ಟೀಕೆಗೆ ಗುರಿಯಾದ 'ರವಿಕಿರಣ'
ಕ.ಪ್ರ.ವಾರ್ತೆ, ಚಿಕ್ಕಮಗಳೂರು, ಮಾ. 4
ಉನ್ನತ ಶಿಕ್ಷಣ ಸಚಿವ ಸಿ.ಟಿ. ರವಿ ಅವರು ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದಲ್ಲಿ ಕೈಗೊಂಡಿರುವ ಅಭಿವೃದ್ಧಿ ಕೆಲಸಗಳ ಬಗ್ಗೆ ಹೊರ ತಂದಿರುವ 'ರವಿಕಿರಣ' ಹೊತ್ತಿಗೆ ಪ್ರತಿಪಕ್ಷಗಳ ಕಟು ಟೀಕೆಗೆ ಗುರಿಯಾಗಿದೆ.
ಜೆಡಿಎಸ್ ಹಾಗೂ ಕೆಜೆಪಿ ಪಕ್ಷಗಳು, ಅಭಿವೃದ್ಧಿ ಕೆಲಸಗಳ ಬಗ್ಗೆ ಜನರಿಗೆ ಮಾಹಿತಿ ನೀಡುವ ಜತೆಗೆ ಕಳಪೆ ಕಾಮಗಾರಿಯ ಕುರಿತ ವಿವರವನ್ನು ಸಹ ಜನರಿಗೆ ನೀಡಬೇಕಾಗಿತ್ತು ಎಂದು ಹೇಳಿವೆ.
ದಂಟರಮಕ್ಕಿ ಕೆರೆಯ ಮಧ್ಯದಲ್ಲಿ ಸ್ವಾಮಿ ವಿವೇಕಾನಂದರ ಪ್ರತಿಮೆ ಇಡಲಾಗುವುದು. ಈ ಕೆರೆಯ ಸುತ್ತಲೂ ಫುಟ್ಪಾತ್ ನಿರ್ಮಾಣ ಮಾಡಿ, ವಾಯುವಿಹಾರಕ್ಕೆ ಅನುಕೂಲ ಕಲ್ಪಿಸಲಾಗುವುದೆಂದು ಈ ಕ್ಷೇತ್ರದ ಶಾಸಕರು ಹೇಳಿದ್ದರು. ಕೆರೆ ಮೇಲಿನ ರಸ್ತೆಯನ್ನು ಅಗಲ ಮಾಡಿ ನಾಲ್ಕು ಬಾರಿ ಡಾಂಬರ್ ಮಾಡಲಾಯಿತು. ಇಲ್ಲಿಗೆ ಸುಮಾರು 16 ಕೋಟಿ ಖರ್ಚಾದರೂ ಹೇಳಿದಂತೆ ಕೆಲಸಗಳು ಆಗಿಲ್ಲ. ಈ ಬಗ್ಗೆ ಶಾಸಕರು ತಮ್ಮ ರವಿಕಿರಣ ಹೊತ್ತಿಗೆಯಲ್ಲಿ ಜನರಿಗೆ ಮಾಹಿತಿಯನ್ನು ನೀಡಬೇಕಾಗಿತ್ತು. ಇದು, ಕೂಡ ಅಭಿವೃದ್ಧಿ ಕೆಲಸ ಅಲ್ಲವೇ ಎಂದು ಜೆಡಿಎಸ್ ಜಿಲ್ಲಾ ಕಾರ್ಯಾಧ್ಯಕ್ಷ ಎಸ್.ಎಲ್. ಭೋಜೇಗೌಡ ಸೋಮವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದ್ದಾರೆ.
ಕಳಪೆ ಕಾಮಗಾರಿ: ಕೋಟೆ ಕೆರೆ ಅಭಿವೃದ್ಧಿಗೆ 6 ಕೋಟಿ ಖರ್ಚಾಗಿದೆ. ಈ ಕೆಲಸವೂ ಏನಾಗಿದೆ ಎಂಬುದನ್ನು ತಿಳಿಸಬೇಕಾಗಿತ್ತು. ಕಳಪೆ ಕಾಮಗಾರಿ ಮಾಡಿದವರನ್ನು ಕಪ್ಪು ಪಟ್ಟಿಗೆ ಸೇರಿಸಲಾಗುವುದು ಎಂದು ಹೇಳಿದ್ದರು. ಈ ವರೆಗೆ ಎಷ್ಟು ಜನರನ್ನು ಕಪ್ಪು ಪಟ್ಟಿಗೆ ಸೇರಿಸಲಾಗಿದೆ ಎಂದು ಪ್ರಶ್ನಿಸಿದ ಭೋಜೇಗೌಡ, ನಗರದಲ್ಲಿ ನಡೆಯುತ್ತಿರುವ ಒಳ ಚರಂಡಿ ಕಾಮಗಾರಿ ಕಳಪೆ ಗುಣಮಟ್ಟದ್ದಾಗಿದ್ದು, ಇದೇ ರೀತಿಯಲ್ಲಿ ಕಾಮಗಾರಿ ಮುಂದುವರೆದಿದ್ದಲ್ಲಿ ಮುಂದಿನ ದಿನಗಳಲ್ಲಿ ನಗರದಲ್ಲಿ ಮೂಗು ಮುಚ್ಚಿ ಓಡಾಡಬೇಕಾದ ಪರಿಸ್ಥಿತಿ ಬರಬಹುದು ಎಂದರು.
ಒಮ್ಮೆ ವಾರ್ಡ್ಗೆ ಬನ್ನಿ: ಶಾಸಕರು ಚುನಾವಣೆ ಸಂದರ್ಭದಲ್ಲಿ ಜನರಿಗೆ ತಮ್ಮ ಅವಧಿಯಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಮಾಹಿತಿಯನ್ನು ಪುಸ್ತಕದ ಮೂಲಕ ನೀಡಿದ್ದಾರೆ. ಅವರು, ಚಿಕ್ಕಮಗಳೂರು ನಗರದಲ್ಲಿ ನಾವು ಹೇಳುವ ವಾರ್ಡ್ಗಳಿಗೆ ಬರಲಿ ಯಾವ ಕೆಲಸಗಳು ಏನೇನೂ ಆಗಿವೆ ಎಂಬುದನ್ನು ತೋರಿಸುತ್ತೇವೆ ಎಂದು ಕೆಜೆಪಿ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಎಚ್.ಎಚ್. ದೇವರಾಜ್ ಹೇಳಿದರು.
ಸುಮಾರು 25 ಲಕ್ಷ ಖರ್ಚು ಮಾಡಿ ಪುಸ್ತಕ ಮುದ್ರಣ ಮಾಡಲಾಗಿದೆ. ಇಂತಹ ಗಿಮಿಕ್ ರಾಜಕಾರಣ ನಡೆಯುವುದಿಲ್ಲ ಎಂದರು.
ಹೊಂದಾಣಿಕೆ ರಾಜಕಾರಣ: ಆರೋಪ
ಕ.ಪ್ರ ವಾರ್ತೆ, ಚಿಕ್ಕಮಗಳೂರು, ಮಾ. 4
ಚಿಕ್ಕಮಗಳೂರು ನಗರಸಭಾ ಚುನಾವಣೆಯಲ್ಲಿ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಹೊಂದಾಣಿಕೆ ರಾಜಕಾರಣ ಮಾಡುತ್ತಿವೆ ಎಂದು ಕೆಜೆಪಿ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಎಚ್.ಎಚ್. ದೇವರಾಜ್ ಆರೋಪಿಸಿದ್ದಾರೆ.
ಕೆಜೆಪಿ ಪಕ್ಷ ಸೋಲಿಸಲು ಕುತಂತ್ರ ಮಾಡುತ್ತಿವೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.
ಕೆಜೆಪಿ ಪಕ್ಷ ಉದಯವಾದ ಎರಡು ತಿಂಗಳಲ್ಲಿ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ಬಂದಿದೆ. ನಮ್ಮ ಪಕ್ಷ ಇತರೆ ಎಲ್ಲಾ ಪಕ್ಷಗಳಿಗೂ ಪ್ರತಿಸ್ಪರ್ಧಿಯಾಗಿದೆ. ಬಿಜೆಪಿ ನೆಲೆ ಕಳೆದುಕೊಂಡಿದೆ. ಹಣ, ಹೆಂಡ ಗುರಿಯಾಗಿಟ್ಟುಕೊಂಡು ಈ ಚುನಾವಣೆಯಲ್ಲಿ ಗೆಲ್ಲಲು ಸಾಧ್ಯವಿಲ್ಲ ಎಂದು ಹೇಳಿದರು.
ಕೆಜೆಪಿ, ಸಾಮಾಜಿಕ ನ್ಯಾಯ ಮತ್ತು ಸೈದ್ಧಾಂತಿಕ ನೆಲೆಯಲ್ಲಿ ಈ ಚುನಾವಣೆ ಎದುರಿಸಲಿದೆ. ಮುಂದಿನ ದಿನಗಳಲ್ಲಿ ಚಿಕ್ಕಮಗಳೂರು ನಗರಸಭೆ ಆಡಳಿತದಲ್ಲಿ ನಿರ್ಣಾಯಕ ಪಾತ್ರ ವಹಿಸಲಿದೆ ಎಂದರು.
ಸಂಸದ ಜಯಪ್ರಕಾಶ್ ಹೆಗ್ಡೆ ಸೇರಿದಂತೆ ಕಾಂಗ್ರೆಸ್ನ ವಿಧಾನಪರಿಷತ್ ಸದಸ್ಯರು ಚಿಕ್ಕಮಗಳೂರು ನಗರದ ಅಭಿವೃದ್ಧಿಗೆ ಒಂದು ರುಪಾಯಿ ಅನುದಾನ ನೀಡಿಲ್ಲ. ಜನರಲ್ಲಿ ಮತ ಕೇಳುವ ನೈತಿಕತೆಯನ್ನು ಕಾಂಗ್ರೆಸ್ ಕಳೆದುಕೊಂಡಿದೆ ಎಂದು ಟೀಕಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

