ಯಶಸ್ವಿಯಾಗಿ ಎರಡು ವರ್ಷ ಪೂರ್ಣ
ಶಿವಮೊಗ್ಗ: ನಂಜಪ್ಪ ಲೈಫ್ಕೇರ್ ಆಸ್ಪತ್ರೆ ಯಶಸ್ವಿಯಾಗಿ 2 ವರ್ಷ ಪೂರೈಸಿದ್ದು, ಈ ಅವಧಿಯಲ್ಲಿ 400ಕ್ಕೂ ಹೆಚ್ಚು ಹೃದಯ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಈ ಮೂಲಕ ಮಲೆನಾಡು ಭಾಗದ ಜನರಿಗೆ ಉತ್ತಮ ಸೇವೆ ಸಲ್ಲಿಸಿದ ಹೆಮ್ಮೆ ಇದೆ ಎಂದು ಆಸ್ಪತ್ರೆ ಮುಖ್ಯ ಹೃದ್ರೋಗ ತಜ್ಞ ಡಾ. ನರೇಂದ್ರ ತಿಳಿಸಿದರು.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಲೆನಾಡು ಭಾಗದಲ್ಲಿ ಅತ್ಯಾಧುನಿಕ ಹೃದ್ರೋಗ ಸೌಲಭ್ಯ ಹೊಂದಿದ ಆಸ್ಪತ್ರೆ ಎಂಬ ಹೆಗ್ಗಳಿಕೆಗೆ ನಂಜಪ್ಪ ಲೈಫ್ಕೇರ್ ಪಾತ್ರವಾಗಿದ್ದು, 2 ವರ್ಷಗಳಲ್ಲಿಯೇ 3,500ಕ್ಕೂ ಹೆಚ್ಚು ಕ್ಯಾಥ್ ಲ್ಯಾಬ್ ಪ್ರಕ್ರಿಯೆ ನಿರ್ವಹಿಸಿದ್ದು, ಸುಮಾರು 27 ಸಾವಿರಕ್ಕೂ ಹೆಚ್ಚು ರೋಗಿಗಳಿಗೆ ಚಿಕಿತ್ಸೆ ನೀಡಲಾಗಿದೆ ಎಂದರು.
ತೆರೆದ ಹೃದಯ ಚಿಕಿತ್ಸೆ: ನಂಜಪ್ಪ ಲೈಫ್ಕೇರ್ ತೆರೆದ ಹೃದಯ ಶಸ್ತ್ರಚಿಕಿತ್ಸೆ ನಡೆಸಿದ ಮಲೆನಾಡು ಭಾಗದ ಮೊದಲ ಆಸ್ಪತ್ರೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ಹೇಳಿದ ಅವರು, ಹಲವು ಕ್ಲಿಷ್ಟಕರ ಸಮಸ್ಯೆ ಪರಿಹರಿಸಲಾಗಿದೆ. 4 ವರ್ಷದ ಬಾಲಕನಿಗೆ ಜನ್ಮತಃ ಬಂದ ಹೃದಯದ ರಂಧ್ರ ಚಿಕಿತ್ಸೆ ನಡೆಸಿರುವುದು ಪ್ರಮುಖ ಸಾಧನೆ ಎಂದರು.
10 ವರ್ಷದ ಬಾಲಕಿಗೆ ಪಲ್ಕನರಿ ಬಲೂನ್ ವಾಲ್ವೋಟಿಮಿಯಾ ಜೊತೆಗೆ ಶಸ್ತ್ರ ಚಿಕಿತ್ಸೆ ಇಲ್ಲದೇ ಹುಟ್ಟಿನಿಂದ ಬಂದ ಹೃದಯ ಸಮಸ್ಯೆ ನಿವಾರಿಸಲಾಗಿದೆ. ಮಹಾನಗರ ಹೊರತುಪಡಿಸಿ ಉಳಿದ ನಗರಗಳಲ್ಲಿ ಇಂತಹ ಸಂಕೀರ್ಣ ಚಿಕಿತ್ಸೆ ನಡೆಸಿರುವ ಉದಾಹರಣೆ ಇಲ್ಲ ಎಂದು ಮಾಹಿತಿ ನೀಡಿದರು.
ಸರ್ಕಾರಿ ಯೋಜನೆ: ಸರ್ಕಾರದ ವಿವಿಧ ಯೋಜನೆಗಳಾದ ವಾಜಪೇಯಿ ಆರೋಗ್ಯ ಶ್ರೀ, ಸುವರ್ಣ ಆರೋಗ್ಯ ಚೈತನ್ಯ, ಯಶಸ್ವಿನಿ, ಇಎಸ್ಐ ಮೂಲಕ ಸುಮಾರು 1,100ಕ್ಕೂ ಹೆಚ್ಚು ಅಧಿಕ ರೋಗಿಗಳು ಪ್ರಯೋಜನ ಪಡೆದಿದ್ದಾರೆ. 2 ವರ್ಷದ ಅವಧಿಯಲ್ಲಿ ಕೊರೊನರಿ ಆರ್ಟರಿ ಬೈಪಾಸ್ ಸರ್ಜರಿ, ಹೃದಯ ಕವಾಟ ಮರು ಜೋಡಣೆ, ಕವಾಟ ದುರಸ್ತಿ, ಹುಟ್ಟಿನಿಂದಲೇ ಕಾಣಿಸಿಕೊಂಡ ಹೃದಯ ಸಂಬಂಧಿ ದೋಷಗಳ ಸರ್ಜರಿ ಇತ್ಯಾದಿ ಸೇರಿದಂತೆ 400ಕ್ಕೂ ಹೆಚ್ಚು ಹೃದಯ ಶಸ್ತ್ರ ಚಿಕಿತ್ಸೆಯನ್ನು ಯಶಸ್ವಿಯಾಗಿ ಕೈಗೊಳ್ಳಲಾಗಿದೆ ಎಂದವರು ಹೇಳಿದರು.
ಜೊತೆಗೆ ಆಂಜಿಯೋ ಪ್ಲಾಸ್ಟಿ, ಆಂಜಿಯೋಗ್ರಾವ್ಸ್, ಸಾಧನಗಳ ಮೂಲಕ ಸರ್ಜರಿ ಇಲ್ಲದೆ ಹೃದಯದಲ್ಲಿನ ರಂಧ್ರಗಳನ್ನು ಮುಚ್ಚುವ ಪ್ರಕ್ರಿಯೆಯನ್ನು ಯಶಸ್ವಿಯಾಗಿ ನಿರ್ವಹಿಸಲಾಗಿದೆ ಎಂದರು.
ಆಸ್ಪತ್ರೆಯ ವೈದ್ಯ ಡಾ. ನಿಶಾನಿಮಠ್ ಮಾತನಾಡಿ, ಕೈಗೆಟಕುವ ದರದಲ್ಲಿ ಗುಣಮಟ್ಟದ ಸೌಲಭ್ಯ ಒದಗಿಸಿರುವ ಹೆಮ್ಮೆ ಇದೆ. ಮುಂದಿನ ದಿನಗಳಲ್ಲಿ ಹೃದಯ ಸಂಬಂಧಿ ರೋಗ ಬಾರದಂತೆ ತಡೆಯಲು ಸಹಾಯ ಮಾಡುವುದರ ಜೊತೆಗೆ ಇದರಿಂದ ಬಳಲುತ್ತಿರುವವರನ್ನು ಗುಣಪಡಿಸುವುದು ಆಸ್ಪತ್ರೆಯ ಆದ್ಯತೆಯಾಗಿದೆ ಎಂದು ಹೇಳಿದರು.
160 ಹಾಸಿಗೆ: ಆಸ್ಪತ್ರೆಯಲ್ಲಿ 160 ಹಾಸಿಗೆ ಸೇರಿದಂತೆ ಹಲವು ಸೌಲಭ್ಯ ಒಳಗೊಂಡಿದ್ದು, 24 ಗಂಟೆ ಕಾರ್ಯ ನಿರ್ವಹಿಸುವ ಸಿಸಿಯು ನಿಗಾಘಟಕ ಸೇರಿ ಅತ್ಯಾಧುನಿಕ ತಂತ್ರಜ್ಞಾನ ಸಾಧನ ಮತ್ತು ತಜ್ಞ ವೈದ್ಯರ ತಂಡವನ್ನೊಳಗೊಂಡಿದೆ ಎಂದರು. ವೈದ್ಯ ಅವಿನಾಶ್, ಹರೀಶ್ ಮೊದಲಾದವರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

