ರು. 2,068 ಕೋಟಿ ಸಾಲದ ಯೋಜನೆ
ಕ.ಪ್ರ. ವಾರ್ತೆ ಚಿಕ್ಕಮಗಳೂರು ಜೂ.25
ಜಿಲ್ಲೆಯ ಅವಶ್ಯಕತೆಗಳನ್ನು ಹಾಗೂ ಲಭ್ಯವಿರುವ ಅವಕಾಶಗಳನ್ನು ಗಮನದಲಿಟ್ಟುಕೊಂಡು ಕೇಂದ್ರ ಸರ್ಕಾರದ ನೀತಿಗನುಸಾರವಾಗಿ ಪ್ರಸಕ್ತ ಆರ್ಥಿಕ ವರ್ಷಕ್ಕೆ 2,068 ಕೋಟಿ ರು. ಸಾಲದ ಯೋಜನೆ ಸಿದ್ದಪಡಿಸಲಾಗಿದೆ ಎಂದು ಲೀಡ್ಬ್ಯಾಂಕ್ ವ್ಯವಸ್ಥಾಪಕ ಎನ್.ಟಿ. ನಾರಾಯಣಮೂರ್ತಿ ಹೇಳಿದ್ದಾರೆ.
ನಗರದ ಎಂ.ಜಿ. ರಸ್ತೆಯಲ್ಲಿರುವ ಕಾರ್ಪೊರೇಷನ್ ಬ್ಯಾಂಕ್ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ 2013- 14ನೇ ಸಾಲಿನ ಜಿಲ್ಲಾ ವಾರ್ಷಿಕ ಸಮಗ್ರಸಾಲ ಯೋಜನೆಯ ಕೈಪಿಡಿ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿ, ಜಿಲ್ಲೆಯ ಪ್ರಮುಖ ಉದ್ಯಮವಾಗಿರುವ ಕೃಷಿ ಕ್ಷೇತ್ರಕ್ಕೆ 1367 ಕೋಟಿ ರು.ಗಳನ್ನು ನೀಡುವ ಗುರಿ ಹೊಂದಲಾಗಿದ್ದು, ಇದು ಕಳೆದ ಬಾರಿಗಿಂತ ಶೇ. 21 ರಷ್ಟು ವೃದ್ದಿಸಿದೆ ಎಂದರು.
ಶೇ.32 ರಷ್ಟು ಹೆಚ್ಚಾಗಿದೆ: ಈ ಪೈಕಿ ಬೆಳೆ ಸಾಲಕ್ಕೆ 940 ಕೋಟಿ ರು.ಗಳನ್ನು ನಿಗದಿಪಡಿಸಿದ್ದು, ಇದು ಕಳೆದ ಸಾಲಿಗಿಂತ ಶೇ.32 ರಷ್ಟು ಹೆಚ್ಚಾಗಿದೆ. ಸಣ್ಣ ನೀರಾವರಿಗೆ 59 ಕೋಟಿ, ಭೂ ಅಭಿವೃದ್ಧಿಗೆ 97 ಕೋಟಿ, ಕೃಷಿ ಯಂತ್ರೋಪಕರಣಗಳಿಗೆ 63 ಕೋಟಿ ಸೇರಿದಂತೆ ತೋಟಗಾರಿಕೆ ಬೆಳೆಗಳಿಗೆ 110 ಕೋಟಿ, ಸಣ್ಣ ಕೈಗಾರಿಕೆಗೆ 61 ಕೋಟಿ ರು. ಮತ್ತು ಗೃಹ ಹಾಗೂ ಶೈಕ್ಷಣಿಕ ಸಾಲಗಳನ್ನು ಒಳಗೊಂಡಿರುವ ಇತರೆ ಆದ್ಯತೆ ವಲಯಕ್ಕೆ 494 ಕೋಟಿ ರು.ಗಳನ್ನು ನಿಗದಿಸಲಾಗಿದೆ ಎಂದು ಹೇಳಿದರು.
ತಾಲೂಕುವಾರು ವಿವರ: ಚಿಕ್ಕಮಗಳೂರು ತಾಲೂಕಿಗೆ 637, ಮೂಡಿಗೆರೆ- 312, ಕಡೂರು- 262, ತರೀಕೆರೆ- 250, ಕೊಪ್ಪ- 212, ನರಸಿಂಹರಾಜಪುರ- 137, ಶೃಂಗೇರಿ- 112 ಕೋಟಿ ರು.ಗಳನ್ನು ತಾಲ್ಲೂಕುವಾರು ನಿಗದಿಪಡಿಸಲಾಗಿದೆ. ಕಳೆದ ಸಾಲಿನಲ್ಲಿ 1,378 ಕೋಟಿ ಸಾಲವನ್ನು ಆದ್ಯತೆ ವಲಯಕ್ಕೆ ನೀಡಿದ್ದು, ಕೃಷಿ ಕ್ಷೇತ್ರಕ್ಕೆ 1,021 ಕೋಟಿ ರು.ಗಳನ್ನು ನೀಡಲಾಗಿದೆ. ಜಿಲ್ಲೆಯ ಬ್ಯಾಂಕಿಂಗ್ ಕ್ಷೇತ್ರದ ಒಟ್ಟು ಠೇವಣಿ 4,560 ಕೋಟಿ ರು.ಗಳಿಗೆ ಹಾಗೂ ಒಟ್ಟು ಸಾಲದ ಮೊತ್ತ 3,437 ಕೋಟಿ ರು.ಗಳಿಗೆ ತಲುಪಿದ್ದು, ಸಾಲ ಠೇವಣಿಯ ಅನುಪಾತ ಶೇ.75 ರಷ್ಟಾಗಿದೆ ಎಂದು ಮಾಹಿತಿ ನೀಡಿದರು.
ಬ್ಯಾಂಕಿಂಗ್ ಕ್ಷೇತ್ರದ 2013-14 ನೇ ಸಾಲಿನ ಜಿಲ್ಲಾ ವಾರ್ಷಿಕ ಸಮಗ್ರಸಾಲ ಯೋಜನೆಯ ಕೈಪಿಡಿಯನ್ನು ಜಿಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪಿ. ಶಿವಶಂಕರ್ ಬಿಡುಗಡೆ ಮಾಡಿದರು. ಬೆಂಗಳೂರು ರಿಸರ್ವ್ ಬ್ಯಾಂಕ್ ಉಪ ಮಹಾಪ್ರಬಂದಕ ಪಾರ್ವತಿ ಶರ್ಮ, ಕಾರ್ಪೊರೇಷನ್ ಬ್ಯಾಂಕ್ ಉಡುಪಿ ವಲಯ ಉಪ ಮಹಾಪ್ರಬಂದಕ ಎನ್. ಮಂಜುನಾಥ್ ಶೆಣೈ ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

