ಚಿಕ್ಕಮಗಳೂರು

ಕಕ್ಷಿದಾರರಿಗೆ ಕಾನೂನು ತಿಳಿಸಿ: ನ್ಯಾ. ವಸ್ತ್ರಮಠ

Published On :

ಚಿಕ್ಕಮಗಳೂರು: ವಕೀಲರು ತಮ್ಮಲ್ಲಿಗೆ ಬರುವ ಕಕ್ಷಿದಾರರಿಗೆ ಕಾನೂನಿನ ಕುರಿತು ಒಳ್ಳೆಯ ಮಾಹಿತಿ ನೀಡಬೇಕೆಂದು ಪ್ರಭಾರ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಎಸ್.ಬಿ. ವಸ್ತ್ರಮಠ ಹೇಳಿದ್ದಾರೆ. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ, ವಾರ್ತಾ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಜಿಲ್ಲಾ ನ್ಯಾಯಾಲಯದ ಪೂರಕ ಕಟ್ಟಡದ ಸಭಾಂಗಣದಲ್ಲಿ ಮಂಗಳವಾರ ನಡೆದ ಕಾನೂನು ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಕಡೆಗಣಿಸದಿರಿ: ವಕೀಲರ ಬಳಿಗೆ ಬರುವ ಕಕ್ಷಿದಾರರಿಗೆ ಕಾನೂನಿನ ಬಗ್ಗೆ ಅರಿವು ಇರುವುದಿಲ್ಲ, ಈ ಕುರಿತು ತಮಗೆ ಎಷ್ಟರ ಮಟ್ಟಿಗೆ ಹಕ್ಕು ಬರುತ್ತದೆ, ಮತ್ತು ಬರುವುದಿಲ್ಲ ಎಂದು ಅವರಿಗೆ ತಿಳಿಸಬೇಕು. ವಕೀಲ ವೃತ್ತಿ ಪ್ರಾರಂಭಿಸಿದ ಪ್ರಾರಂಭದಲ್ಲಿ ದೊಡ್ಡ ದೊಡ್ಡ ಶ್ರೀಮಂತ ಕಕ್ಷಿದಾರರು ಹುಡುಕಿಕೊಂಡು ಬರುವುದಿಲ್ಲ ಬಡ ಕಕ್ಷಿದಾರರು ಬರುತ್ತಾರೆ. ಅವರಿಂದ ಬರುವ ಶುಲ್ಕ ತೆಗೆದುಕೊಂಡು ಬೆಳೆಯುತ್ತೇವೆ. ನಾವು ಬೆಳೆದಾಗ ದೊಡ್ಡ ಕಕ್ಷಿದಾರರು ನಮ್ಮನ್ನು ಹುಡುಕಿಕೊಂಡು ಬರುತ್ತಾರೆ. ನಮ್ಮನ್ನು ಬೆಳೆಸಿದ ಬಡ ಕಕ್ಷಿದಾರರನ್ನು ಎಂದೂ ಕಡೆಗಣಿಸಬಾರದು ಎಂದ ಅವರು, ನೊಂದ ಬಡವರ ಕಣ್ಣೀರು ಒರೆಸುವ ಕಾರ್ಯ ವಕೀಲರಿಂದ ಆಗಬೇಕು ಎಂದರು.
ನ್ಯಾಯಾಧೀಶರು ಹಾಗೂ ವಕೀಲರು ಪರಸ್ಪರ ಹೊಂದಾಣಿಕೆಯಿಂದ ಹೋಗಬೇಕು ಆಗ ಜನರಲ್ಲಿ ನ್ಯಾಯಾಧೀಶರು, ವಕೀಲರ ಬಗ್ಗೆ ಒಳ್ಳೆಯ ಭಾವನೆ ಬರುತ್ತದೆ ಎಂದು ತಿಳಿಸಿದರು.
ವಕೀಲ ಡಿ.ಬಿ. ಸುಜೇಂದ್ರ ಅವರು ಕಕ್ಷಿದಾರರೊಂದಿಗೆ ಆಪ್ತ ಸಮಾಲೋಚನೆ ಮತ್ತು ವಕೀಲ ವೃತ್ತಿಯಲ್ಲಿ ನೀತಿಶಾಸ್ತ್ರ ವಿಷಯ ಕುರಿತು ಉಪನ್ಯಾಸ ನೀಡಿದರು. ಚಿಕ್ಕಮಗಳೂರು ವಕೀಲರ ಸಂಘದ ಅಧ್ಯಕ್ಷ ಅಫ್ತಾಬ್ ಅಹಮದ್ ಅಧ್ಯಕ್ಷತೆ ವಹಿಸಿದ್ದರು. ಕುಟುಂಬ ನ್ಯಾಯಾಲಯದ ಪ್ರಧಾನ ನ್ಯಾಯಾಧೀಶರಾದ ಕೆ.ಎಸ್. ತಿಮ್ಮಣ್ಣಚಾರ್, ಎರಡನೇ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರಾದ ಕೋಮಲತಾ, ಭಾರತೀಯ ವಕೀಲರ ಪರಿಷತ್ತಿನ ಸದಸ್ಯ ಎಸ್.ಎಲ್. ಭೋಜೇಗೌಡ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.