ಚಿಕ್ಕಮಗಳೂರು

ಗಾಳಿ, ಮಳೆಗೆ ಅಪಾರ ಹಾನಿ

Published On :

ಬಾಳೆಹೊನ್ನೂರು: ಬಾಳೆಹೊನ್ನೂರು ಹೋಬಳಿಯಾದ್ಯಂತ ಶುಕ್ರವಾರ ಮಧ್ಯಾಹ್ನ ಸುರಿದ ಧಾರಾಕಾರ ಗಾಳಿ, ಮಳೆಗೆ ಅಪಾರ ಹಾನಿ ಸಂಭವಿಸಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.
ಮಧ್ಯಾಹ್ನ ಮೂರು ಗಂಟೆ ವೇಳೆಗೆ ಭಾರಿ ಗಾಳಿ ಸಹಿತ ಸುರಿದ ಮಳೆಗೆ ಹಲವೆಡೆ ಮರಗಳು ಧರೆಗುರುಳಿದ್ದು, ಹಲವೆಡೆ ಗಾಳಿಗೆ ಮನೆಯ ಹೆಂಚು, ಶೀಟ್‌ಗಳು ಹಾರಿ ಹೋಗಿವೆ.
ಬಾಳೆಹೊನ್ನೂರಿನಿಂದ ರಂಭಾಪುರಿಮಠಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯ ಮೇಲೆ ಮರ ಬಿದ್ದು ಸಂಚಾರ ಕೆಲ ಕಾಲ ಸ್ಥಗಿತಗೊಂಡಿತ್ತು.
ಶೃಂಗೇರಿ- ಕೊಪ್ಪ ಸಂಪರ್ಕ ಕಲ್ಪಿಸುವ ಇಟ್ಟಿಗೆ ಸೀಗೋಡು ಸೆಂಟ್ ಲಾರೆನ್ಸ್ ಸಮೀಪ ಭಾರಿ ಗಾತ್ರದ ಸಿಲ್ವರ್ ಮರವೊಂದು ರಸ್ತೆ ಬಿದ್ದ ಪರಿಣಾಮ ಒಂದು ಗಂಟೆಗೂ ಹೆಚ್ಚು ಕಾಲ ವಾಹನ ಸಂಚಾರ ಸ್ಥಗಿತಗೊಂಡಿತ್ತು. ಬಳಿಕ ಎಸ್ಟೇಟ್‌ನ ಪುರುಷೋತ್ತಮ್, ಲೂಯಿಸ್ ಅವರ ನೇತೃತ್ವದಲ್ಲಿ ಮರ ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.
ಹಾರಿ ಹೋದ ಹೆಂಚುಗಳು: ಇಟ್ಟಿಗೆ ಸೀಗೋಡಿನ ಸೀಗೋಡು ಪ್ಲಾಂಟೇಶನ್‌ನ ಕಾರ್ಮಿಕರ ಲೈನ್ ಮನೆಗಳ ಮೇಲೆ ಮರ ಬಿದ್ದು ಹಾನಿ ಸಂಭವಿಸಿದೆ. ಯಾವುದೇ ಪ್ರಾಣಹಾನಿ ಆಗಿಲ್ಲ. ಅಲ್ಲದೆ, ಇಲ್ಲಿನ ವಸಂತ, ಅಲ್ಪಾನ್ಸ್ ತಾವ್ರೋ ಎಂಬವರ ಮನೆಯ ಹೆಂಚುಗಳು ಹಾರಿ ಹೋಗಿ ಹಾನಿ ಸಂಭವಿಸಿದೆ. ಹಾಗೂ ಆದರ್ಶ ನಗರದ ವಿದ್ಯಾಗಣಪತಿ ಸಮಯದಾಯ ಭವನದ ಚಾವಣಿಗೆ ಹಾಕಿದ್ದ ಶೀಟ್‌ಗಳು ಹಾರಿ ಹೋಗಿವೆ, ಸುಮಾರು 75 ಸಾವಿರಕ್ಕೂ ಅಧಿಕ ಹಾನಿ ಸಂಭವಿಸಿದೆ.
ರಂಭಾಪುರಿ ಪೀಠದ ವೀರಭದ್ರಸ್ವಾಮಿ ದೇವಸ್ಥಾನ, ಜಗದ್ಗುರು ರೇಣುಕಾಚಾರ್ಯ ಮಂದಿರದ ಸುಮಾರು 2 ರಿಂದ 3 ಸಾವಿರಕ್ಕೂ ಅಧಿಕ ಹೆಂಚುಗಳು ಗಾಳಿಗೆ ಹಾರಿ ಹೋಗಿ ನಷ್ಟ ಸಂಭವಿಸಿದೆ. ಅಲ್ಲದೆ, ಇಲ್ಲಿನ ಜಗದ್ಗುರು ರುದ್ರಮುನೀಶ್ವರ ಸಮುದಾಯ ಭವನ, ವಸತಿ ನಿಲಯಗಳ ಹೆಂಚುಗಳೂ ಹಾರಿಹೋಗಿವೆ. ಹಾಗೂ ಇಲ್ಲಿ ಬೃಹತ್ ಮರವೊಂದು ಅರ್ಧ ತುಂಡಾಗಿ ಮೇಲ್ಪಾಲ್ ರಸ್ತೆಗೆ ಅಡ್ಡಬಿದ್ದಿತ್ತು.
ಶೀಟ್‌ಗಳು ಜಖಂ: ಸಮೀಪದ ಮೆಣಸುಕೊಡಿಗೆಯ ಗಣಪತಿ ಸಮುದಾಯ ಭವನದ ಮೇಲೆ ಸಿಲ್ವರ್ ಮರವೊಂದು ಬಿದ್ದು ಶೀಟ್‌ಗಳು ಜಖಂಗೊಂಡು ಐವತ್ತು ಸಾವಿರಕ್ಕೂ ಅಧಿಕ ಹಾನಿ ಸಂಭವಿಸಿದೆ. ಸಮೀಪದ ಅಕ್ಷರ ನಗರದಲ್ಲಿ 15ಕ್ಕೂ ಹೆಚ್ಚು ಮನೆಗಳ ಹೆಂಚು ಹಾಗೂ ಶೀಟ್‌ಗಳು ಹಾರಿಹೋಗಿ ಹಾನಿಯಾಗಿದೆ. ಇಲ್ಲಿ ಅಕೇಶಿಯಾ ಮರಗಳು ವಿದ್ಯುತ್ ಲೈನ್ ಮೇಲೆ ಬಿದ್ದು ತುಂಡಾಗಿ ಹೋಗಿವೆ. ಕಡ್ಲೆಮಕ್ಕಿಯ ರೋಶನ್ ಎಂಬವರ ಮನೆಗೆ ಸಿಡಿಲು ಬಡಿದು ಹಾನಿ ಸಂಭವಿಸಿದೆ. ಹೋಬಳಿ ವ್ಯಾಪ್ತಿಯ ಹಲವೆಡೆ ಭಾರಿ ಸಂಖ್ಯೆಯ ಮರಗಳು ಬುಡಸಮೇತ ಮಗುಚಿ ಬಿದ್ದಿವೆ. ಅಡಕೆ ಮರಗಳು ನೂರಾರು ಸಂಖ್ಯೆಯಲ್ಲಿ ತುಂಡಾಗಿ ಬಿದ್ದಿವೆ ಹಾಗೂ ತೋಟಗಳಲ್ಲಿ ಮರಗಳು ತುಂಡಾದ ಪರಿಣಾಮ ಕಾಫಿ ಗಿಡಗಳು ನಾಶಗೊಂಡಿವೆ. ಬಾಳೆಗಿಡಗಳೂ ನೆಲಕ್ಕುರುಳಿವೆ. ಬನ್ನೂರು, ಅರಳಿಕೊಪ್ಪ, ಮಾಗುಂಡಿ, ಸೀಗೋಡು, ವಾಟುಕೊಡಿಗೆ, ಮಸೀದಿಕೆರೆ, ಸೀಕೆ, ಇಟ್ಟಿಗೆ, ಸೀಗೋಡು ಸೇರಿದಂತೆ ವಿವಿಧೆಡೆ ಹಾನಿ ಸಂಭವಿಸಿದೆ.
ಪಟ್ಟಣಕ್ಕೆ ಸಂಪರ್ಕ ಕಲ್ಪಿಸುವ ವಿದ್ಯುತ್ ಲೈನ್ ಮೇಲೆ ಹಲವೆಡೆ ಮರಬಿದ್ದ ಪರಿಣಾಮ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದು, ಮೆಸ್ಕಾಂ ಸಿಬ್ಬಂದಿ ಸಂಪರ್ಕ ಕಲ್ಪಿಸುವಲ್ಲಿ ನಿರತರಾಗಿದ್ದರು.
ಗುಡುಗು, ಮಳೆ
ಶೃಂಗೇರಿ: ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲಿ ಶುಕ್ರವಾರ ಮಧ್ಯಾಹ್ನ ಗುಡುಗು ಸಹಿತ ಧಾರಾಕಾರ ಮಳೆ ಸುರಿಯಿತು.
  ಕಳೆದ ಕೆಲ ದಿನಗಳಿಂದ ಉಂಟಾಗಿದ್ದ ಸುಡುಬಿಸಿಲ ಧಗೆಗೆ ಮಳೆಯಿಂದ ತಂಪೆರೆಯಿತು.   ಗುಡುಗು ಸಿಡಿಲಿನ ಆರ್ಭಟದಿಂದ ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.