ಏ.10ರೊಳಗೆ ಬಂದೂಕು ಒಪ್ಪಿಸಿ
ಕ.ಪ್ರ.ವಾರ್ತೆ, ನ.ರಾ. ಪುರ, ಮಾ.28
ನರಸಿಂಹರಾಜಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪರವಾನಗಿ ಪಡೆದ ಬಂದೂಕುಗಳಿದ್ದು, ಚುನಾವಣೆಯ ಹಿನ್ನೆಲೆಯಲ್ಲಿ ಏಪ್ರಿಲ್ 10ರ ಒಳಗೆ ಬಂದೂಕುಗಳನ್ನು ಪೊಲೀಸ್ ಠಾಣೆಗೆ ಒಪ್ಪಿಸಬೇಕು. ಇಲ್ಲದಿದ್ದರೆ ಅಂತವರ ಬಂದೂಕುಗಳ ಲೈಸನ್ ರದ್ದು ಪಡಿಸಲಾಗುವುದು ಎಂದು ಪೊಲೀಸ್ ಠಾಣಾಧಿಕಾರಿ ತಿಮ್ಮರಾಜು ಅರಸು ತಿಳಿಸಿದರು.
ಅವರು ಗುರುವಾರ ಪೊಲೀಸ್ ಠಾಣಾ ಆವರಣದಲ್ಲಿ ಚುನಾವಣಾ ಮಾದರಿ ನೀತಿ ಸಂಹಿತೆ ಬಗ್ಗೆ ವಿವಿಧ ರಾಜಕೀಯ ಪಕ್ಷದ ಮುಖಂಡರಿಗೆ ಮಾಹಿತಿ ನೀಡಿ ಮಾತನಾಡಿದರು. ರಾಜಕೀಯ ಪಕ್ಷದ ಕಾರ್ಯಕರ್ತರು ಹಣ ಸಾಗಿಸುವುದು, ಮತದಾರರಿಗೆ ಹಣ ಹಂಚುವುದು ಕಂಡು ಬಂದರೆ ಕೇಸು ದಾಖಲಿಸಲಾಗುತ್ತದೆ ಎಂದರು.
ಅನುಮತಿ ಅಗತ್ಯ: ಮದ್ಯದ ಅಂಗಡಿಗಳಲ್ಲಿ ಪರವಾನಗಿ ಇದ್ದಷ್ಟು ಮದ್ಯವನ್ನು ಮಾತ್ರ ದಾಸ್ತಾನು ಇಡಬೇಕು. ಧಾರ್ಮಿಕ ಸಭೆ ಮಾಡುವುದಾದರೆ ಮುಂಚಿತವಾಗಿ ಅನುಮತಿ ಪಡೆದಿರಬೇಕು. ಯಾವುದೇ ಧಾರ್ಮಿಕ ಸಭೆಯಲ್ಲಿ ರಾಜಕೀಯ ಪಕ್ಷಗಳ ಚಿಹ್ನೆ, ಭಾವಚಿತ್ರ ಬಳಸಬಾರದು. ಸ್ವಂತ ಕಟ್ಟಡ ಅಥವಾ ಜಾಗವಾದರೂ ಅನುಮತಿ ಇಲ್ಲದೆ ಬ್ಯಾನರ್, ಬಂಟಿಂಗ್ ಕಟ್ಟಬಾರದು. ಯಾವುದೇ ಇಲಾಖೆಯ ಕಟ್ಟಡದ ಮೇಲೆ ಬ್ಯಾನರ್ ಕಟ್ಟಬೇಕಾದರೆ ಆಯಾ ಇಲಾಖೆಯ ಅನುಮತಿ ಅಗತ್ಯ ಎಂದು ಅವರು ತಿಳಿಸಿದರು.
ಧ್ವನಿವರ್ಧಕ, ವಾಹನ ಬಳಸುವಾಗಲೂ ಚುನಾವಣಾಧಿಕಾರಿಗಳ ಅನುಮತಿ ಅಗತ್ಯ. ವಾಹನ ಬಳಸುವುದಾದರೆ ವಾಹನದ ಸಂಖ್ಯೆ ಕೊಟ್ಟಿರಬೇಕು. ಮದುವೆ ಸಂದರ್ಭದಲ್ಲಿ ಅತಿಯಾದ ಸೀರೆ ಸಂಗ್ರಹ ಮಾಡಬಾರದು.ನೀತಿ ಸಂಹಿತೆ ಜಾರಿಗೆ ಎರಡು ಗಸ್ತು ತಂಡ ರಚಿಸಲಾಗಿದೆ.
ಗಸ್ತು ತಂಡ: ರಾತ್ರಿ ಒಂದು ಗಸ್ತು ತಂಡ ಹಾಗೂ ಹಗಲು ಒಂದು ಗಸ್ತು ತಂಡ ಸಂಚರಿಸಲಿದೆ. ಭದ್ರತೆಗಾಗಿ ಬೇರೆ ರಾಜ್ಯಗಳ ಪೊಲೀಸರು ಆಗಮಿಸಲಿದ್ದಾರೆ. ಸ್ಥಳೀಯ ಪೊಲೀಸರು ಅವರೊಂದಿಗೆ ಕೈ ಜೋಡಿಸಲಿದ್ದಾರೆ. ನರಸಿಂಹರಾಜಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 53 ಮತಗಟ್ಟೆಗಳಿವೆ. ಇದರಲ್ಲಿ 9 ಸೂಕ್ಷ್ಮ, 34 ಅತಿ ಸೂಕ್ಷ್ಮ ಹಾಗೂ 10 ಸಾಮಾನ್ಯ ಮತಗಟ್ಟೆ ಎಂದು ಗುರುತಿಸಲಾಗಿದೆ ಎಂದು ಅವರು ತಿಳಿಸಿದರು.
ಬಿಜೆಪಿ ಶೃಂಗೇರಿ ಕ್ಷೇತ್ರ ಅಧ್ಯಕ್ಷ ನೀಲೇಶ್, ಬಿಜೆಪಿ ನಗರ ಅಧ್ಯಕ್ಷ ಮಂಜುನಾಥ್ ಲಾಡ್, ಕಾಂಗ್ರೆಸ್ ಹೋಬಳಿ ಅಧ್ಯಕ್ಷ ಶೇವಿಯಾರ್, ಪ್ರಧಾನ ಕಾರ್ಯದರ್ಶಿ ಕೆ.ಎ. ಅಬೂಬಕರ್, ಜೆಡಿಎಸ್ ತಾಲೂಕು ಅಧ್ಯಕ್ಷ ಇ.ಸಿ. ಜೋಯಿ, ನಗರ ಅಧ್ಯಕ್ಷ ಸತ್ಯನಾರಾಯಣ ಶೆಟ್ಟಿ ಮೊದಲಾದರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

