'ಸಾಧನೆಗೆ ಸಮಾಜ ಬೆಂಬಲಿಸಲಿ'
ಚಿಕ್ಕಮಗಳೂರು: ಸಾಧನೆಗೆ ಸಮಾಜ ಬೆಂಬಲಬೇಕು. ಸಾಧಿಸುವ ದಾರಿಯಲ್ಲಿ ಬರುವ ಕಲ್ಲು- ಮುಳ್ಳುಗಳನ್ನು ಬದಿಗಿಟ್ಟು ತಾಳ್ಮೆಯಿಂದ ಸಾಧನೆಯ ಶಿಖರವೇರಬೇಕೆಂದು ಯುರೇಕಾ ಅಕಾಡೆಮಿಯ ಪ್ರಾಂಶುಪಾಲ ದೀಪಕ್ ದೊಡ್ಡಯ್ಯ ಕರೆ ನೀಡಿದ್ದಾರೆ.
ಆಲ್ದೂರಿನ ಸರ್ಕಾರಿ ಪ್ರೌಢಶಾಲೆಯಲ್ಲಿ ಕುಂಭಕ ಸಾಂಸ್ಕೃತಿಕ ಪ್ರತಿಷ್ಠಾನ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಮತ್ತು ಉಪಾಸನಾ ಪ್ರಶಸ್ತಿ ಪುರಸ್ಕೃತೆ ರಶ್ಮಿ ಮಂಜುನಾಥ್ ಅವರ ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥ್ಥಿಗಳು ಪರಿಶ್ರಮದಿಂದ ಪ್ರತಿಭೆಯನ್ನು ತಮ್ಮದಾಗಿಸಿಕೊಳ್ಳಬೇಕೆಂದು ಹೇಳಿದರು.
ಎಸ್ಎಸ್ಎಲ್ಸಿ ಮತ್ತು ದ್ವಿತೀಯ ಪಿ.ಯು.ಸಿ ಕನ್ನಡದಲ್ಲಿ ಅತೀ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ನಗದು ಪುರಸ್ಕಾರ ಹಾಗೂ ಸ್ಮರಣಿಕೆಯೊಂದಿಗೆ ಅಭಿನಂದಿಸಿ ಮಾತನಾಡಿದ ಕುಂಭಕ ಪ್ರತಿಷ್ಠಾನದ ಅಧ್ಯಕ್ಷ ಕುಂದೂರು ಅಶೋಕ್, ಪ್ರತಿಭೆಗಳನ್ನು ಶೋಧಿಸುವುದು, ಬೆನ್ನು ತಟ್ಟುವುದು ಪ್ರತಿಯೊಬ್ಬನ ಕರ್ತವ್ಯವಾಗಬೇಕೆಂದರು.
ಇದೇ ಸಂದರ್ಭದಲ್ಲಿ ಉಪಾಸನಾ ಪ್ರಶಸ್ತಿ ಪುರಸ್ಕೃತೆ ರಶ್ಮಿ ಮಂಜುನಾಥ್ ಅವರನ್ನು ಪ್ರತಿಷ್ಠಾನದವತಿಯಿಂದ ಸನ್ಮಾನಿಸಿದರು. ಅಧ್ಯಕ್ಷತೆ ವಹಿಸಿದ್ದ ಎಸ್.ಡಿ.ಎಂ.ಸಿ. ಅಧ್ಯಕ್ಷರಾದ ಕವೀಶ್ ಮಾತನಾಡಿದರು. ಕಾರ್ಯಕ್ರಮದಲ್ಲಿ ಲಯನ್ಸ್ ಅಧ್ಯಕ್ಷ ಹೆಚ್.ಎಲ್. ರವಿಕುಮಾರ್, ಹಿರಿಯ ಸಹ ಶಿಕ್ಷಕಿ ಸುಮಂಗಳ, ಪ್ರತಿಷ್ಠಾನದ ಸಂಚಾಲಕ ಸಿ. ಎಸ್. ಸುರೇಶ್ ಉಪಸ್ಥಿತರಿದ್ದರು.
ಅರ್ಜಿ ಕರೆದು ಆಯ್ಕೆ ಮಾಡದ ಸಹಕಾರ ಸಂಘ
ಮೂಡಿಗೆರೆ: ತಾಲೂಕಿನ ದಾರದಹಳ್ಳಿ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹುದ್ದೆಗೆ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಕರೆದು, ಪ್ರತಿ ಅರ್ಜಿಗೆ 200 ರು.ಗಳಂತೆ ಸಾವಿರಾರು ಅಭ್ಯರ್ಥಿಗಳಿಂದ ಲಕ್ಷಾಂತರ ರು. ಸಂಗ್ರಹಿಸಿ, ಸಂದರ್ಶನವಾಗಲೀ ಆಯ್ಕೆ ಪ್ರಕ್ರಿಯೆಗಾಗಲಿ ನಡೆಸದೆ ವಂಚಿಸಲಾಗಿದೆ ಎಂದು ಅಭ್ಯರ್ಥಿ ಸಂತೋಷ್ ಹುಂಡುಗುಳಿ ದೂರಿದ್ದಾರೆ.
ಈ ಕುರಿತು ಹೇಳಿಕೆ ನೀಡಿ, 2012ರ ಜುಲೈ ತಿಂಗಳಲ್ಲಿ ಅಭ್ಯರ್ಥಿಗಳಿಂದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹುದ್ದೆಗೆ ಅರ್ಜಿಯೊಂದಿಗೆ ತಲಾ 200 ರು.ಗಳ ಶುಲ್ಕ ಪಡೆದು ಹಣವನ್ನು 1 ವರ್ಷ ಕಳೆದರೂ ಅಭ್ಯರ್ಥಿಗಳಿಗೆ ಹಿಂದಿರುಗಿಸದೆ, ಸರ್ಕಾರಕ್ಕೆ ಪಾವತಿ ಮಾಡದೆ ದುರುಪಯೋಗಪಡಿಸಿಕೊಂಡು ವಂಚಿಸಲಾಗಿದೆ ಎಂದು ಆಪಾದಿಸಿದ್ದಾರೆ.
ಅಭ್ಯರ್ಥಿಗಳ ಹಣವನ್ನು ಹಿಂದಿರುಗಿಸಬೇಕು ಅಥವಾ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹುದ್ದೆಗೆ ಅರ್ಹ ಅಭ್ಯರ್ಥಿಯನ್ನು ಆಯ್ಕೆ ಮಾಡಬೇಕು. ತಪ್ಪಿದಲ್ಲಿ ಈ ಬಗ್ಗೆ ಜಿಲ್ಲಾ ನೋಂದಣಾಧಿಕಾರಿಗಳಿಗೆ ಹಾಗೂ ಲೋಕಾಯುಕ್ತರಿಗೆ ದೂರು ಸಲ್ಲಿಸುವುದಾಗಿ ತಿಳಿಸಿದ್ದಾರೆ.
ಅವಿಷ್ಕಾರದಿಂದ ಪರಿಸರ ನಾಶ
ಚಿಕ್ಕಮಗಳೂರು: ಆಧುನಿಕ ಜಗತ್ತಿನಲ್ಲಿ ತಾಂತ್ರಿಕಕತೆಯ ಅವಿಷ್ಕಾರ ಪರಿಸರ ನಾಶಕ್ಕೆ ಕಾರಣವಾಗಿದೆ ಎಂದು ಜಿಲ್ಲಾ ವಿಜ್ಞಾನ ಕೇಂದ್ರದ ಗೌರವಾಧ್ಯಕ್ಷ ಎ.ಎನ್. ಮಹೇಶ್ ಹೇಳಿದ್ದಾರೆ.
ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು, ಡಾ. ಬಿ.ಆರ್. ಅಂಬೇಡ್ಕರ್ ಪ್ರೌಢಶಾಲೆ, ನಿಸರ್ಗ ಇಕೋ ಕ್ಲಬ್ನ ಸಂಯುಕ್ತಾಶಯದಲ್ಲಿ ಪರಿಸರ ಜಾಗೃತಿ ಆಂದೋಲನ ಕಾರ್ಯಕ್ರಮದಲ್ಲಿ ಜೀವಿ ವೈವಿಧ್ಯ ಸಂರಕ್ಷಣೆ ಎಂಬ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದ ಅವರು, ನಾವು ಆಹಾರವು ಹಾಳು ಮಾಡದೆ ಯೋಚಿಸಿ, ಬಳಸಿ ಉಳಿಸುವ ಮೂಲಕ ಪರಿಸರ ಮಾಲಿನ್ಯ ಕಡಿಮೆ ಮಾಡುವಂತೆ ಕಾರ್ಯಕ್ಕೆ ಮುಂದಾಗಬೇಕೆಂದು ಕರೆ ನೀಡಿದರು. ಇಂದು ಕಾಡುಗಳು ನಾಶವಾಗುತ್ತಿವೆ. ನೀರು, ಗಾಳಿ ಕಲುಷಿತಗೊಳ್ಳುತ್ತಿದೆ ಇವುಗಳನ್ನು ಉಳಿಸಿ ಬೆಳೆಸುವಂತೆ ಕಾರ್ಯಕ್ರಮಗಳು ರೂಪುಗೊಳ್ಳಬೇಕು ಎಂದು ಜಿಲ್ಲಾ ವಿಜ್ಞಾನ ಕೇಂದ್ರದ ಸಂಚಾಲಕ ಕೆ.ಜಿ. ನೀಲಕಂಠಪ್ಪ ಹೇಳಿದ್ದಾರೆ. ಶಿಕ್ಷಕ ಎಚ್.ಎಂ. ನೀಲಕಂಠಪ್ಪ, ಕೆ.ಟಿ. ರಾಧಾಕೃಷ್ಣ, ಪಿ. ವೇಲಾಯುದನ್, ಆರ್.ಎಂ. ಉಮಾಮಹೇಶ್ವರಪ್ಪ, ನಗರಸಭಾ ಸದಸ್ಯ ಸಿ.ಕೆ. ಜಗದೀಶ್ ಮಾತನಾಡಿದ್ದರು. ಆಂಬೇಡ್ಕರ್ ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ಬಸವರಾಜ್ ಅವರು ಅಧ್ಯಕ್ಷತೆವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

