ವನ್ಯ ಜೀವಿ ಬೇಟೆ: ಇಬ್ಬರ ಬಂಧನ
ಕ.ಪ್ರ.ವಾರ್ತೆ, ನರಸಿಂಹರಾಜಪುರ.ಮಾ.27 ಪಶ್ಚಿಮ ಘಟ್ಟ ಪ್ರದೇಶದಲ್ಲೇ ಅಪರೂಪ ಎನ್ನಲಾದ ಹಾರು ಬೆಕ್ಕು ಹಾಗೂ ಬರ್ಕ ಎಂಬ ವನ್ಯ ಜೀವಿಯನ್ನು ಬೇಟೆಯಾಡಿದ ಇಬ್ಬರು ಆರೋಪಿಗಳನ್ನು ಅರಣ್ಯ ಇಲಾಖೆಯವರು ಬಂಧಿಸಿದ್ದಾರೆ.
ನರಸಿಂಹರಾಜಪುರ ವಲಯ ಅರಣ್ಯ ವ್ಯಾಪ್ತಿಗೆ ಸೇರಿದ ಕುಸುಬೂರು ಗ್ರಾಮದ ತುಮ್ಮಿನಕೆರೆ ಮೇಲ್ಭಾಗದ ಆರಂಬಳ್ಳಿ ಮೀಸಲು ಅರಣ್ಯದಲ್ಲಿ ಹಾರು ಬೆಕ್ಕು ಮತ್ತು ಬರ್ಕ ಎಂಬ ವನ್ಯ ಜೀವಿಯನ್ನು ಹತ್ಯೆ ಮಾಡಿದ ಆರೋಪದ ಮೇಲೆ ಕುಸುಬೂರಿನ ಕೆ. ನಾರಾಯಣ ಮತ್ತು ಕೆ. ಆರ್. ಭಾಸ್ಕರ ಎಂಬ ಆರೋಪಿಗಳನ್ನು ಮುತ್ತಿನಕೊಪ್ಪ ಉಪ ವಲಯ ಅರಣ್ಯಾಧಿಕಾರಿ ಎಚ್.ಎಂ. ಸುರೇಶ್ ಮತ್ತು ಅರಣ್ಯ ರಕ್ಷಕರಾದ ರಂಜಿತ, ಪುನೀತ್ ಅವರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಗುಂಡಿನ ಶಬ್ದ: ಮಾ. 25ರ ರಾತ್ರಿ 10 ಗಂಟೆಗೆ ಅರಣ್ಯ ಇಲಾಖೆ ಸಿಬ್ಬಂದಿ ಮೀಸಲು ಅರಣ್ಯದಲ್ಲಿ ಗಸ್ತು ತಿರುಗುತ್ತಿದ್ದಾಗ ಗುಂಡಿನ ಶಬ್ದ ಕೇಳಿ ಬಂದಿದೆ. ತಕ್ಷಣ ಅರಣ್ಯ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದಾರೆ. ಮತ್ತೊಂದು ಗುಂಡಿನ ಶಬ್ದ ಹಾಗೂ ಬ್ಯಾಟರಿ ಬೆಳಕು ಕಂಡು ಬಂದಿದೆ.
ಆ ಜಾಗಕ್ಕೆ ಅರಣ್ಯ ಇಲಾಖೆಯ ಸಿಬ್ಬಂದಿ ಹೋದಾಗ ಇಬ್ಬರು ಆರೋಪಿಗಳು ವನ್ಯ ಜೀವಿಗಳಾದ ಹಾರು ಬೆಕ್ಕು ಹಾಗೂ ಬರ್ಕವನ್ನು ಬೇಟೆಯಾಡಿದ್ದರು. ನರಸಿಂಹರಾಜಪುರ ವಲಯ ಅರಣ್ಯಾಧಿಕಾರಿ ಕೇಶವಮೂರ್ತಿ ಮಾರ್ಗದರ್ಶನದಲ್ಲಿ ತಕ್ಷಣ ಆರೋಪಿಗಳನ್ನು ಬಂಧಿಸಿದ ಅರಣ್ಯ ಇಲಾಖೆಯ ಸಿಬ್ಬಂದಿ ಮೃತ ಪ್ರಾಣಿ, ಪರವಾನಿಗೆ ಪಡೆದ ಕೋವಿಯನ್ನು ವಶ ಪಡಿಸಿಕೊಂಡಿದ್ದಾರೆ.
ವನ್ಯ ಜೀವಿ ಕಾಯ್ದೆ ಪ್ರಕಾರ ಅಪರಾಧ: ಹಾರು ಬೆಕ್ಕು ಹಾಗೂ ಬರ್ಕ ವನ್ಯಜೀವಿಯಾಗಿದ್ದು, 1972 ರ ವನ್ಯಜೀವಿ ಸಂರಕ್ಷಣಾ ಕಾಯ್ದೆ ಪ್ರಕಾರ ಆ ಪ್ರಾಣಿಗಳನ್ನು ಬೇಟೆಯಾಡುವುದು ಅಪರಾಧವಾಗಿದೆ. ಪಶ್ಚಿಮ ಘಟ್ಟಗಳಲ್ಲೇ ಅಪರೂಪ ಪ್ರಾಣಿ ಎನ್ನಲಾದ ಹಾರು ಬೆಕ್ಕು ಅಳಿಲು ಜಾತಿಗೆ ಸೇರಿದೆ. ಬರ್ಕವು ಜಿಂಕೆಯ ಜಾತಿಗೆ ಸೇರಿದ್ದರೂ ಕುಳ್ಳಗೆ ಇರುತ್ತದೆ ಎಂದು ಅರಣ್ಯ ಇಲಾಖೆಯವರು ಮಾಹಿತಿ ನೀಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

