ಜಿಲ್ಲೆಯಲ್ಲಿ ಅರಳಿ ಬಾಡಿದ ಕಮಲ
ಚಿಕ್ಕಮಗಳೂರು: ಜಿಲ್ಲೆಯಲ್ಲಿ ಕಮಲ ಬಾಡುತ್ತಿದೆ. ಐದರ ಅಂಕಿಯಲ್ಲಿದ್ದ ಬಿಜೆಪಿ ಶಾಸಕರ ಸಂಖ್ಯೆ ಎರಡಕ್ಕೆ ಇಳಿದಿದೆ. ಇನ್ನು ಮೂರು ಕ್ಷೇತ್ರಗಳಲ್ಲಿ ಬಿಜೆಪಿಗೆ ಮೂರರ ನಂತರದ ಸ್ಥಾನಗಳು.
2008ರ ಚುನಾವಣಾ ಫಲಿತಾಂಶದ ಅಂಕಿ ಅಂಶ ನೋಡಿದರೆ, ಜಿಲ್ಲೆಯ ಐದು ಕ್ಷೇತ್ರಗಳಲ್ಲೂ ಬಿಜೆಪಿ ಗೆಲುವು ಮುಳ್ಳಿನ ದಾರಿಯಷ್ಟೇ ಕಠಿಣವಾಗಿತ್ತು. ಕಳೆದ ಐದು ವರ್ಷಗಳ ಹಿಂದೆ ವಿಧಾನಸಭೆ ಚುನಾವಣೆ ನಡೆದಿದ್ದಾಗ ಚಿಕ್ಕಮಗಳೂರು ಜಿಲ್ಲೆ ಸಂಪೂರ್ಣವಾಗಿ ಬಿಜೆಪಿಯ ಹಿಡಿತದಲ್ಲಿತ್ತು. ತದನಂತರ ಆ ಗಟ್ಟಿತನ ಜಿಲ್ಲೆಯಲ್ಲಿ ಉಳಿದುಕೊಂಡಿಲ್ಲ. ರಾಜ್ಯ ಬಿಜೆಪಿಯಲ್ಲಿ ಬೀಸಿದ ಬಿರುಗಾಳಿ ಚಿಕ್ಕಮಗಳೂರು ಜಿಲ್ಲೆಯ ಮೇಲೂ ಹಾದಿ ಹೋದ ಪರಿಣಾಮ ಬಿಜೆಪಿ ಜಿಲ್ಲೆಯಲ್ಲಿ ನೆಲಕಚ್ಚಿದೆ. ಎರಡು ಕ್ಷೇತ್ರಗಳಲ್ಲಿ ಗೆದ್ದಿದ್ದರು ಬೀಗುವಂತ್ತಿಲ್ಲ. ಸೋಲುಂಡ ಕ್ಷೇತ್ರಗಳು ಅಷ್ಟೇ ಅಲ್ಲ ಗೆದ್ದ ಕ್ಷೇತ್ರಗಳಲ್ಲೂ ಮತದಾರರು ಬಿಜೆಪಿಯನ್ನು ತಿರಸ್ಕರಿಸಿದ್ದಾರೆ. ಈ ಸಂಬಂಧ ಆತ್ಮವಲೋಕನ ಮಾಡಿಕೊಳ್ಳಬೇಕಾದ ಸ್ಥಿತಿಯಲ್ಲಿದೆ.0
52,331 ಮತಗಳು ಕಡಿಮೆ: 2004ರ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯ ಐದು ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಪಡೆದ ಮತ 1,78,336. 2008ರ ಚುನಾವಣೆಯಲ್ಲಿ 2,11,046 ಮತಗಳನ್ನು ಪಡೆದುಕೊಂಡಿತ್ತು. ಅಂದರೆ ಮತಗಳ ಸಂಖ್ಯೆ ಹೆಚ್ಚಳವಾಗಿತ್ತು.
ಆದರೆ, ಈ ಬಾರಿಯ ಚುನಾವಣೆಯಲ್ಲಿ 1,58,715 ಮತಗಳನ್ನು ಬಿಜೆಪಿಯ ಗೆದ್ದ ಇಬ್ಬರು ಅಭ್ಯರ್ಥಿಗಳು ಸೇರಿದಂತೆ ಐದು ಅಭ್ಯರ್ಥಿಗಳು ಪಡೆದುಕೊಂಡಿದ್ದಾರೆ. 2008ರ ಹಾಗೂ ಕಳೆದ ಐದು ದಿನಗಳ ಹಿಂದೆ ನಡೆದ ಚುನಾವಣೆಯಲ್ಲಿ ಬಿಜೆಪಿ ಪಡೆದ ಮತಗಳ ಅಂಕಿ ಅಂಶಗಳನ್ನು ನೋಡಿದರೆ 52,331 ಮತಗಳು ಕಡಿಮೆಯಾಗಿವೆ. ಇಷ್ಟು ಜನ ಮತದಾರರು ಬಿಜೆಪಿಯನ್ನು ತಿರಸ್ಕರಿಸಿದ್ದಾರೆ.
ಹೀಗೆ ಈ ಮತಗಳು ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ತಮ್ಮತ್ತ ಸೆಳೆದುಕೊಳ್ಳುವಲ್ಲಿ ಯಶಸ್ವಿಯಾಗಿವೆ.
2004ರಲ್ಲಿ ಕಾಂಗ್ರೆಸ್ 1,70,881 ಮತಗಳನ್ನು ಪಡೆದುಕೊಂಡಿತ್ತು. 2008ರಲ್ಲಿ ಈ ಮತಗಳ ಸಂಖ್ಯೆ 1,69,654ಕ್ಕೆ ಇಳಿದಿತ್ತು. ಈ ಚುನಾವಣೆಯಲ್ಲಿ ಕಾಂಗ್ರೆಸ್ ಕೇವಲ ಒಂದು ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದರೂ ಕೂಡ ಒಟ್ಟಾರೆ ಮತಗಳಲ್ಲಿ ಎಲ್ಲಾ ಪಕ್ಷಗಳಿಗಿಂತ ಹೆಚ್ಚು ಮತಗಳನ್ನು ಪಡೆದಿದೆ.
ಈ ಬಾರಿ 1,94,989 ಮತಗಳನ್ನು ಪಡೆದಿದ್ದು, 2008ಕ್ಕೆ ಹೋಲಿಸಿದರೆ 25,335 ಹೆಚ್ಚುವರಿ ಮತಗಳನ್ನು ಪಡೆದುಕೊಂಡಿದೆ.
ಬಿಜೆಪಿಗೆ 3ನೇ ಸ್ಥಾನ: ಎರಡು ಕ್ಷೇತ್ರಗಳಲ್ಲಿ ಜಯಗಳಿಸಿರುವ ಜೆಡಿಎಸ್ ಕಳೆದ ಮೂರು ಚುನಾವಣೆಗಳಲ್ಲಿ ಮತಗಳ ಪ್ರಮಾಣವನ್ನು ಹೆಚ್ಚಿಸಿಕೊಂಡೇ ಬಂದಿದೆ. 2004ರಲ್ಲಿ ಜೆಡಿಎಸ್ 1,12,410 ಮತಗಳನ್ನು ಪಡೆದುಕೊಂಡಿತ್ತು,
2008ರಲ್ಲಿ 1,14,760, ಈ ಬಾರಿ 1,38,425 ಮತಗಳನ್ನು ಪಡೆದಿದೆ. ಅಂದರೆ 23,665 ಮತಗಳು ಹೊಸದಾಗಿ ಸೇರ್ಪಡೆಗೊಂಡಿವೆ.
ಜಿಲ್ಲೆಯಲ್ಲಿ ಈ ಚುನಾವಣೆಯಲ್ಲಿ ರಾಜಕೀಯ ಪಕ್ಷಗಳು ಒಟ್ಟಾರೆ ಪಡೆದಿರುವ ಮತಗಳಲ್ಲಿ ಕಾಂಗ್ರೆಸ್ಗೆ ಮೊದಲ ಸ್ಥಾನ, ಜೆಡಿಎಸ್ಗೆ ಎರಡನೇ ಹಾಗೂ ಬಿಜೆಪಿ ಕೊನೆಯ ಸ್ಥಾನದಲ್ಲಿದೆ.
-ಆರ್. ತಾರಾನಾಥ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

