ಇಂದು ಉಚಿತ ಆರೋಗ್ಯ ಶಿಬಿರ
ಶೃಂಗೇರಿ: ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಮಂಗಳವಾರ ಬೆಂಗಳೂರಿನ ಸಪ್ತಗಿರಿ ಆಸ್ಪತ್ರೆ ಹಾಗೂ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಸಂಯುಕ್ತ ಆಶ್ರಯಲ್ಲಿ ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಲಿದೆ. ಶಿಬಿರದಲ್ಲಿ ಉಚಿತ ಹೃದಯ ರೋಗ, ನರರೋಗ, ಮೂತ್ರಪಿಂಡದ ಕಲ್ಲು ತಪಾಸಣೆ ಹಾಗೂ ಸಲಹೆ ನೀಡಲಾಗುವುದು. ವಿಶೇಷವಾಗಿ ಬಿಪಿಎಲ್ ಕಾರ್ಡ್ದಾರರಿಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳ ತಜ್ಞ ವೈದ್ಯರು ಹಾಗೂ ಆಧುನಿಕ ವೈದ್ಯಕೀಯ ಉಪಕರಣಗಳೊಂದಿಗೆ ತಪಾಸಣೆ ನಡೆಸಲಿದ್ದಾರೆ. ಶಿಬಿರದಲ್ಲಿ ವಿವಿಧ ತಜ್ಞ ವೈದ್ಯರು ಪಾಲ್ಗೊಳ್ಳಲಿದ್ದು, ಸಾರ್ವಜನಿಕರು ಈ ಶಿಬಿರದಲ್ಲಿ ಪಾಲ್ಗೊಳ್ಳಬಾಹುದು.
ಉಚಿತ ನೋಟ್ಬುಕ್ ವಿತರಣೆ
ಶೃಂಗೇರಿ: ಪಟ್ಟಣದ ಶ್ರೀ ಚಪ್ಪರದಾಂಜನೇಯ ಸ್ವಾಮಿ ದೇವಾಲಯ ಆವರಣದಲ್ಲಿ ಮಂಗಳವಾರ ಉಡುಪಿ ಜಿ. ಶಂಕರ ಪ್ಯಾಮಿಲಿ ಟ್ರಸ್ಟ್ ಹಾಗೂ ತಾಲೂಕು ಮೊಗವೀರ ಸಂಘದ ಸಹಯೋಗದೊಂದಿಗೆ ವಿದ್ಯಾರ್ಥಿಗಳಿಗೆ ಉಚಿತ ನೋಟ್ಬುಕ್ ಹಾಗೂ ವಿದ್ಯಾರ್ಥಿ ವೇತನ ಮತ್ತು ಸಾಮೂಹಿಕ ಸತ್ಯನಾರಾಯಣ ವ್ರತ ಕಾರ್ಯಕ್ರಮ ನಡೆಯಲಿದೆ. ಬೆಳಗ್ಗೆ 9 ಗಂಟೆಗೆ ಕಾರ್ಯಕ್ರಮ ನಡೆಯಲಿದೆ. ಮುಖ್ಯ ಅತಿಥಿಗಳಾಗಿ ಉಡುಪಿ ಮೊಗವೀರ ಸಂಘದ ಯುವ ಘಟಕದ ಅಧ್ಯಕ್ಷ ಜಯಶಿ ಕೋಟ್ಯಾನ್, ತಾಲೂಕು ಘಟಕದ ಅಧ್ಯಕ್ಷ ಸುರೇಶ್, ಉದಯ ಆನೆಗುಂದ ಹಾಗೂ ಸಂಘದ ಪದಾಧಿಕಾರಿಗಳು, ಸಮಾಜ ಭಾಂದವರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
ರಸ್ತೆ ಕಾಮಗಾರಿ ಕಳಪೆ: ಆರೋಪ
ತರೀಕೆರೆ: ಅಂತರ ಜಿಲ್ಲಾ ಸಂಪರ್ಕ ಕಲ್ಪಿಸುವ, ರಾಜ್ಯ ಹೆದ್ದಾರಿ 72ಕ್ಕೆ ಲಿಂಕ್ ಕಲ್ಪಿಸುವ ಬೀರೂರು ಅಜ್ಜಂಪುರ ಮಾರ್ಗವಾಗಿ ಚೆನ್ನಗಿರಿ ಮೂಲಕ ದಾವಣಗೆರೆ ತಲುಪುವ ರಸ್ತೆ ಕಾಮಗಾರಿ ಕಾರ್ಯ ಕಳಪೆಯಾಗಿದೆ ಎಂದು ಚಿಕ್ಕಮಗಳೂರು ಜಿಲ್ಲಾ ಬಸ್ ಆಪರೇಟರ್ಸ್ ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ಬಿ.ಪಿ. ಚಂದ್ರಶೇಖರ್ ಆರೋಪಿಸಿದ್ದಾರೆ. ಕಳಪೆ ವಸ್ತುಗಳನ್ನು ಬಳಸಿ ಕಳಪೆ ಕೆಲಸ ಮಾಡುತ್ತಿದ್ದಾರೆ. ನಮ್ಮ ಸಂಘದವರು ಹಲವು ಬಾರಿ ಗುತ್ತಿಗೆದಾರರನ್ನು ಸಂಪರ್ಕಿಸಿದಾಗಲೂ ಹಾರಿಕೆ ಉತ್ತರ ಕೊಡುತ್ತಿದ್ದಾರೆ ಈ ಬಗ್ಗೆ ಎಲ್ಲಾ ಮೇಲಧಿಕಾರಿಗಳಿಗೆ ಲಿಖಿತ ದೂರುಗಳನ್ನೂ ಕೊಡಲಾಗಿದೆ ಎಂದು ತಿಳಿಸಿದ್ದಾರೆ. ಮೇಲ್ದೆರ್ಜೆಗೇರಿಸುವ ಬದಲು ಗುಂಡಿಗಳನ್ನು ಮುಚ್ಚಿ ವಾಹನ ಸುಗಮ ಸಂಚಾರಕ್ಕೆ 15 ದಿವಸದೊಳಗೆ ಕ್ರಮ ಕೈಗೊಳ್ಳದಿದ್ದಲ್ಲಿ ಪ್ರತಿಭಟನೆ ಮತ್ತು ಎಲ್ಲಾ ವಾಹನಗಳ ಸಂಚಾರವನ್ನು ಸ್ಥಗಿತಗೊಳಿಸಿ ಬಂದ್ ಆಚರಿಸಲಾಗುವುದು ಎಂದು ಅವರು ಪತ್ರಿಕೆಗೆ ತಿಳಿಸಿದ್ದಾರೆ.
ಕಬ್ಬಿಣದ ಗೇಟಿಗೆ ಸಿಲುಕಿ ಸಾರಂಗ ಸಾವು
ಮೂಡಿಗೆರೆ: ಕಾಫಿ ತೋಟಕ್ಕೆ ಬಂದ ಸಾರಂಗವೊಂದನ್ನು ನಾಯಿಗಳು ಅಟ್ಟಿಸಿಕೊಂಡು ಬಂದ ಕಾರಣ ನಾಯಿಯಿಂದ ತಪ್ಪಿಸಿಕೊಳ್ಳಲು ಯತ್ನಿಸುವಾಗ ಕಬ್ಬಿಣದ ಗೇಟಿಗೆ ಸಿಲುಕಿ ಪ್ರಾಣ ಬಿಟ್ಟ ಘಟನೆ ತಾಲೂಕಿನ ಬಿದರಹಳ್ಳಿಯಲ್ಲಿ ಸೋಮವಾರ ಸಂಭವಿಸಿದೆ.
ಬಿದರಹಳ್ಳಿ ಗ್ರಾಮದ ತೇಜಸ್ವಿ ಎಂಬವರ ಕಾಫಿ ತೋಟಕ್ಕೆ ಸೋಮವಾರ ಬೆಳಿಗ್ಗೆ 7 ಗಂಟೆಯ ಸಮಯದಲ್ಲಿ ಮೇಯುತ್ತಾ ಬಂದ ಸುಮಾರು ಎರಡು ವರ್ಷ ಪ್ರಾಯದ ಸಾರಂಗವನ್ನು ಕಂಡ ನಾಯಿಗಳು ಅಟ್ಟಿಸಿಕೊಂಡು ಹೋಗುವಾಗ, ಮುಚ್ಚಿದ ಗೇಟಿನ ಮೂಲಕ ತಪ್ಪಿಸಿಕೊಳ್ಳಲು ಯತ್ನಿಸಿದ ಸಾರಂಗದ ಕೊಂಬುಗಳು ಕಬ್ಬಿಣದ ಗೇಟಿನ ಕಂಬಿಗಳಿಗೆ ಸಿಲುಕಿ ಹೊರತೆಗೆದುಕೊಳ್ಳಲಾಗದೇ, ಸ್ಥಳದಲ್ಲಿಯೇ ಮೃತಪಟ್ಟಿದೆ.
ಬೆಳಗ್ಗೆ ತೋಟದ ಕೆಲಸಕ್ಕಾಗಿ ಕಾರ್ಮಿಕರು ಬಂದಾಗ ಸಾರಂಗ ಮೃತಪಟ್ಟಿರುವುದನ್ನು ಕಂಡು ಮಾಲೀಕರಿಗೆ ವಿಚಾರ ಮುಟ್ಟಿಸಿದ್ದು, ಮಾಲೀಕರು ಅರಣ್ಯ ಇಲಾಖೆಗೆ ಸುದ್ದಿ ತಿಳಿಸಿದ್ದಾರೆ.
ಸುದ್ದಿ ತಿಳಿದು ಅರಣ್ಯ ಉಪ ಸಂರಕ್ಷಣಾಧಿಕಾರಿ ರಮೇಶ್ ಬಾಬು, ವಲಯ ಅರಣ್ಯಾಧಿಕಾರಿ ಸುದರ್ಶನ್ ಮತ್ತು ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು. ಕಂಬಿಗೆ ಸಿಲುಕಿದ್ದ ಸಾರಂಗವನ್ನು ಹೊರತೆಗೆದು, ಮೂಡಿಗೆರೆ ಪಶು ವೈದ್ಯಾಧಿಕಾರಿ ಡಾ. ವೇಣುಗೋಪಾಲ್ ನೇತೃತ್ವದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಅಂತ್ಯಕ್ರಿಯೆ ನಡೆಲಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

