ಚಿಕ್ಕಮಗಳೂರು

ಅಕ್ರಮ ತಡೆಗೆ ಹೊಸ ಸೂತ್ರ

Published On :

ಕ.ಪ್ರ.ವಾರ್ತೆ ಚಿಕ್ಕಮಗಳೂರು  ಜೂ.23
ನಿಮ್ಮ ಮನೆಯಲ್ಲಿ ಈಗಾಗಲೇ ಪಡಿತರ ಚೀಟಿ ಇದ್ದರೂ ಮತ್ತೊಂದು ಚೀಟಿ ಪಡೆಯಲು ನೀವು ಅರ್ಜಿ ಹಾಕಿದ್ದೀರಾ.
- ಇದಕ್ಕೆ ಸಂಬಂಧಿಸಿದ ದಾಖಲೆಯನ್ನು ಸಹ ನೀಡಿದ್ದೀರಾ..,
ಇಷ್ಟಕ್ಕೆ ನಿಮ್ಮ ಮನೆಗೆ ಮತ್ತೊಂದು ಪಡಿತರ ಚೀಟಿ ಸಿಗುತ್ತದೆ ಎಂದುಕೊಳ್ಳಬೇಡಿ.
ಆಯುಕ್ತರ ಸೂಚನೆ: ಮತ್ತೊಂದು ಪಡಿತರ ಚೀಟಿಯನ್ನು ನೀಡುವ ಮೊದಲು ಸಂಬಂಧಪಟ್ಟ ದಾಖಲಾತಿಯನ್ನು ಪರಿಶೀಲಿಸಬೇಕೆಂದು ಸಹಜವಾದ ಪ್ರಕ್ರಿಯೆ.
 ಆದರೆ, ಒಂದೇ ಸೂರಿನಲ್ಲಿ ಎರಡು ಕುಟುಂಬಗಳು ವಾಸವಾಗಿದ್ದು, ಇದರಲ್ಲಿ ಒಂದು ಕುಟುಂಬ ಈಗಾಗಲೇ ಪಡಿತರ ಚೀಟಿ ಪಡೆದಿದ್ದು, ಮತ್ತೊಂದು ಕುಟುಂಬ ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಿದ್ದರೆ, ಆ ಕುಟುಂಬ ಪ್ರತ್ಯೇಕವಾಗಿ ಅಡುಗೆ ಮನೆ ಹೊಂದಿರುವ ಬಗ್ಗೆ ದೃಢೀಕರಣ ಮಾಡಿಕೊಳ್ಳಬೇಕು ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯ ಆಯುಕ್ತರು ಉಪ ನಿರ್ದೇಶಕರಿಗೆ ಸೂಚನೆ ನೀಡಿದ್ದಾರೆ.
ಎರಡು ಅಡುಗೆ ಮನೆಗಳಿರಬೇಕು: ಇಷ್ಟು ದಿನ, ಕಚೇರಿಯಲ್ಲಿ ಕುಳಿತು, ಅಥವಾ ಮನೆಯ ಕಟ್ಟೆಯ ಮೇಲೆ ಕುಳಿತು ಮಾಹಿತಿಯನ್ನು ಕೇಳಿ ಬರೆದುಕೊಂಡು ಬರುತ್ತಿದ್ದ ಆಹಾರ ನಿರೀಕ್ಷಕರು ಇನ್ನು ಮುಂದೆ ನಿಮ್ಮ ಮನೆಯಲ್ಲಿರುವ ಅಡುಗೆ ಮನೆಯವರೆಗೂ ಬರಲಿದ್ದಾರೆ. ಸೂರು ಒಂದೇ ಇದ್ದರೂ ಎರಡು ಅಡುಗೆ ಮನೆಗಳಿರಬೇಕು. ಒಂದೇ ಸೂರಿನಲ್ಲಿ, ಒಂದೇ ಅಡಿಗೆ ಮನೆ ಇದ್ದರೆ, ಹೊಸ ಪಡಿತರ ಚೀಟಿಗೆ ಸಲ್ಲಿಸಿರುವ ಅರ್ಜಿಯನ್ನು ತಿರಸ್ಕರಿಸಲಾಗುವುದು.
ಕಟ್ಟು ನಿಟ್ಟಿನ ಸೂಚನೆ: ಪಡಿತರ ಚೀಟಿಯಲ್ಲಿನ ಕುಟುಂಬ ವಿಭಜನೆಯನ್ನು ಆಹಾರ ನಿರೀಕ್ಷಕರು ಮಾಡದಿರುವಂತೆ ಇದೇ ಜೂ.13 ರಂದು ನಡೆದ ಆಹಾರ, ನಾಗರೀಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯ ಉಪ ನಿರ್ದೇಶಕರುಗಳ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ. ಇದನ್ನು ಪಾಲನೆ ಮಾಡುವಂತೆ ಇಲಾಖೆಯ ಆಯುಕ್ತರು ಸುತ್ತೋಲೆ ಹೊರಡಿಸಿದ್ದಾರೆ.
ಕುಟುಂಬ ವಿಭಜನೆ ಮೇಲೆ ನಿಗಾ: ಇದಕ್ಕೆ ನೀಡಿರುವ ಕಾರಣ, ಪಡಿತರ ಚೀಟಿಗಳಿಗೆ ಬದಲಿಸಿದ ದರ ಮತ್ತು ಪ್ರಮಾಣದ ಆಹಾರ ಧಾನ್ಯವನ್ನು ಜುಲೈ ತಿಂಗಳಿಂದ ಜಾರಿಗೆ ತರಲು ಸರ್ಕಾರ ತೀರ್ಮಾನಿಸಿದೆ. ಈ ಹಿನ್ನಲೆಯಲ್ಲಿ ಚಾಲ್ತಿಯಲ್ಲಿರುವ ಪಡಿತರ ಚೀಟಿಗಳ ಕುಟುಂಬ ಸದಸ್ಯರು ಪ್ರತ್ಯೇಕವಾಗಿ ವಾಸ ಮಾಡುತ್ತಿರುವುದಾಗಿ ತಿಳಿಸಿ, ಕುಟುಂಬ ವಿಭಜನೆಯನ್ನು ಮಾಡುವ ಸಾಧ್ಯತೆ ಇರುತ್ತದೆ. ಇಂತಹ ಪ್ರಕರಣಗಳ ಮೇಲೆ ನಿಗಾ ಇಡುವಂತೆ ಉಪ ನಿರ್ದೇಶಕರಿಗೆ ಸೂಚನೆ ನೀಡಲಾಗಿದೆ.
ಪರಿಶೀಲನೆ ಕಡ್ಡಾಯ: ಆ ಸಂದರ್ಭದಲ್ಲಿ ಅನುಸರಿಸಬೇಕಾದ ಕ್ರಮಗಳ ಬಗ್ಗೆ ತಿಳಿಸಲಾಗಿದೆ. ಕುಟುಂಬ ವಿಭಜನೆಯನ್ನು ಕೋರಿ ನೀಡಲಾಗುವ ಅರ್ಜಿಯ ಸ್ಥಳ ಪರಿಶೀಲನೆಯನ್ನು ಆಹಾರ ನಿರೀಕ್ಷಕರು ಕಡ್ಡಾಯವಾಗಿ ಮಾಡಬೇಕು. ಆ ಸಂದರ್ಭದಲ್ಲಿ ಒಂದೇ ವಿದ್ಯುಚ್ಛಕ್ತಿಯ ಆರ್.ಆರ್. ಸಂಖ್ಯೆ, ಗ್ರಾಮ ಪಂಚಾಯ್ತಿ ಮನೆ ಸಂಖ್ಯೆಯಲ್ಲಿ ಪ್ರತ್ಯೇಕವಾಗಿ ವಾಸವಾಗಿರುವುದಾಗಿ ಅರ್ಜಿದಾರ ತಿಳಿಸಿದಾಗ ಪ್ರತ್ಯೇಕವಾಗಿ ಉಪಯೋಗಿಸುತ್ತಿರುವ ಅಡುಗೆ ಮನೆಯನ್ನು ಹೊಂದಿರುವ ಬಗ್ಗೆ ದೃಢೀಕರಣ ಮಾಡಿಕೊಳ್ಳತಕ್ಕದ್ದು. ನಂತರ ಆಹಾರ ನಿರೀಕ್ಷಕರು ತಮ್ಮ ಅಭಿಪ್ರಾಯದೊಂದಿಗೆ ಉಪ ನಿರ್ದೇಶಕರ ಅನುಮೋದನೆಗಾಗಿ ಕಳುಹಿಸಬೇಕು. ಅವಶ್ಯಕತೆ ಇದ್ದರೆ ಸಹಾಯಕ ನಿರ್ದೇಶಕರು ಸ್ಥಳ ಪರಿಶೀಲನೆ ನಡೆಸಬೇಕು.
ಪಡಿತರ ಚೀಟಿ ವಿಭಜನೆಯನ್ನು ಕುಟುಂಬವು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸ್ಥಳಾಂತರವಾಗಿರುವುದಾಗಿ ತಿಳಿಸಿ ಡಿಲೀಷನ್ ದೃಢೀಕರಣ ಪತ್ರವನ್ನು ಕೋರಿದಲ್ಲಿ ಮಾತ್ರ ಪಡಿತರ ಚೀಟಿ ವಿಭಜನೆಯನ್ನು ಮಾಡುವಂತೆ ಆಹಾರ ನಿರೀಕ್ಷಕರಿಗೆ ಸೂಚಿಸಲು ಉಪ ನಿರ್ದೇಶಕರುಗಳಿಗೆ ಸೂಚನೆ ನೀಡಲಾಗಿದೆ.
ಸರ್ಕಾರದ ಈ ಸೂಚನೆಯಲ್ಲಿ ಎರಡು ಅಂಶ ದೃಢವಾಗುತ್ತದೆ. ಒಂದು- ಜುಲೈ ತಿಂಗಳಿಂದ ಒಂದು ರುಪಾಯಿ ದರದಲ್ಲಿ ಅಕ್ಕಿ ವಿತರಣೆ, ಮತ್ತೊಂದು- ಕಡಿಮೆ ದರದ ಅಕ್ಕಿಯನ್ನು ಪಡೆಯಲು ಒಂದಕ್ಕಿಂತ ಹೆಚ್ಚು ಕಾರ್ಡ್‌ಗಳನ್ನು ಪಡೆಯುವ ಸಾಧ್ಯತೆ ಹೆಚ್ಚಿದೆ.

- ಆರ್. ತಾರಾನಾಥ್ 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.