ಸೋರುತಿದೆ ಶಿಕ್ಷಕರ ಸೂರು
ಕ.ಪ್ರ.ವಾರ್ತೆ, ನ.ರಾ.ಪುರ, ಜೂ.30
35 ವರ್ಷದ ಹಿಂದೆ ನಿರ್ಮಿಸಿದ್ದ ಕುದುರೆಗುಂಡಿ ಸರ್ಕಾರಿ ವಸತಿ ಗೃಹ ಕಳಪೆ ಕಾಮಗಾರಿಯಿಂದಾಗಿ ತಲೆ ಮೇಲೆ ಉರುಳುವ ಸ್ಥಿತಿಗೆ ತಲಪಿದ್ದು, ಬಾಡಿಗೆಗೆ ಇರುವ ನಾಲ್ಕು ಶಿಕ್ಷಕರ ಕುಟಂಬ ಜೀವ ಭಯದಿಂದ ಸರ್ಕಾರಿ ವಸತಿಗೃಹದಲ್ಲಿ ವಾಸ ಮಾಡುತ್ತಿದ್ದಾರೆ.
ಕುದುರೆಗುಂಡಿ ರೈಸ್ಮಿಲ್ ಎದುರು ಎದುರು ಇರುವ ನಾಲ್ಕು ಸರ್ಕಾರಿ ವಸತಿಗೃಹಗಳು ಪೂರ್ಣ ಜೀರ್ಣಾವಸ್ಥೆಗೆ ತಲಪಿದ್ದು, ಕಳಪೆ ಕಾಮಗಾರಿಯಿಂದಾಗಿ ಕಟ್ಟಡದ ಆರ್.ಸಿ.ಸಿ.ಯು ಒಂದೊಂದಾಗಿ ಕಳಚಿ ಬೀಳುತ್ತಿದೆ. ಮಳೆಗಾಲ ಬಂತಂದರೆ ಎಲ್ಲಾ ಕಡೆ ಸೋರುತ್ತಿದ್ದು, ಈ ನಾಲ್ಕು ಸರ್ಕಾರಿ ವಸತಿ ಗೃಹದಲ್ಲಿ ಬಾಡಿಗೆಗೆ ಇರುವ ಶಿಕ್ಷಕರು ಜೀವ ಹಿಡಿದುಕೊಂಡು ಬದುಕುವಂತಾಗಿದೆ.
ಕಲ್ಲು ಉರುಳಿ ಬೀಳುತ್ತದೆ: ಮೇಲ್ನೋಟಕ್ಕೆ ಈ ವಸತಿ ಗೃಹ ಸರಿಯಾಗಿಯೇ ಇದೆ ಎಂದು ಕಾಣುತ್ತಿದ್ದರೂ, ಕಟ್ಟಡದ ಒಳಗೆ ಹೋದರೆ ನೈಜ ಸ್ಥಿತಿ ಅರಿವಿಗೆ ಬರುತ್ತದೆ. ಕಟ್ಟಡದ ಒಳಭಾಗದ ಆರ್.ಸಿ.ಸಿ. ಸಂಪೂರ್ಣ ಕಿತ್ತು ಹೋಗಿದ್ದು, ಸರಳುಗಳು ಕಾಣುತ್ತಿದೆ.
ಮಳೆಗಾಲ ಬಂದ ತಕ್ಷಣ ಮೇಲಿನಿಂದ ತುಕ್ಕು ಹಿಡಿದ ಸರಳು, ಸಿಮೆಂಟು ಚೂರು, ಕಲ್ಲುಗಳು ಕಳಚಿ ಬೀಳುತ್ತದೆ. ಮಳೆಗಾಲ ಶುರುವಾದ ಕೂಡಲೇ 4 ವಸತಿ ಗೃಹದ ಶಿಕ್ಷಕರು ತಮ್ಮ ಸ್ವಂತ ಖರ್ಚಿನಲ್ಲಿ ಸಾವಿರಾರು ರೂ. ಖರ್ಚು ಮಾಡಿ ದೊಡ್ಡ ಪ್ಲಾಸ್ಟಿಕ್ ತಂದು ಮನೆ ಮೇಲೆ ಮುಚ್ಚಿ ಮಳೆಯಿಂದ ಸೋರುವುದನ್ನು ತಡೆ ಗಟ್ಟಲು ತಾತ್ಕಾಲಿಕ ವ್ಯವಸ್ಥೆ ಮಾಡಿಕೊಳ್ಳುತ್ತಾರೆ. ಆದರೆ ತುಕ್ಕು ಬಂದ ಸರಳು, ಕಳಪೆ ಕಾಮಗಾರಿಯಿಂದ ಅಲ್ಲಲ್ಲಿ ಬಿರುಕು ಬಿಟ್ಟ ಸಿಮೆಂಟುಗಳು ಎಲ್ಲಿ ತಲೆ ಮೇಲೆ ಬೀಳುತ್ತದೋ ಎಂಬ ಆತಂಕದಿಂದ ದಿನ ನೀಡುತ್ತಿರುವ ಶಿಕ್ಷಕರ ಕುಟುಂಬಗಳ ಪಾಡು ಹೇಳ ತೀರದು.
ಮನವಿಗೆ ಸ್ಪಂದಿಸಿಲ್ಲ:
2 ವರ್ಷಗಳ ಹಿಂದೆಯೇ ಲೋಕೋಪಯೋಗಿ ಇಲಾಖೆಗೆ, ಜನಪ್ರತಿನಿಧಿಗಳಿಗೆ ಈ ಬಗ್ಗೆ ಮನವಿ ಸಲ್ಲಿಸಿದ್ದೆವು. ಆದರೂ ಯಾವುದೇ ದುರಸ್ತಿ ಕಾರ್ಯ ನಡೆದಿಲ್ಲ ಎನ್ನುತ್ತಾರೆ ಸರ್ಕಾರಿ ವಸತಿಗೃಹದಲ್ಲಿ ವಾಸ ಮಾಡುತ್ತಿರುವ ಶಿಕ್ಷಕ ಬಸವರಾಜ್.
ಈ ಸಮಸ್ಯೆ ಬಗ್ಗೆ ಕೊಪ್ಪ ತಾಪಂ ಕೆಡಿಪಿ ಸಭೆಯಲ್ಲೂ ಚರ್ಚೆಯಾಗಿ ವಸತಿಗೃಹ ದುರಸ್ತಿ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದರೂ, ಪ್ರಯೋಜನವಾಗಿಲ್ಲ. ವಸತಿ ಗೃಹದ ಕಿಟಕಿ ಬಾಗಿಲೂ ಸಹ ಜಖಂ ಆಗಿದೆ. ಊಟಕ್ಕೆ ಕುಳಿತರೂ ಮೇಲಿನಿಂದ ಸಿಮೆಂಟ್ ಚೂರುಗಳು ಬೀಳುತ್ತದೆ. ಹಗಲೂ, ರಾತ್ರಿ ಭಯದಿಂದಲೇ ದಿನ ಕಳೆಯುತ್ತೇವೆ ಎನ್ನುತ್ತಾರೆ ಆ ವಸತಿಗೃಹದ ಕುಟುಂಬ ಸದಸ್ಯರು.
ಅನಾಹುತ ಆಗುವ ಮುನ್ನ: ನಾಲ್ಕು ಶಿಕ್ಷಕರೂ ಸಹ ತಮ್ಮ ವೇತನಕ್ಕೆ ತಕ್ಕಂತೆ ರು. 1,500ರಿಂದ ರು. 2,000 ದವೆರೆಗೆ ಬಾಡಿಗೆ ಕಟ್ಟುತ್ತಾರೆ. ಕುದುರೆಗುಂಡಿಯಲ್ಲಿ ಬೇರೆ ಬಾಡಿಗೆ ಮನೆಗಳಿಲ್ಲವಾಗಿದೆ. ಸೀತೂರು, ಕುದುರೆಗುಂಡಿ, ಕಾನೂರು ಹಾಗೂ ಜೋಗಿಸರದ ಶಿಕ್ಷಕರ ಕುಟಂಬಗಳು ಇಲ್ಲಿ ವಾಸವಾಗಿದ್ದಾರೆ.
ಕಟ್ಟಡದ ತಳಪಾಯ, ಗೋಡೆ ಗಟ್ಟಿಯಾಗಿದ್ದು, ಆರ್.ಸಿ.ಸಿ. ಹೊಸದಾಗಿ ಹಾಕಬೇಕಾಗಿದೆ. ಈ ದೇಶದ ಮಕ್ಕಳ ಭವಿಷ್ಯ ರೂಪಿಸುವ ಶಿಕ್ಷಕರ ವಸತಿಗೃಹ ದುರಸ್ತಿ ಮಾಡಿಸಿಕೊಡದ ಸಂಬಂಧ ಪಟ್ಟ ಇಲಾಖೆ, ಸದಾ ಭಯದಿಂದ ಬದುಕುವ ವಾತಾವರಣ ನಿರ್ಮಿಸಿದೆ. ಜನಪ್ರತಿನಿಧಿಗಳು ಕೂಡಾ ನಿರ್ಲಕ್ಷ್ಯ ವಹಿಸುತ್ತಿದ್ದಾರೆ.
ಮುಂದೆ ಅನಾಹುತ ಆಗುವ ಮುನ್ನ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು, ಜನಪ್ರತಿನಿಧಿಗಳು ಈ ವಸತಿಗೃಹಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಬೇಕಾಗಿದೆ.
- ಯಡಗೆರೆ ಮಂಜುನಾಥ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

