ಚಿಕ್ಕಮಗಳೂರು

ಬಿಜೆಪಿ ಗೆದ್ದರೆ ಗಂಡಾಂತರ

Published On :

ಚಿಕ್ಕಮಗಳೂರು: ಮತದಾರರು ಮೈ ಮರೆತು ಕೋಮುವಾದಿ ಬಿಜೆಪಿ ಗೆಲ್ಲಿಸಿದರೆ ದೇಶ ದೊಡ್ಡ ಗಂಡಾಂತರ ಎದುರಿಸಬೇಕಾಗುತ್ತದೆ ಎಂದು ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ಎಂ.ಎಲ್. ಮೂರ್ತಿ ಹೇಳಿದ್ದಾರೆ.
ಹಿರೇಮಗಳೂರಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕೆ.ಜಯಪ್ರಕಾಶ್ ಹೆಗ್ಡೆ ಪರ ಸೋಮವಾರ ರೋಡ್ ಶೋ ನಡೆಸಿದ ನಂತರ ಮಾತನಾಡಿದ ಅವರು, ಸಾಮಾಜಿಕ ನ್ಯಾಯದ ಬಗ್ಗೆ ಮಾತನಾಡುವ ಬಿಜೆಪಿಗೆ ದಲಿತರು, ಶೋಷಿತರ ಬಗ್ಗೆ ಕಾಳಜಿ ಇಲ್ಲ. ದಲಿತರು, ಶೋಷಿತರು, ಕೂಲಿ ಕಾರ್ಮಿಕರು, ಬಡವರ ಬಗ್ಗೆ ಕಾಳಜಿ ಇಲ್ಲದ ಬಿಜೆಪಿಯಿಂದ ಉತ್ತಮ, ಸುಭದ್ರ, ಸ್ಥಿರ ಸರ್ಕಾರ ಸಾಧ್ಯವಿಲ್ಲ. ಒಂದು ವೇಳೆ ಜನ ಮೈ ಮರೆತು ಬಿಜೆಪಿಗೆ ಮತ ಚಲಾಯಿಸಿದಲ್ಲಿ ದೇಶದ ಜನರು ಗಂಡಾಂತರವನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಭರವಸೆ ಬೆಳಕು:  ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ. ಡಿ.ಎಲ್. ವಿಜಯಕುಮಾರ್ ಮಾತನಾಡಿ, ವಿರೋಧ ಪಕ್ಷದ ಮುಖಂಡರು, ಕಾರ್ಯಕರ್ತರು ಜನರ ಭಾವನೆಗಳನ್ನು ಕೆರಳಿಸಿ ಮತಯಾಚನೆ ನಡೆಸುತ್ತಿದ್ದಾರೆ. ಅದು ಒಳ್ಳೆಯದಲ್ಲ. ಆದರೆ, ನಮ್ಮ ಪಕ್ಷದ ಮುಖಂಡರು ರಾಜ್ಯದಲ್ಲಿ ಮತ್ತು ಕೇಂದ್ರದಲ್ಲಿ ನಮ್ಮ ಪಕ್ಷದ ಸರಕಾರ ಮಾಡಿರುವ ಸಾಧನೆಗಳನ್ನು ಮುಂದಿಟ್ಟು ಮತಯಾಚಿಸುತ್ತಿದ್ದೇವೆ. ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ, ಕೇಂದ್ರದಲ್ಲಿ ಪ್ರಧಾನ ಮಂತ್ರಿ ಮನಮೋಹನ ಸಿಂಗ್, ಪಕ್ಷದ ಅಧ್ಯಕ್ಷೆ ಸೋನಿಯಾಗಾಂಧಿ ಜನಪರ ಆಡಳಿತ, ಕಾರ್ಯಕ್ರಮಗಳನ್ನು ನೀಡಿದ್ದಾರೆ. ಅಭಿವೃದ್ಧಿ ಪಥದಲ್ಲಿ ದೇಶವನ್ನು ಮುನ್ನಡೆಸುತ್ತಿದ್ದಾರೆ. ದಲಿತರು, ಶೋಷಿತರ ಪರವಾಗಿ ಅನುಷ್ಠಾನಗೊಳಿಸಿರುವ ಕಾರ್ಯಕ್ರಮಗಳು ಜನರಲ್ಲಿ ಭರವಸೆ ಬೆಳಕು ಮೂಡಿಸಿವೆ ಎಂದು ಹೇಳಿದರು.
ಹೆಗ್ಡೆ ಗೆಲ್ಲಿಸಿ:  ನಗರಸಭೆ ಸದಸ್ಯ ಹಿರೇಮಗಳೂರು ಪುಟ್ಟಸ್ವಾಮಿ ಮಾತನಾಡಿ, ದೇಶದ ಇತಿಹಾಸದಲ್ಲಿ ಮೊದಲ ಬಾರಿಗೆ ಪರಿಶಿಷ್ಟ ಜಾತಿ, ಹಿಂದುಳಿದ ವರ್ಗ, ಅಲ್ಪಸಂಖ್ಯಾತರ ಸಾಲವನ್ನು ಮನ್ನಾ ಮಾಡಿದ್ದರೆ ಅದು ರಾಜ್ಯದ ಮುಖ್ಯಮಂತ್ರಿ ಸಿದ್ಧರಾಮಯ್ಯ ಸರ್ಕಾರ. ಇಲ್ಲಿಯವರೆಗೆ ಸರಕಾರ ನಡೆಸಿರುವ ಪಕ್ಷಗಳು ಎಂದೂ ದಲಿತರು, ಶೋಷಿತರು, ಹಿಂದುಳಿದ ವರ್ಗದವರು, ಅಲ್ಪಸಂಖ್ಯಾತರ ಪರವಾಗಿ ಚಿಂತನೆ ನಡೆಸಿರಲಿಲ್ಲ. ಸಿದ್ಧರಾಮಯ್ಯ ಸರ್ಕಾರ ಕೇವಲ 11 ತಿಂಗಳಿನಲ್ಲೆ ದೊಡ್ಡ ಸಾಧನೆ ಮಾಡಿ ಜನಮನ ಗೆದ್ದಿದೆ.
ಮತ್ತಷ್ಟು ಸಾಧನೆಗಳಿಗೆ ಅವಕಾಶ ಮಾಡಿಕೊಡುವ ಉದ್ದೇಶದಿಂದ ನಮ್ಮ ಪಕ್ಷದ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ ಅವರಿಗೆ ಮತ ನೀಡುವ ಮೂಲಕ ಗೆಲ್ಲಿಸಿ ಎಂದು ಮನವಿ ಮಾಡಿದರು.
ಎಸ್.ಸಿ. ಘಟಕ ಕಾರ್ಯದರ್ಶಿ ರಾಮಚಂದ್ರ ಮಾತನಾಡಿದರು. ಮುಖಂಡರಾದ ಎಚ್.ಆರ್. ಚಂದ್ರಪ್ಪ, ಎಚ್.ಜೆ. ಶಿವಕುಮಾರ್, ಎಚ್.ಎಸ್. ಜಗದೀಶ್, ಕೃಷ್ಣಮೂರ್ತಿ, ಎಚ್.ಸಿ. ಗಂಗಾಧರ್, ವೆಂಕಟೇಶ್, ಎಚ್.ಎಸ್. ಮಲ್ಲೇಶ್ ಪ್ರಚಾರದಲ್ಲಿ ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.