ಜಿಲ್ಲೆಯಲ್ಲಿ ಶೇ.75.47 ಮತದಾನ
ಕ.ಪ್ರ.ವಾರ್ತೆ, ಚಿಕ್ಕಮಗಳೂರು ಮೇ 6
ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳಿಗೆ ಭಾನುವಾರ ನಡೆದ ಚುನಾವಣೆಯಲ್ಲಿ ಶೇ. 75.47 ರಷ್ಟು ಮತದಾನವಾಗಿದೆ. ಜಿಲ್ಲೆಯ 836325 ಮತದಾರರ ಪೈಕಿ, 6,31,189 ಮಂದಿ ಮತದಾನ ಮಾಡಿದ್ದಾರೆ.
ಶೃಂಗೇರಿ ಕ್ಷೇತ್ರದಲ್ಲಿ ಶೇ. 79.52, ಮೂಡಿಗೆರೆ- ಶೇ. 71.92, ಚಿಕ್ಕಮಗಳೂರು- ಶೇ.72.17, ತರೀಕೆರೆ- ಶೇ. 77.49, ಕಡೂರು ಕ್ಷೇತ್ರದಲ್ಲಿ ಶೇ. 76.80 ರಷ್ಟು ಮತದಾನವಾಗಿದೆ. ಜಿಲ್ಲೆಯಲ್ಲಿ 4,23,892 ಪುರುಷರು ಹಾಗೂ 4,12,401 ಮಹಿಳಾ ಮತದಾರರು ಇದ್ದು, ಈ ಪೈಕಿ 3,25,376 ಪುರುಷರು, 3,05,813 ಮಹಿಳೆಯರು ಮತದಾನ ಮಾಡಿದ್ದಾರೆ. ಅಂದರೆ, ಶೇ.76.76 ಪುರುಷರು, ಶೇ.74.15 ಮಹಿಳೆಯರು ವೋಟ್ ಮಾಡಿದ್ದಾರೆ.
ಮಳೆಯಿಂದ ತೊಂದರೆ: ಮತದಾನದ ಕೊನೆಯ ಕ್ಷಣದಲ್ಲಿ ಮಲೆನಾಡಿನಲ್ಲಿ ಮಳೆ ಬಂದ ಕಾರಣ, ಮತಗಟ್ಟೆಗಳು ಸಕಾಲಕ್ಕೆ ತಾಲೂಕು ಕೇಂದ್ರಗಳಿಗೆ ತರಲು ಅಧಿಕಾರಿಗಳಿಗೆ ಅಡಚಣೆಯಾಯಿತ್ತು. ಭಾನುವಾರ ಮಧ್ಯ ರಾತ್ರಿ ಮತದಾನದ ಅಂಕಿಅಂಶದ ನಿಖರವಾದ ಮಾಹಿತಿ ಸಿಕ್ಕಿತು.
ಕೆಲವು ಕ್ಷೇತ್ರಗಳಲ್ಲಿ ಹೆಚ್ಚು ಮತದಾನವಾಗಿದ್ದು, ಕೆಲವು ಕ್ಷೇತ್ರಗಳಲ್ಲಿ ಕಡಿಮೆ ಮತದಾನವಾಗಿದ್ದು, ಇದರಿಂದ ಯಾರಿಗೆ ಹೆಚ್ಚು ಅನುಕೂಲ, ಇನ್ಯಾರಿಗೆ ಅನಾನುಕೂಲದ ಎಂಬ ಚರ್ಚೆ ಜಿಲ್ಲೆಯಲ್ಲಿ ನಡೆಯುತ್ತಿದೆ.
ಮತದಾನ ಏರಿಕೆ: 2008ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಶೇ. 71.15 ರಷ್ಟು ಮತದಾನವಾಗಿತ್ತು. 2010 ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಮತದಾನದ ಪ್ರಮಾಣ ಶೇ. 64ಕ್ಕೆ ಇಳಿದಿತ್ತು. ಈ ವರ್ಷ ಈ ಪ್ರಮಾಣ ಇನ್ನಷ್ಟು ಇಳಿಮುಖವಾಗುವ ಸಾಧ್ಯತೆ ಆತಂಕ ಮೂಡಿಸಿತ್ತು. ಇದಕ್ಕಾಗಿ ರಾಜ್ಯ ಚುನಾವಣಾ ಆಯೋಗ ಸ್ವೀಪ್ ಕಾರ್ಯಕ್ರಮದಡಿ ಜನರಲ್ಲಿ ವಿವಿಧ ಹಂತದಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ನಡೆಸಿತ್ತು. ಈ ಚುನಾವಣೆಯಲ್ಲಿ ಶೇ. 75.47 ರಷ್ಟು ಮತದಾನವಾಗಿದ್ದು, ಸ್ವೀಪ್ ಕಾರ್ಯಕ್ರಮದ ಆಂದೋಲನ ಯಶಸ್ವಿಯಾಗಿದೆ.
ಶೇ. 13.39 ರಷ್ಟು ಪ್ರಗತಿ: 2008ರ ವಿಧಾನಸಭಾ ಚುನಾವಣೆಯಲ್ಲಿ ಶೇ. 71.15 ರಷ್ಟು ಮತದಾನವಾಗಿತ್ತು. ಈ ಬಾರಿ ಶೇ. 75.47 ರಷ್ಟು ಮತದಾನವಾಗಿದೆ. ಅಂದರೆ ಶೇ. 4.32 ರಷ್ಟು ಮಾತ್ರ ಪ್ರಗತಿ ಸಾಧಿಸಲಾಗಿದೆ ಎಂದು ಹೇಳಲಾಗುತ್ತಿದೆ. ಆದರೆ, ಕಳೆದ ಐದು ವರ್ಷದ ಹಿಂದಿದ್ದ ಮತದಾರರು, ಈಗಿರುವ ಮತದಾರರ ಸಂಖ್ಯೆ ಮತ್ತು ಮತದಾನವಾಗಿರುವ ಅಂಕಿಅಂಶ ನೋಡಿದರೆ ಮತದಾನದ ಪ್ರಮಾಣ ಶೇ. 13.39 ರಷ್ಟು ಹೆಚ್ಚಳವಾಗಿದೆ.
2008ರಲ್ಲಿ ಜಿಲ್ಲೆಯಲ್ಲಿದ್ದ ಒಟ್ಟು ಮತದಾರರ ಸಂಖ್ಯೆ 7,82,314 ಈ ಪೈಕಿ ಮತದಾನ ಮಾಡಿರುವವರ ಸಂಖ್ಯೆ 556614. ಅಂದರೆ, ಶೇ. 71.15 ರಷ್ಟು ಮತದಾನವಾಗಿತ್ತು. ಆದರೆ, ಇದೀಗ ಜಿಲ್ಲೆಯಲ್ಲಿ 8,36,325 ಮತದಾರರು, ಈ ಪೈಕಿ 6,31,189 ಮಂದಿ ಮತ ಚಲಾವಣೆ ಮಾಡಿದ್ದು, ಶೇ. 75.47 ರಷ್ಟು ಮತದಾನವಾಗಿದೆ.
ಕಳೆದ ಐದು ವರ್ಷದ ಹಿಂದಿದ್ದ ಮತದಾರರ ಸಂಖ್ಯೆಯ ಜತೆಗೆ ಈ ವರ್ಷದಲ್ಲಿ 54,017 ಮಂದಿ ಹೆಚ್ಚು ಮತದಾರರು ಹೊಸದಾಗಿ ಸೇರ್ಪಡೆಗೊಂಡಿದ್ದಾರೆ. ಅಂದರೆ, ಶೇ. 6.90 ರಷ್ಟು ಹೆಚ್ಚಳವಾಗಿದೆ.
2008ರಲ್ಲಿ ಮತದಾನ ಮಾಡಿರುವ ಸಂಖ್ಯೆ 5,56,614, ಈ ಬಾರಿ ಮತದಾನ ಮಾಡಿರುವ ಸಂಖ್ಯೆ 6,31,189. ಅಂದರೆ 20,558 ಮಂದಿ ಈ ಬಾರಿ ಮತದಾನ ಮಾಡಿದ್ದಾರೆ. 2008ರಲ್ಲಿದ್ದ ಹಾಗೂ ಈಗಿನ ಮತದಾರರ ಪ್ರಮಾಣ ಮತ್ತು ಮತ ಚಲಾವಣೆ ಮಾಡಿದ ಶೇಕಡವಾರು ಅಂಕಿ ಅಂಶ ನೋಡಿದರೆ ಶೇ.13.39 ಪ್ರಗತಿಯಾಗಿದೆ. ಮತದಾನದ ಹಕ್ಕಿನ ಬಗ್ಗೆ ಜಾಗೃತಿ ಉಂಟಾಗಿದೆ ಎಂಬುದು ಈ ಅಂಕಿ ಅಂಶ ಹೇಳುತ್ತದೆ.
--
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

