಿರ ಹೆಕ್ಟೇರ್ ಅಡಕೆ ತೋಟಗಳು ಹಳದಿ ಎಲೆ ರೋಗ, ಬೇರು ಹುಳು, ತೊಂಡೆ ರೋಗಕ್ಕೆ ತುತ್ತಾಗಿವೆ. ಈ ರೋಗ ದಿನ ದಿನಕ್ಕೆ ವಿಸ್ತರಿಸುತ್ತಿದೆ. ಇದಕ್ಕೆ ಕೊನೆ ಹಾಡಲು ಉಭಯ ಸರ್ಕಾರಗಳ ನೆರವಿನ ಅವಶ್ಯಕತೆ ಇದೆ.
ರೋಗದ ಹುಟ್ಟು ಹಾಗೂ ಹರಡುವಿಕೆ ಮತ್ತು ನಿಯಂತ್ರಣಕ್ಕಾಗಿ ಸಂಶೋಧನೆ ನಡೆಸಲು ಶೃಂಗೇರಿಯಲ್ಲಿ ರಾಜ್ಯ ಸರ್ಕಾರ ಸಂಶೋಧನಾ ಕೇಂದ್ರವನ್ನು ತೆರೆದಿದೆ. ಇದರ ಫಲಿತಾಂಶ ಸಿಗಲು ಇನ್ನು ಕೆಲವು ವರ್ಷಗಳು ಕಾಯಬೇಕಾಗಿದೆ.
ಸಾಲ ಮನ್ನಾ: ಹಳದಿ ಎಲೆ ರೋಗ ಪೀಡಿತ ಅಡಕೆ ತೋಟಗಳ ಮಾಲೀಕರ ನೆರವಿಗೆ ಬಂದಿದ್ದ ಕೇಂದ್ರ ಸರ್ಕಾರ 2009ರಲ್ಲಿ ಗೋರಕ್ ಸಿಂಗ್ ನೇತೃತ್ವದಲ್ಲಿ ಸಮಿತಿಯನ್ನು ರಚನೆ ಮಾಡಿತ್ತು. ಈ ಸಮಿತಿ ಕೇಂದ್ರ ಸರ್ಕಾರಕ್ಕೆ ಕೆಲವು ಶಿಫಾರಸು ಮಾಡಿದ್ದು, ಅದರಂತೆ ಸಾಲ ವಸೂಲಾತಿಗೆ ಕಾಲಾವಕಾಶ ನೀಡಬೇಕು. ತೋಟಗಳ ಪುನಶ್ಚೇತನಕ್ಕೆ ಆರ್ಥಿಕ ನೆರವು ನೀಡಬೇಕು. ಇದರ ಜತೆಗೆ 4 ಹೆಕ್ಟೇರ್ಯೊಳಗಿನ ಅಡಕೆ ತೋಟಗಳ ಮಾಲೀಕರ ಸಾಲವನ್ನು ಮನ್ನಾ ಮಾಡಬೇಕೆಂದು ಹೇಳಲಾಗಿತ್ತು.
ಸಾಲ ವಸೂಲಾತಿಗೆ 11 ವರ್ಷ ಕಾಲಾವಕಾಶ ನೀಡಲಾಗಿದೆ. ಪುನಶ್ಚೇತನಕ್ಕೆ ತಲಾ 30 ಸಾವಿರ ನೀಡಲಾಗಿದೆ. ಇದೀಗ ಸಾಲ ಮನ್ನಾದ ನಿರೀಕ್ಷೆಯಲ್ಲಿ ಮಾಲೀಕರು ಇದ್ದಾರೆ. ಆರ್ಥಿಕ ಸಂಕಷ್ಟದಲ್ಲಿರುವ ಬೆಳೆಗಾರರು, ತಮ್ಮ ತೋಟಗಳನ್ನು ಮಾರಿ ಊರು ಬಿಡುವ ಪರಿಸ್ಥಿತಿಗೆ ಬಂದಿದ್ದಾರೆ.
ಸಾಲ ಮನ್ನಾವಾದರೆ ಸ್ವಲ್ಪ ಮಟ್ಟಿಗೆಯಾದರೂ ಚೇತರಿಸಿಕೊಳ್ಳಬಹುದೆಂದುಕೊಂಡಿದ್ದಾರೆ. ಆದರೆ, ಇದಕ್ಕಾಗಿ ಕಾಯುತ್ತಿದ್ದ ಅಡಿಕೆ ತೋಟ ಮಾಲೀಕರಿಗೆ ಗುಟ್ಕಾ ನಿಷೇಧ ನಿದ್ದೆಗೆಡಿಸಿದೆ. ಬದುಕಿನ ಬಗ್ಗೆ ಅಲ್ಪಸ್ವಲ್ಪ ಕನಸು ಕಾಣುತ್ತಿದ್ದ ಇವರಿಗೆ ಭವಿಷ್ಯದ ದಾರಿ ಕಾಣದಂತಾಗಿದೆ.
ವ್ಯರ್ಥ ಪ್ರಯತ್ನ: ಗೋರಕ್ ಸಿಂಗ್ ವರದಿ ಅನುಷ್ಠಾನಕ್ಕೆ ತರುವಂತೆ ಹೈಕೋರ್ಟ್ ಕೇಂದ್ರ ಹಣಕಾಸು ಇಲಾಖೆಗೆ ಸೂಚನೆ ನೀಡಿದೆ. ಇದಕ್ಕೆ ಸ್ಪಂದಿಸದ ಕೇಂದ್ರ ಹಣಕಾಸು ಸಚಿವಾಲಯದ ಕಾರ್ಯದರ್ಶಿಗಳಿಗೆ ನ್ಯಾಯಾಂಗ ನಿಂಧನೆಯ ನೋಟಿಸ್ ಜಾರಿ ಮಾಡಲಾಗಿದೆ. ನೊಂದ ರೈತರಿಗೆ ಅನುಕೂಲವಾಗಲಿದೆ ಎಂಬ ಭಾವನೆ ಇದೆ.
ಇದರ ನಡುವೆ ಗುಟ್ಕಾ ನಿಷೇಧ ಬ್ರಹ್ಮಾಸ್ತ್ರವನ್ನು ರಾಜ್ಯ ಸರ್ಕಾರ ಪ್ರಯೋಗ ಮಾಡಿದೆ. ಇದರ ಮೊದಲ ಗುರಿ ಅಡಕೆ ಬೆಳೆಗಾರರು. ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿಯವರು ಹಳದಿ ಎಲೆ ರೋಗ ಪೀಡಿತ ಅಡಕೆ ತೋಟಗಳ ಮಾಲೀಕರ ನೆರವಿಗೆ ಬರುವುದಾಗಿ ಭರವಸೆಯನ್ನು ಸಹ ನೀಡಿದ್ದರು. ಇದರಿಂದ ನೆರವಿನ ದಾರಿ ಕಾಯುತ್ತಿದ್ದ ರೈತರಿಗೆ ಸರ್ಕಾರದ ತೀರ್ಮಾನ ಕತ್ತಲಿಗೆ ದೂಡಿದೆ. ಕೈ ಹಿಡಿದು ಮೇಲಕ್ಕೆ ಎತ್ತುವವರೆಂದುಕೊಂಡಿದ್ದ ಹಳದಿ ಎಲೆ ರೋಗ ಪೀಡಿತ ಅಡಕೆ ತೋಟ ಮಾಲೀಕರ ಲೆಕ್ಕಚಾರ ತಲೆ ಕೆಳಗಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

