ಪ್ರಸಾದ ನಿಲಯ ಪ್ರವೇಶ ಪ್ರಾರಂಭ
ಕ.ಪ್ರ.ವಾರ್ತೆ, ಕಡೂರು, ಜೂ.23
ಬೆಂಗಳೂರಿನ ರಾವ್ ಬಹುದ್ದೂರ್ ಧರ್ಮ ಪ್ರವರ್ತಕ ಗುಬ್ಬಿ ತೋಟದಪ್ಪ ಧರ್ಮ ಸಂಸ್ಥೆಯಿಂದ ಇದುವರೆಗೆ ರು. 1.10 ಲಕ್ಷ ಬಡ ವಿದ್ಯಾರ್ಥಿಗಳಿಗೆ ಉಚಿತ ವಸತಿ ಊಟ ನೀಡಿ, ಅವರು ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ನೆರವಾಗಿದೆ ಎಂದು ಸಂಸ್ಥೆಯ ಗೌರವಾಧ್ಯಕ್ಷ ಎಚ್.ಕೆ. ಶಿವಾನಂದ ಹೇಳಿದರು.
ಅವರು ಕಡೂರು ಪಟ್ಟಣದ ವೀರಶೈವ ಕ್ಷೇಮಾಭಿವೃದ್ಧಿ ಸಂಘ, ಬೆಂಗಳೂರಿನ ಗುಬ್ಬಿ ತೋಟದಪ್ಪ ಧರ್ಮಸಂಸ್ಥೆ ಸಂಯಕ್ತ ಆಶ್ರಯದಲ್ಲಿ ನಡೆಸುತ್ತಿರುವ ಉಚಿತ ಪ್ರಸಾದ ನಿಲಯದ ಪ್ರವೇಶ ದಾಖಲಾತಿ ಸಮಾರಂಭದಲ್ಲಿ ಕಡೂರು ಘಟಕ ನೀಡಿದ ಅಭಿನಂದನೆ ಸ್ವೀಕರಿಸಿ ಮಾತನಾಡಿದರು.
110 ವರ್ಷ: 1903ರಲ್ಲಿ ಆರಂಭವಾದ ವೀರಶೈವ ಸಮುದಾಯಕ್ಕೆ ಮೀಸಲಾಗಿರುವ ಗುಬ್ಬಿ ತೋಟದಪ್ಪ ಧರ್ಮಸಂಸ್ಥೆಗೆ 110 ವರ್ಷಗಳು ಸಂದಿದ್ದು, ಇದುವರೆಗೆ ಉಚಿತ ವಸತಿ, ಊಟ, ಸವಲತ್ತು ಪಡೆದ ರಾಜ್ಯದ ಲಕ್ಷಾಂತರ ಜನರು ಇಂದು ಸಮಾಜದ ಅತ್ಯಂತ ಉನ್ನತ ಹುದ್ದೆಗಳಲ್ಲಿದ್ದಾರೆ ಎಂದರು.
ಧರ್ಮ ಸಂಸ್ಥೆಯ ಸಹಕಾರದಿಂದ ಸಾವಿರಾರು ಮಂದಿ ಎಂಜಿನಿಯರ್, ವೈದ್ಯರಾಗಿ, ರಾಜಕೀಯ ಮುಖಂಡರಾಗಿ ಸಮಾಜ ಸೇವಕರಾಗಿಯೂ ಸೇವೆ ಸಲ್ಲಿಸುತ್ತಿರುವ ಜೊತೆ ಸಂಸ್ಥೆಯ ಸಹಕಾರವನ್ನು ಇಂದಿಗೂ ಮರೆತಿಲ್ಲ ಎಂದವರುಹೇಳಿದರು.
ಅದೇ ರೀತಿಯಲ್ಲಿ ರಾಜ್ಯದ ಸುಮಾರು 21 ಉಚಿತ ಪ್ರಸಾದ ನಿಲಯಗಳನ್ನು ಬಡ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ತೆರೆಯಲಾಗಿದೆ. ಅದರಲ್ಲಿ ಕಡೂರು ಕೂಡಾ ಒಂದಾಗಿದ್ದು, ವೀರಶೈವ ಸಮಾಜದ ಮುಖಂಡ ಪಿ.ಕೆ. ರೇವಣ್ಣಯ್ಯ ಮತ್ತು ಅವರ ಸಹಪಾಠಿಗಳ ಸಹಕಾರದಿಂದ ಬಡ ವಿದ್ಯಾರ್ಥಿನಿಯರಿಗೆ ಉಚಿತ ಪ್ರಸಾದ ನಿಲಯ ತೆರೆದು ಸುಮಾರು 50ಕ್ಕೂ ಹೆಚ್ಚು ಮಕ್ಕಳಿಗೆ ಪ್ರೋತ್ಸಾಹಿಸಿರುವ ಹಿನ್ನೆಲೆಯಲ್ಲಿ ಈ ಬಾರಿ ಆ ಸಂಖ್ಯೆ ದುಪ್ಪಟ್ಟಾಗಿದೆ ಎಂದರು.
ಕೊಠಡಿ ಸಮಸ್ಯೆ: ಕೊಠಡಿ ಸಮಸ್ಯೆ ಇದ್ದು, ಸ್ಥಳೀಯ ಸಂಘ ಸಂಸ್ಥೆಗಳ ನೆರವಿನಿಂದ ಕೊಠಡಿ ವ್ಯವಸ್ಥೆ ಮಾಡಿದಲ್ಲಿ ನಾವು 150 ಕ್ಕೂ ಹೆಚ್ಚು ಮಕ್ಕಳಿಗೆ ಆಶ್ರಯ ನೀಡುತ್ತೇವೆ ಎಂದು ಭರವಸೆ ನೀಡಿದರು.
ಸಂಸ್ಥೆಯ ಕಾರ್ಯ ನಿರ್ವಹಣಾಧಿಕಾರಿ ಬೂದಿಹಾಳ್ ಮಾತನಾಡಿ, ರಾಜ್ಯದ ಪ್ರತೀ ಜಿಲ್ಲೆಗಳಲ್ಲಿ ಪ್ರಸಾದ ನಿಲಯ ಆರಂಭಿಸಲು ಮೊದಲು ಪ್ರಯತ್ನಿಸಲಾಗಿತ್ತು. ಆದರೆ ಜಿಲ್ಲಾ ಕೇಂದ್ರಗಳಲ್ಲಿ ಹೆಚ್ಚಿನ ಒಲವು ಮೂಡದ ಕಾರಣ ತಾಲೂಕು ಕೇಂದ್ರಗಳನ್ನು ಆಯ್ಕೆ ಮಾಡಿ 21 ಕಡೆ ಯಶಸ್ಸಿಯಾಗಿ ನಡೆಯುತ್ತಿವೆ ಎಂದರು.
ಸಂಸ್ಥೆಗೆ ಋಣಿ: ಕಡೂರು ತಾಲೂಕು ವೀರಶೈವ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಪಿ.ಕೆ. ರೇವಣ್ಣಯ್ಯ ಮಾತನಾಡಿ, ತಾಲೂಕು ವೀರಶೈವ ಸಮಾಜದ ಕೆಲ ಮುಖಂಡರು ಈ ವಿದ್ಯಾರ್ಥಿ ನಿಲಯ ತೆರೆಯಲು ಅಡ್ಡಿಪಡಿಸಿದ್ದರು.
ಆದರೂ ಸಂಸ್ಥೆ ನಿಲಯ ಆರಂಭಿಸಿ, ಬಡ ವಿದ್ಯಾರ್ಥಿನಿಯರಿಗೆ ಆಸರೆ ನೀಡಿದ್ದರಿಂದ ತಾಲೂಕಿನ ವೀರಶೈವ ಸಮಾಜ ಗುಬ್ಬಿ ತೋಟದಪ್ಪ ಧರ್ಮ ಸಂಸ್ಥೆಗೆ ಋುಣಿಯಾಗಿದೆ ಎಂದರು.
ಸಮಾಜದ ಪುರಸಭಾ ಸದಸ್ಯ ರೇಣುಕಾರಾಧ್ಯರವರನ್ನು ಸನ್ಮಾನಿಸಲಾಯಿತು. ನಿವೃತ್ತ ಕಂದಾಯಾಧಿಕಾರಿ ಶಿವಮೂರ್ತಿ, ಬಳ್ಳೇಕೆರೆ ಶಶಿಧರ್, ದೇವರಾಜ್, ಸಿದ್ರಾಮಪ್ಪ, ಪರಮೇಶ್ವರಪ್ಪ, ಪಂಚನಹಳ್ಳಿ ಜಗದೀಶ್, ತಾಲೂಕಿನ ವಿವಿಧೆಡೆಗಳಿಂದ ಬಂದಿದ್ದ ಹಲವಾರು ಪೋಷಕರು ಹಾಗೂ ವಿದಾರ್ಥಿಗಳು ಸೇರಿದಂತೆ ಕಾರ್ಯಕ್ರಮದಲ್ಲಿ ಹಲವರು ಹಾಜರಿದ್ದರು.
ಇದೇ ಸಂದರ್ಭದಲ್ಲಿ 93 ವಿದ್ಯಾರ್ಥಿನಿಯರನ್ನು ಸಂದರ್ಶಿಸಿ 60 ವಿದ್ಯಾರ್ಥಿನಿಯರನ್ನು ಆಯ್ಕೆ ಮಾಡಲಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

