ಸೋಮಾರಿತನವೂ ದೇಶದ್ರೋಹ
ಚಿಕ್ಕಮಗಳೂರು: ಸೇವೆಯಿಂದ ನಿವೃತ್ತಿಯಾದ ನಂತರ ಸೋಮಾರಿತನವನ್ನು ಮೈಗೂಡಿಸಿಕೊಳ್ಳಬಾರದು. ಹಾಗೆನಾದರೂ ಮಾಡಿದ್ದೆಯಾದಲ್ಲಿ ಅದು, ದೇಶ ದ್ರೋಹವಾಗುತ್ತದೆ ಎಂದು ನಾಡೋಜ ಡಾ. ದೇ. ಜವರೇಗೌಡ ಹೇಳಿದ್ದಾರೆ.
ಜಿಲ್ಲಾ ಒಕ್ಕಲಿಗರ ಸಮುದಾಯ ಭವನದಲ್ಲಿ ಶನಿವಾರ ಏರ್ಪಡಿಸಲಾಗಿದ್ದ ನಿವೃತ್ತ ಐಎಎಸ್ ಅಧಿಕಾರಿ, ಮಾಜಿ ರಾಜ್ಯಸಭಾ ಸದಸ್ಯ ಕೆ.ಎಸ್. ಮಲ್ಲೇಗೌಡ ಅವರ ಜನ್ಮ ಶತಮಾನೋತ್ಸವದ ನಾಗರೀಕ ಅಭಿನಂದನಾ ಸಮಾರಂಭವನ್ನು ಉದ್ಘಾಟಸಿ ಅವರು ಮಾತನಾಡುತ್ತಿದ್ದರು.
ನಿವೃತ್ತಿಯ ನಂತರ ಕ್ಲಬ್ಗಳಿಗೆ ಹೋಗಿ ಸಮಯ ಕಳೆಯುವುದು. ಇಸ್ಪೀಟ್ ಸೇರಿದಂತೆ ಇನ್ನಿತರೆ ಮೋಜಿನ ಜೀವನ ನಡೆಸುತ್ತಾರೆ. ಇದು, ಒಂದು ರೀತಿಯಲ್ಲಿ ದೇಶದ್ರೋಹ, ನಿವೃತ್ತಿ ನಂತರ ಕನಿಷ್ಟ ಯಾವುದಾದರೂ ಶಾಲೆಗೆ ಹೋಗಿ ಮಕ್ಕಳಿಗೆ ಪಾಠ ಮಾಡುವ ಕೆಲಸವನ್ನಾದರೂ ಮಾಡಬೇಕು ಎಂದು ಸಲಹೆ ಮಾಡಿದರು.
ಭ್ರಷ್ಟಾಚಾರ ವಿರೋಧಿ: ಕೆ.ಎಸ್. ಮಲ್ಲೇಗೌಡರ ಹೃದಯದಲ್ಲಿ ಕಲ್ಮಶವಿರಲಿಲ್ಲ. ಅಂತಃಕರಣ ಶುದ್ಧವಾಗಿತ್ತು. ಅವರು ರೈತರನ್ನು ಪ್ರೀತಿಸಿದಷ್ಟು ಬೇರಾರು ಪ್ರಿತಿಸುತ್ತಿರಲಿಲ್ಲ. ಅಧಿಕಾರದ ಅವಧಿಯಲ್ಲಿ ಅವ್ಯವಹಾರ, ಭ್ರಷ್ಟಾಚಾರವನ್ನು ಸಹಿಸುತ್ತಿರಲಿಲ್ಲ. ಮಾದಕ ದ್ರವ್ಯ ಸೇರಿದಂತೆ ಸಮಾಜ ವಿರೋಧಿ ಚಟುವಟಿಕೆಗಳು ಕಂಡುಬಂದಲ್ಲಿ ಮುಲಾಜಿಲ್ಲದೆ ದಾಳಿ ನಡೆಸುತ್ತಿದ್ದರು ಎಂದರು.
ಒಳ್ಳೆಯ ಆಲೋಚನೆಗಳಿಲ್ಲದಿದ್ದರೆ ಆಯುಸ್ಸು ಕಡಿಮೆಯಗುತ್ತದೆ. ಅಂತಹವರಿಗೆ ಶಾಪ ಹಾಕುವವರು ಹೆಚ್ಚಿರುತ್ತಾರೆ. ಒಳ್ಳೆಯ ಆಲೋಚನೆಗಳೊಂದಿಗೆ ಸತ್ಯದ ಕಡೆ ನಡೆದರೆ, ಕೋಪ, ತಾಪಗಳನ್ನು ನಿಯಂತ್ರಣದಲ್ಲಿಟ್ಟರೆ ಆಯುಸ್ಸು ವೃದ್ಧಿಯಾಗುತ್ತದೆ. ಅದಕ್ಕೆ ಮಲ್ಲೇಗೌಡರು ಉದಾಹರಣೆ ಎಂದರು.
ಕೆ.ಎಸ್. ಮಲ್ಲೇಗೌಡರ ಅಭಿನಂಧನಾ ಗ್ರಂಥ ಬಿಡುಗಡೆ ಮಾಡಿ ಮಾತನಾಡಿದ ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಹಾಗೂ ವಿಮರ್ಶಕ ನರಹಳ್ಳಿ ಬಾಲಸುಬ್ರಮಣ್ಯ, ಅಧಿಕಾರಿಗಳು ಮಾನವೀಯತೆ ಮೈಗೂಡಿಸಿಕೊಂಡಲ್ಲಿ ಸಮಾಜ ಬದಲಾವಣೆಯಾಗಲು ಸಾಧ್ಯ.
ಅಧಿಕಾರ ಜನರಿಗೆ ಸೇವೆ ಮಾಡಲು ಇರುವ ಬಹುದೊಡ್ಡ ಅವಕಾಶ. ಅದನ್ನು ಸಾರ್ಥಕ ಪಡಿಸಿಕೊಂಡವರು ಕೆ.ಎಸ್. ಮಲ್ಲೇಗೌಡರು. ಹಾಗೆಯೇ ಸೇವೆಯಿಂದ ನಿವೃತ್ತರಾದ ಮೇಲೂ ಸಮಾಜ ಸೇವೆಗೆ ರಾಜಕೀಯ ಶಕ್ತಿ ಬೇಕಾಗುತ್ತದೆ ಈ ಹಿನ್ನೆಲೆಯಲ್ಲಿ ರಾಜ್ಯಸಭಾ ಸದಸ್ಯರಾಗಿ ಸೇವೆ ಮುಂದುವರಿಸಿದರು ಎಂದು ಹೇಳಿದರು.
ಬೇಸರ ಮೂಡಿಸುವ ನಡವಳಿಕೆಗಳು: ನಾಡನ್ನಾಳುವ ರಾಜಕೀಯ ಧುರೀಣರ ನಡವಳಿಕೆಗಳು ನಾಚಿಕೆ ಮತ್ತು ಬೇಸರ ಹುಟ್ಟಿಸುವಂತಿದೆ. ದುಷ್ಟರ ಸಂಖ್ಯೆ ಹೆಚ್ಚುತ್ತಲೇ ಇದೆ. ಭ್ರಷ್ಟಾಚಾರಿಗಳ ಕೈಯಲ್ಲಿ ಸಮಾಜ ಸಿಕ್ಕಿದೆ. ಒಂದುರೀತಿ ಆತಂಕ ಅಪಾಯಕಾರಿ ಪರಿಸ್ಥಿತಿಯಲ್ಲಿ ನಾವಿದ್ದೇವೆ. ಸತ್ಪ್ರಜೆಗಳು ಸತ್ತ ಪ್ರಜೆಗಳಂತೆ ಸಮಾಜದಿಂದ ಹಿಂದೆ ಸರಿಯುತ್ತಿದ್ದಾರೆ. ಒಳ್ಳೆಯದು ಆಕರ್ಷಣೆ ಹೊಂದಿದ್ದರೂ ಕೆಟ್ಟದ್ದು ಬೇಗನೆ ಆಕರ್ಷಿಸಲ್ಪಡುತ್ತದೆ. ಇಂತಹ ಸಂದರ್ಭದಲ್ಲಿ ಸುಸಂಸ್ಕೃತ ಸಮಾಜದ ನಿರ್ಮಾಣಕ್ಕೆ ಒಳ್ಳೆಯದನ್ನೇ ಹೆಚ್ಚು ಪ್ರತಿಪಾದಿಸಬೇಕಿದೆ ಎಂದರು.
30 ರಿಂದ 40 ವರ್ಷ ಪ್ರಾಮಾಣಿಕವಾಗಿ ದುಡಿದರೂ ಗಳಿಸಲಾಗದ ಆಸ್ತಿಯ ನಾಲ್ಕು ಪಟ್ಟನ್ನು ರಾಜಕಾರಣಿಗಳು ಕೇವಲ ಒಂದೆರಡು ವರ್ಷದಲ್ಲಿ ಸಂಪಾದಿಸುತ್ತಾರೆ. ಕೆಲವು ಅಧಿಕಾರಿಗಳು ರಾಜಕಾರಣಿಗಳಿಗಿಂತ ದುಪ್ಪಟ್ಟು ಭ್ರಷ್ಟರಿದ್ದಾರೆ.
ಆದರೆ, ವಿವಿಧ ಸ್ತರಗಳಲ್ಲಿ ಸೇವೆ ಸಲ್ಲಿಸಿ ಜಿಲ್ಲಾಧಿಕಾರಿಯಂತಹ ಹುದ್ದೆ ನಿಭಾಯಿಸಿ, ನಿವೃತ್ತಿ ನಂತವೂ ರಾಜ್ಯಸಭಾ ಸದಸ್ಯರಾಗಿ ಕಳಂಕ ರಹಿತವಾಗಿ ಸೇವೆ ಸಲ್ಲಿಸಿ ಸಾರ್ಥಕವಾದ 100ನೇ ವರ್ಷಕ್ಕೆ ಕಾಲಿಡುತ್ತಿರುವ ಮಲ್ಲೇಗೌಡರು ನಿಜವಾದ ಸಾಧಕರಾಗಿ ಕಾಣುತ್ತಾರೆ ಎಂದು ಹೇಳಿದರು.
ಸಮಾರಂಭದ ಸಾನ್ನಿಧ್ಯ ವಹಿಸಿದ್ದ ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಆಶೀರ್ವಚನ ಮಾಡಿ, ಪ್ರತಿನಿತ್ಯ ನಿಷ್ಕಾಮ ಕರ್ಮ ಮಾಡಿದರೆ ಬದುಕಿರುವವರೆಗೆ ನೆಮ್ಮದಿ ಇರುತ್ತದೆ. ಇಂದಿನ ಪರಿಸ್ಥಿತಿ ಬೇರೆ ಇದೆ. 30 ವರ್ಷಕ್ಕೆಲ್ಲ ಬದುಕು ಸಾಕು ಎಂದು ಸಾಯುವ ದಾರಿ ಹುಡುಕುವಂತಾಗಿದೆ ಇದಕ್ಕೆಲ್ಲ ಸಂಸ್ಕಾರ ರಹಿತ ಜೀವನ ಶೈಲಿ ಕಾರಣ ಎಂದರು.
ಇದೇ ವೇಳೆ ಕೆ.ಎಸ್. ಮಲ್ಲೇಗೌಡ ಅವರನ್ನು ಶ್ರೀಗಳು ನಾಗರಿಕರ ಪರವಾಗಿ ಅಭಿನಂಧಿಸಿದರು.
ಆದಿಚುಂಚನಗಿರಿ ಶೃಂಗೇರಿ ಶಾಖಾ ಮಠದ ಶ್ರೀ ಗುಣನಾಥ ಸ್ವಾಮೀಜಿ, ಮಕ್ಕಳ ತಜ್ಞ ಡಾ. ಜೆ.ಪಿ. ಕೃಷ್ಣೇಗೌಡ, ಕಾಫಿ ಬೆಳೆಗಾರ ಕೆ.ಎಂ. ಶಶಿಧರ್, ಎಂ.ಆರ್. ಸಣ್ಣ ಸಿದ್ದೇಗೌಡ, ಮಹಿಳಾ ಜಾಗೃತಿ ಸಂಘದ ಅಧ್ಯಕ್ಷೆ ಗೌರಮ್ಮ ಬಸವೇಗೌಡ, ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ.ಎಚ್. ನಟರಾಜ್, ದಲಿತ ಮುಖಂಡ ಕೆ.ಟಿ. ರಾಧಾಕೃಷ್ಣ, ಕುರುಬರ ಸಂಘದ ಅಧ್ಯಕ್ಷ ಕೆ.ಎಂ. ಮಂಜುನಾಥ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಅಭಿನಂದನಾ ಗ್ರಂಥದ ಸಂಪಾದಕ ಬೆಳವಾಡಿ ಮಂಜುನಾಥ್ ಪ್ರಾಸ್ತಾವಿಕವಾಗಿ ಮಾತನಾಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

