ಚಿಕ್ಕಮಗಳೂರು

ಪಾರದರ್ಶಕ ಚುನಾವಣೆಗೆ ಬದ್ಧ

Published On :

ಕ.ಪ್ರ ವಾರ್ತೆ, ಸಿರಿಗೆರೆ, ಮಾ.28
ರಾಜಕೀಯ ಪಕ್ಷಗಳಲ್ಲಿ ಭ್ರಷ್ಟಾಚಾರ, ಚುನಾವಣಾ ಅಕ್ರಮ, ಮತದಾರರನ್ನು ದಾರಿತಪ್ಪಿಸುವ ಆಮಿಷ, ಹಣ,  ಹೆಂಡ, ಸೀರೆ, ಪಂಚೆ ಮತ್ತಿತರ ವಸ್ತುಗಳ ಹಂಚುವಿಕೆ ತಡೆಗಟ್ಟಿ ಅತ್ಯಂತ ಪಾರದರ್ಶಕ, ನ್ಯಾಯ ಸಮ್ಮತ ಮೂಲಕ ಚುನಾವಣೆಗಳು ನಡೆದು ಜನಪ್ರತಿನಿಧಿಗಳು ಆಯ್ಕೆಯಾಗಬೇಕೆಂಬುದು ಸಿರಿಗೆರೆಯ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಆಶಯ.  
ಈ ಹಿನ್ನೆಲೆಯಲ್ಲಿ ಡಾ. ಶಿವಮೂರ್ತಿ ಸ್ವಾಮೀಜಿ ಮಾರ್ಗದರ್ಶನದಲ್ಲಿ ಅವರು ನೀಡುವ ಆದೇಶದಂತೆ ಚುನಾವಣೆಯನ್ನು ಎದುರಿಸುವ ಅಪೇಕ್ಷೆ ಹೊತ್ತು ಚಿಕ್ಕಮಗಳೂರು ಕ್ಷೇತ್ರದ ಎಲ್ಲಾ ಪಕ್ಷದ ಸಂಭವನೀಯ ಅಭ್ಯರ್ಥಿಗಳು  ಗುರುವಾರ ಸಿರಿಗೆರೆಯಲ್ಲಿ ಪೂಜ್ಯರನ್ನು ಭೇಟಿ ಮಾಡಿದರು.
ಮುಚ್ಚಳಿಕೆ: ಭಾರತೀಯ ಜನತಾಪಕ್ಷದ ಅಭ್ಯರ್ಥಿ, ಉನ್ನತ ಶಿಕ್ಷಣ ಸಚಿವ ಸಿ.ಟಿ. ರವಿ, ಕಾಂಗ್ರೆಸ್ ಅಭ್ಯರ್ಥಿ ಕೆ.ಎಸ್.  ಶಾಂತೇಗೌಡ, ಬಿ.ಎಂ. ಸಂದೀಪ್, ಜಾತ್ಯತೀತ ಜನತಾದಳದ ಧರ್ಮೇಗೌಡ ಪೂಜ್ಯರನ್ನು ಭೇಟಿ ಮಾಡಿ ಪೂಜ್ಯರಲ್ಲಿ ಭ್ರಷ್ಟಾಚಾರರಹಿತ, ಆಮಿಷರಹಿತ, ಪಾರದರ್ಶಕ ಚುನಾವಣೆ ನಡೆಸಲು ತಾವು ಬದ್ಧರಿರುವುದಾಗಿ ಸಹಿ ಮಾಡಿ ಮುಚ್ಚಳಿಕೆ ಬರೆದುಕೊಟ್ಟಿದ್ದಾರೆ.
 ಹೀಗೆ ಬರೆದುಕೊಟ್ಟಿರುವ ಮುಚ್ಚಳಿಕೆಗೆ ಕಡೂರಿನ ಸಿ.ಎನ್.  ಶೇಖರಪ್ಪ, ಕೆ.ಎನ್. ಬೊಮ್ಮಣ್ಣ, ಚಿಕ್ಕಮಗಳೂರು ನಗರಸಭೆ ಮಾಜಿ ಅಧ್ಯಕ್ಷ ಎಲ್.ವಿ. ಬಸವರಾಜ್ ಹಾಗೂ ಬಿ.ಪಿ. ಶಶಿಧರ ಸಾಕ್ಷಿಯಾಗಿ ಸಹಿ ಮಾಡಿದ್ದಾರೆ.
ಮುಚ್ಚಳಿಕೆಯ ಸಾರಾಂಶ ಹೀಗಿದೆ.
(1) ರಾಜಕೀಯ ರಂಗದಲ್ಲಿ ನಡೆಯುವ ಎಲ್ಲ ರೀತಿಯ ಭ್ರಷ್ಟಾಚಾರಗಳಿಗೆ ಚುನಾವಣೆಯೇ ಮೂಲವೆಂದು ನಾವು ಮನವರಿಕೆ ಮಾಡಿಕೊಂಡಿರುತ್ತೇವೆ. ಇದನ್ನು ಮನಗಂಡ ನಾವು ಮುಂಬರುವ ಚಿಕ್ಕಮಗಳೂರು ವಿಧಾನಸಭೆ ಚುನಾವಣೆಯಲ್ಲಿ ಈ ಕ್ಷಣದಿಂದಲೇ ಯಾವುದೇ ಚುನಾವಣಾ ಅಕ್ರಮಗಳನ್ನು ಮಾಡುವುದಿಲ್ಲ.  
(2) ಮತದಾರರಿಗೆ ಯಾವುದೇ ರೀತಿಯ ಆಮಿಷಗಳನ್ನು ಒಡ್ಡುವ ಕೆಲಸವನ್ನು ನಾವು ಮಾಡುವುದಿಲ್ಲ. ನಮ್ಮ  ಪರವಾಗಿ ನಮ್ಮ ಕಾರ್ಯಕರ್ತರೂ ಅಂತಹ ಆಮಿಷವನ್ನು ಒಡ್ಡಲು ಅವಕಾಶವಾಗದಂತೆ ನೋಡಿಕೊಳ್ಳುತ್ತೇವೆ.  
(3) ಚುನಾವಣೆಯಲ್ಲಿ ಗೆದ್ದರೂ ಸರಿ, ಸೋತರೂ ಸರಿ. ಮತದಾರರಿಗೆ ಹಣ, ಮದ್ಯ, ಸೀರೆ, ಪಂಚೆ ಮೊದಲಾದವನ್ನು ಹಂಚುವ ಮತ್ತಿತರ ಆಮಿಷಗಳನ್ನು ಒಡ್ಡುವ ಯಾವುದೇ ಚುನಾವಣಾ ಅಕ್ರಮಗಳನ್ನು ಮಾಡುವುದಿಲ್ಲ.  
(4) ವಿವಿಧ ಪಕ್ಷಗಳಿಗೆ ಸೇರಿದ ನಾವು ಚುನಾವಣೆ ಸಂದರ್ಭ ಅನ್ಯ ಅಭ್ಯರ್ಥಿಗಳ ಮೇಲೆ ಹಗೆತನವನ್ನು  ಸಾಧಿಸದೆ ಕ್ರೀಡಾ ಮನೋಭಾವದಿಂದ ಸೋಲು ಗೆಲುವುಗಳನ್ನು ಸ್ವೀಕರಿಸುತ್ತೇವೆ.  
(5) ಒಟ್ಟಾರೆ ಚುನಾವಣಾ ನೀತಿಸಂಹಿತೆಗೆ ಅನುಗುಣವಾಗಿ ನೈತಿಕ ನೆಲೆಗಟ್ಟಿನ ಮೇಲೆ ಚುನಾವಣೆಯಲ್ಲಿ ಪಾಲ್ಗೊಳ್ಳುತ್ತೇವೆ.  


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.