ವೃತ್ತಿಪರ ಶಿಕ್ಷಣ ಅಗತ್ಯ: ರವಿ
ಕ.ಪ್ರ.ವಾರ್ತೆ, ಚಿಕ್ಕಮಗಳೂರು, ಜೂ.20
ಸ್ವಾವಲಂಬಿ ಬದುಕಿಗಾಗಿ ವಿದ್ಯಾರ್ಥಿಗಳಿಗೆ ವೃತ್ತಿಪರ ಶಿಕ್ಷಣ ನೀಡಬೇಕಾದ ಅವಶ್ಯಕತೆ ಇದೆ ಎಂದು ಶಾಸಕ ಸಿ.ಟಿ. ರವಿ ಹೇಳಿದ್ದಾರೆ.
ಗ್ರಾಮೀಣ ಕೈಗಾರಿಕೆ ಇಲಾಖೆಯಿಂದ ವಿವಿಧ ತರಬೇತಿ ಪಡೆದ ಫಲಾನುಭವಿಗಳಿಗೆ ಬುಧವಾರ ಗ್ರಾಮೀಣ ಕೈಗಾರಿಕಾ ಇಲಾಖೆಯ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪರಿಕರಗಳನ್ನು ವಿತರಿಸಿ ಮಾತನಾಡಿದ ಅವರು, ಕಸುಬು ಕಲಿತರೆ ಎಲ್ಲಿ ಬೇಕಾದರೂ ಬದುಕಬಹುದು ಎಂದರು.
ಮೂಲ ಸೌಲಭ್ಯಕ್ಕೆ ನೋರವು ಅಗತ್ಯ: ಭಾರತ ಕೃಷಿ ಪ್ರಧಾನ ರಾಷ್ಟ್ರ. ಕೃಷಿ ಆಧಾರಿತ ಹಲವು ಉದ್ಯೋಗಗಳ ಮೇಲೆ ಜನರು ಅವಲಂಬಿತರಾಗಿದ್ದರು. ಆದರೆ, ಆಧುನಿಕ ಭರಾಟೆಯಲ್ಲಿ ಕೃಷಿ ಚಟುವಟಿಕೆಯ ಜತೆಗೆ ಇತರೆ ಉದ್ಯೋಗಗಳು ಸೊರಗುತ್ತಿವೆ. ಗ್ರಾಮೀಣ ಜನರು ನಗರ ಪ್ರದೇಶಗಳಿಗೆ ವಲಸೆ ಹೋಗುತ್ತಿದ್ದು, ಇದರ ಮೂಲಕ ತಮ್ಮ ಮೂಲ ವೃತ್ತಿಯನ್ನು ಮರೆಯುತ್ತಿದ್ದಾರೆ.
ಮೂಲ ವೃತ್ತಿಗಳು ಉಳಿಯಬೇಕಾದರೆ, ಅವುಗಳನ್ನು ಅವಲಂಬಿತವರಿಗೆ ಸಾಮಾಜಿಕ ಗೌರವ ನೀಡುವ ಜತೆಗೆ ಆರ್ಥಿಕ ನೆರವು ನೀಡುವ ಕೆಲಸ ಆಗಬೇಕು ಎಂದು ಹೇಳಿದರು.
ಯಾವುದೇ ವೃತ್ತಿ ಕೀಳಲ್ಲ: ಮೂಲ ವೃತ್ತಿಯ ಬಗ್ಗೆ ಇರುವ ಕೀಳರಿಮೆಯನ್ನು ತೊಡೆದು ಹಾಕಿದ್ದರೆ, ಈ ವೃತ್ತಿಯನ್ನು ಅವಲಂಬಿತರಿಗೆ ಆರ್ಥಿಕ ನೆರವು ನೀಡಿದ್ದರೆ ಅದ್ಭುತವಾದ ಭಾರತವನ್ನು ನಿರ್ಮಾಣ ಮಾಡಬಹುದಾಗಿತ್ತು. ಯಾವುದೇ ವೃತ್ತಿ ಕೀಳಲ್ಲ. ಅದರಲ್ಲಿ ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಳ್ಳಬೇಕು.
ಕೆಲಸದಲ್ಲಿ ಉತ್ಕೃಷ್ಟತೆ ಇರಬೇಕು. ಬದಲಾಗುತ್ತಿರುವ ಆಧುನಿಕತೆ ಹೊಂದಿಕೊಳ್ಳುವಂತೆ ವೃತ್ತಿಯನ್ನು ನವೀಕರಿಸಬೇಕು ಎಂದು ಕಿವಿ ಮಾತು ಹೇಳಿದರು. ಜಿಪಂ ಅಧ್ಯಕ್ಷೆ ರೇಖಾ ಹುಲಿಯಪ್ಪಗೌಡ ಮಾತನಾಡಿ, ಬಡ ವರ್ಗದವರಿಗೆ ಅನುಕೂಲವಾಗಲೆಂದು ಸರ್ಕಾರ ವೃತ್ತಿ ಆಧಾರಿತ ತರಬೇತಿಯ ಜತೆಗೆ ಪರಿಕರಗಳನ್ನು ನೀಡುತ್ತಿದೆ. ಇವುಗಳ ಸದುಪಯೋಗ ಪಡೆದುಕೊಂಡು ಆರ್ಥಿಕ ಸ್ಥಿರತೆ ಕಾಪಾಡಿಕೊಳ್ಳಬೇಕು ಎಂದರು.
ವೃತ್ತಿ ಆಧಾರಿತ ತರಬೇತಿ: ಜಿಪಂ ಸದಸ್ಯೆ ಸವಿತಾ ರಮೇಶ್ ಮಾತನಾಡಿ, ಸರ್ಕಾರದ ಉತ್ತೇಜನ ಇಲ್ಲದೆ ಬಹಳಷ್ಟು ಬಡವರು ಆರ್ಥಿಕವಾಗಿ ಬಳಲುತ್ತಿದ್ದಾರೆ. ವೃತ್ತಿ ಆಧಾರಿತ ತರಬೇತಿ ನೀಡುವ ಕಾರ್ಯಕ್ರಮವನ್ನು ಜಿಪಂ ಮಟ್ಟದಲ್ಲಿ ವಿಸ್ತರಣೆ ಮಾಡಬೇಕು. ಇದರ ಪ್ರಯೋಜನ ಇನ್ನಷ್ಟು ಜನರಿಗೆ ಸಿಗುವಂತಾಗಬೇಕು ಎಂದು ತಿಳಿಸಿದರು.
ಜಿಪಂ ಸದಸ್ಯ ಶೃಂಗೇರಿ ಶಿವಣ್ಣ ಮಾತನಾಡಿ, ಕುಲ ಕಸುಬು ಉಳಿಸಿಕೊಳ್ಳಬೇಕು. ಇದಕ್ಕೆ ಸರ್ಕಾರ ಹೆಚ್ಚು ಉತ್ತೇಜನ ಮತ್ತು ಪ್ರೋತ್ಸಾಹ ನೀಡಬೇಕು ಎಂದು ಹೇಳಿದರು.
ಜಿಪಂ ಸದಸ್ಯ ನಿರಂಜನ್ ಮಾತನಾಡಿ, ಜನರನ್ನು ಮುಖ್ಯ ವಾಹಿನಿಗೆ ತರಲು ಸರ್ಕಾರ ಹಲವಾರು ಕಾರ್ಯಕ್ರಮಗಳನ್ನು ಜಾರಿಗೆ ತರುತ್ತಿದೆ. ಮೂಲ ವೃತ್ತಿ ಗೊತ್ತಿದ್ದರು. ಅದರ ಪರಿಕರಗಳು ಬಹಳಷ್ಟು ಜನರಿಗೆ ಇಲ್ಲದಂತಾಗಿದೆ. ಭವಿಷ್ಯ ರೂಪಿಸಿಕೊಳ್ಳಲು ಈ ಪರಿಕರಗಳನ್ನು ಬಳಸಿಕೊಳ್ಳಬೇಕು ಎಂದು ಕರೆ ನೀಡಿದರು.
ಜಿಲ್ಲಾ ಪಂಚಾಯಿತಿ ಸದಸ್ಯೆ ಹೇಮಾವತಿ ದೇವೇಗೌಡ, ತಾಲೂಕು ಪಂಚಾಯಿತಿ ಅಧ್ಯಕ್ಷ ಬಸವರಾಜ್, ಸದಸ್ಯ ಕನಕರಾಜ್, ಗ್ರಾಮೀಣ ಕೈಗಾರಿಕೆ ಇಲಾಖೆಯ ಉಪ ನಿರ್ದೇಶಕ ಶಿವಮೂರ್ತಿ,
ತಾಲೂಕು ವಿಸ್ತರಣಾಧಿಕಾರಿ ರವಿಪ್ರಸಾದ್ ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

