ಗುದ್ದಲೀ ಪೂಜೆ
ಚಿಕ್ಕಮಗಳೂರು: ನಗರದ ಮಾರ್ಕೆಟ್ ರಸ್ತೆಯ ಶಾಂತಿ ನಗರದಲ್ಲಿ 30 ಲಕ್ಷ ವೆಚ್ಚದಲ್ಲಿ ನಿರ್ಮಿಸುತ್ತಿರುವ ಓಂಶಕ್ತಿ ಸಮುದಾಯ ಭವನ ನಿರ್ಮಾಣಕ್ಕೆ ಶಾಸಕ ಸಿ.ಟಿ. ರವಿ ಚಾಲನೆ ನೀಡಿದರು. ಭಾನುವಾರ ಬೆಳಿಗ್ಗೆ ಮೇಲ್ ಮರವತ್ತೂರ್ ಆಧಿಪರಾಶಕ್ತಿ ಭಕ್ತ ಮಂಡಳಿಯ ಸದಸ್ಯರುಗಳು ಪೂರ್ಣಕುಂಭದೊಂದಿಗೆ ದೇವಿಗೆ ಪುಷ್ಪ ಮತ್ತು ಕುಂಕುಮಾರ್ಚನೆ ಮಾಡಿ ವಿಶೇಷ ಪೂಜೆ ಸಲ್ಲಿಸಿದರು. ಪೂಜಾ ವಿಧಿ, ವಿಧಾನಗಳಲ್ಲಿ ಪಾಲ್ಗೊಂಡ ಶಾಸಕ ಸಿ.ಟಿ. ರವಿ ನೂತನ ಸಮುದಾಯ ಭವನಕ್ಕೆ ಗುದ್ದಲೀ ಪೂಜೆ ನೆರವೇರಿಸಿದರು.
ಕನಕ ಜಯಂತಿ
ಬಾಳೆಹೊನ್ನೂರು: ಸಮೀಪದ ಮಾಗುಂಡಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ಬುಧವಾರ ಕನಕದಾಸರ ಜಯಂತಿ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಕನಕದಾಸರ ಕೊಡುಗೆ, ಸಾಮಾಜಿಕ ಕಳಕಳಿ ಹಾಗೂ ಸಾಹಿತ್ಯ ರಚನೆಯ ಕುರಿತು ವಿದ್ಯಾರ್ಥಿಗಳು ಮಾತನಾಡಿದರು. ಕಳೆದ ವರ್ಷ ಎಸ್ಸೆಸ್ಸೆಲ್ಸಿಯಲ್ಲಿ ತಾಲೂಕಿಗೆ ಪ್ರಥಮ ಸ್ಥಾನ ಗಳಿಸಿದ ಪ್ರಿಯಾ ರೀಟಾ ಲೋಬೋ ಹಾಗೂ ಕನ್ನಡದಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಯುವಶ್ರೀ ಅವರನ್ನು ಇದೇ ಸಂದರ್ಭದಲ್ಲಿ ಅಭಿನಂದಿಸಲಾಯಿತು. ಕಳೆದ ವರ್ಷ 8 ಮತ್ತು 9ನೇ ತರಗತಿಯಲ್ಲಿ ಪ್ರಥಮ, ದ್ವಿತೀಯ ಸ್ಥಾನ ಗಳಿಸಿದ ವಿದ್ಯಾರ್ಥಿಗಳಿಗೆ ಕೃಷ್ಣ ಫೌಂಡೇಶನ್ ವತಿಯಿಂದ ನೀಡಿದ ಶಾಲಾ ಬ್ಯಾಗ್ಗಳನ್ನು ವಿದ್ಯಾರ್ಥಿಗಳಿಗೆ ನೀಡಲಾಯಿತು. ಶಾಲಾ ಮುಖ್ಯ ಶಿಕ್ಷಕಿ ಆರ್.ಪಿ. ಚೇತನಾ, ವಿದ್ಯಾರ್ಥಿಗಳಾದ ಸೀಮಾ, ರಕ್ಷಿತ, ಸುಧಾಮ, ಸ್ಪಂದನ ಇದ್ದರು.
ತತ್ವಾದರ್ಶ ಪಾಲಿಸಿ
ಚಿಕ್ಕಮಗಳೂರು: ಭಕ್ತಶ್ರೇಷ್ಠ ಕನಕದಾಸರಂತಹ ಸಮಾಜ ಸುಧಾರಕರ ತತ್ವ ಮತ್ತು ಸಂದೇಶಗಳನ್ನು ಪಾಲಿಸುವುದರ ಜೊತೆಗೆ ಅವರು ಹಾಕಿಕೊಟ್ಟ ಹಾದಿಯಲ್ಲಿ ನಡೆಯಬೇಕು ಎಂದು ವಿಧಾನ ಪರಿಷತ್ ಸದಸ್ಯೆ ಗಾಯತ್ರಿ ಶಾಂತೇಗೌಡ ಹೇಳಿದ್ದಾರೆ. ತಾಲೂಕಿನ ಅಂಬಳೆ ಗ್ರಾಮದಲ್ಲಿ ಬುಧವಾರ ಸಂಜೆ ನಡೆದ ಭಕ್ತಶ್ರೇಷ್ಠ ಕನಕದಾಸರ ಜಯಂತಿ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸಂತರು ಮತ್ತು ಮಹಾತ್ಮರು ಹಾಕಿಕೊಟ್ಟ ಹಾದಿಯಲ್ಲಿ ಜನತೆ ಸಾಗಿದಾಗ ಮಾತ್ರ ಸಮಾಜ ಸುಧಾರಣೆಯಾಗಲು ಸಾಧ್ಯ ಎಂದರು.
ಸಮಾಜ ಸುಧಾರಣೆ ಮಾಡಿದ ಸಂತರಲ್ಲಿ ಕನಕದಾಸರು ಅಗ್ರಗಣ್ಯರು ಎಂದ ಅವರು, ಕುರುಬ ಸಮುದಾಯದ ಜನ ತಮ್ಮ ಮಕ್ಕಳಿಗೆ ಶಿಕ್ಷಣದ ಜೊತೆಗೆ ಕನಕದಾಸರ ತತ್ವ ಮತ್ತು ಸಂದೇಶಗಳನ್ನು ತಿಳಿಸುವ ಕೆಲಸ ಮಾಡಬೇಕು ಎಂದು ಕಿವಿಮಾತು ಹೇಳಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ಚಂದ್ರಮ್ಮ ಅಧ್ಯಕ್ಷತೆ ವಹಿಸಿದ್ದರು. ಸದಸ್ಯರಾದ ದೊಡ್ಡೇಗೌಡ, ಲಕ್ಕೇಗೌಡ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ರೇಣುಕಮ್ಮ, ಗ್ರಾಮದ ಮುಖಂಡರಾದ ರೇವಣ್ಣಗೌಡ, ಕಾಳೇಗೌಡ, ಕರ್ನಾಟಕ ರಕ್ಷಣಾ ವೇದಿಕೆಯ ತಾ.ಪ್ರಧಾನ ಕಾರ್ಯದರ್ಶಿ ಸಿದ್ದೇಗೌಡ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

