ಕಾಫಿ ಉದ್ಯಮ ನೆರವಿಗೆ ಅಗ್ರಹ
ಕ.ಪ್ರ. ವಾರ್ತೆ,ಚಿಕ್ಕಮಗಳೂರು,ಮಾ.21
ಅತಿವೃಷ್ಟಿ, ಅನಾವೃಷ್ಟಿ, ಬೆಲೆ ಕುಸಿತ, ಬೆಳೆ ಕುಂಠಿತ, ಗಿಡಗಳಿಗೆ ರೋಗಬಾಧೆ, ಕಾರ್ಮಿಕರ ಕೊರತೆ ಸೇರಿದಂತೆ ಹಲವಾರು ಸಮಸ್ಯೆಗಳಿಂದ ಬಳಲುತ್ತಿರುವ ಕಾಫಿ ಬೆಳೆಗಾರರು ಮತ್ತು ಕಾಫಿ ಉದ್ಯಮದ ನೆರವಿಗೆ ತಕ್ಷಣ ಧಾವಿಸುವಂತೆ ಕರ್ನಾಟಕ ಬೆಳೆಗಾರರ ಒಕ್ಕೂಟ (ಕೆಜಿಎಫ್) ಕೇಂದ್ರ ಸರ್ಕಾರವನ್ನು ಒತ್ತಾಯಿಸಿದೆ.
ರಾಜ್ಯದ ಸಂಸದರಾದ ಜಯಪ್ರಕಾಶ್ ಹೆಗ್ಡೆ, ವಿಶ್ವನಾಥ್ ಮತ್ತು ಧೃವನಾರಾಯಣ್ ನೇತೃತ್ವದಲ್ಲಿ ದೆಹಲಿಯಲ್ಲಿ ಬುಧವಾರ ಕೇಂದ್ರ ವಾಣಿಜ್ಯ ಸಚಿವ ಆನಂದ್ ಶರ್ಮ ಅವರನ್ನು ಭೇಟಿ ಮಾಡಿದ ಕೆಜಿಎಫ್ ಪದಾಧಿಕಾರಿಗಳು ಈ ಸಂಬಂಧ ಮನವಿ ಸಲ್ಲಿಸಿದರು.
ಕಾಫಿ ಬೆಳೆಗಾರರು ಮತ್ತು ಉದ್ಯಮ ಎದುರಿಸುತ್ತಿರುವ ಸಮಸ್ಯೆಗಳನ್ನು ಸಚಿವರಿಗೆ ವಿವರಿಸಿದ ಮುಖಂಡರು, ಬೆಲೆ ಕುಸಿತದಿಂದಾಗಿ ಮಧ್ಯಮ ವರ್ಗದ ಕಾಫಿ ಬೆಳೆಗಾರರು ತಾವು ಪಡೆದಿರುವ ಸಾಲ ಮರುಪಾವತಿಸಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದರು.
ಸಣ್ಣ ಬೆಳೆಗಾರರಿಗೆ ಅನುಕೂಲ: 2010ರಲ್ಲಿ ಕಾಫಿ ಉದ್ಯಮದ ಪುನಶ್ಚೇತನಕ್ಕಾಗಿ ಕೇಂದ್ರ ಸರ್ಕಾರ ನೀಡಿದ್ದ ವಿಶೇಷ ಪ್ಯಾಕೇಜ್‌ನಲ್ಲಿ ಸಣ್ಣ ಬೆಳೆಗಾರರಿಗೆ ಅನುಕೂಲವಾಗಿತ್ತು. ಆದರೆ, ಮಧ್ಯಮ ವರ್ಗದ ಬೆಳೆಗಾರರಿಗೆ ಯಾವುದೇ ಪ್ರಯೋಜನವಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ 2000ದಿಂದ 2013ರವರೆಗೆ ಮಧ್ಯಮ ವರ್ಗದ ಬೆಳೆಗಾರರು ಪಡೆದಿರುವ ಧೀರ್ಘಾವಧಿ ಸಾಲವನ್ನು ಮರುಪಾವತಿಸಲು ಅನುಕೂಲವಾಗುವಂತೆ ಏಕಕಾಲಿಕ ಸಾಲ ತೀರುವಳಿ ಯೋಜನೆ ಜಾರಿಗೆ ತರಬೇಕು ಎಂದು ಒತ್ತಾಯಿಸಿದರು.
ಆ ಯೋಜನೆಯಡಿ ಮಧ್ಯಮ ವರ್ಗದ ಬೆಳೆಗಾರರಿಂದ ಶೇ.60ರಷ್ಟು ಸಾಲವನ್ನು ಪಡೆದು ಉಳಿದ ಶೇ.40ರಷ್ಟನ್ನು ಸರ್ಕಾರ ಮತ್ತು ಬ್ಯಾಂಕ್‌ಗಳು ಭರಿಸಬೇಕು ಎಂದು ಮನವಿ ಮಾಡಿದರು.
ಮನವಿ ಪರಿಶೀಲಿಸುವಂತೆ ವಾಣಿಜ್ಯ ಇಲಾಖೆ ಕಾರ್ಯದರ್ಶಿಗೆ ಸೂಚಿಸಿದ ಸಚಿವರು ಪರಿಶೀಲನೆ ನಂತರ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ಎಐಸಿಸಿ ಸದಸ್ಯೆ ಮೋಟಮ್ಮ, ಕೆಜಿಎಫ್ ಅಧ್ಯಕ್ಷ ಡಾ. ಪ್ರದೀಪ್, ಕೋಮಾರ್ಕ್ ಅಧ್ಯಕ್ಷ ಡಿ.ಎಸ್. ರಘು, ಕಾಫಿ ಮಂಡಳಿ ಮಾಜಿ ಸದಸ್ಯ ಡಿ.ಎಂ. ವಿಜಯ್, ಮೂಡಿಗೆರೆ ಕಾಫಿ ಬೆಳೆಗಾರರ ಸಂಘದ ಮಾಜಿ ಅಧ್ಯಕ್ಷ ಬಿ.ಎಸ್. ಜಯರಾಂ ನಿಯೋಗದಲ್ಲಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

