ಕಡೂರನ್ನು ಸರ್ಕಾರ ಮರೆಯಿತೇ?
ಕಡೂರು: ಬರದಿಂದ ಬೇಯುತ್ತಿರುವ ತಾಲೂಕಿನಲ್ಲಿ ಮೂಲ ಸೌಕರ್ಯಗಳ ಸಮಸ್ಯೆ ಹೆಚ್ಚುತ್ತಿದೆ. ಆದರೆ, ಇಂಥ ಸಂದರ್ಭದಲ್ಲಿ ಗ್ರಾಮೀಣ ಪ್ರದೇಶಗಳಿಗೆ ಭೇಟಿ ನೀಡದ ಜಿಲ್ಲಾ ಉಸ್ತುವಾರಿ ಸಚಿವ ಅಭಯಚಂದ್ರ ಜೈನ್ ಈಗ ನಾಪತ್ತೆಯಾಗಿದ್ದಾರೆ. ಇದರಿಂದ ಜನರ ಸಮಸ್ಯೆ ಆಲಿಸುವವರು ಯಾರೂ ಇಲ್ಲದಂತಾಗಿದೆ.
ತಾಲೂಕಿನಲ್ಲಿ ಪ್ರತಿವರ್ಷ ಬರಗಾಲ ಬಾಧಿಸುತ್ತದೆ. ಕುಡಿವ ನೀರು, ಉದ್ಯೋಗವಿಲ್ಲದೆ ವಲಸೆ ಹೋಗುವವರೂ ಇದ್ದಾರೆ. ಇಂಥ ಬಡವರ್ಗ, ಕೂಲಿ ಕಾರ್ಮಿಕರು, ಸಣ್ಣ ರೈತರಿಗೆ ಬದುಕು ಕಟ್ಟಿಕೊಡುವುದು ಸರ್ಕಾರದ ಕರ್ತವ್ಯ. ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ನೂತನ ಸರ್ಕಾರ ಆಡಳಿತಕ್ಕೆ ಬಂದು 11 ತಿಂಗಳಾಗಿದೆ.
ಜನರಿಗೆ ಕನಿಷ್ಠ ಉದ್ಯೋಗ ಹಾಗೂ ಅಭಿವೃದ್ಧಿ ಕಾರ್ಯಗಳ ಸೃಷ್ಟಿ ಮಾಡುವ ಜವಾಬ್ದಾರಿ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸ್ಥಳೀಯ ಜನಪ್ರತಿನಿಧಿಗಳ ಜವಾಬ್ದಾರಿ. ಆದರೆ, ಇದ್ಯಾವುದೂ ತಾಲೂಕಿನಲ್ಲಿ ಆಗದಿರುವುದು ಜನರ ಅಸಮಾಧಾನಕ್ಕೆ ಕಾರಣವಾಗುತ್ತಿದೆ.
ಸಚಿವರಿಗೆ ಜವಾಬ್ದಾರಿ ಇಲ್ಲವೇ?: ಕಡೂರು ತಾಲೂಕಿನಲ್ಲಿ ಬರದಿಂದ ಜನ-ಜಾನುವಾರುಗಳಿಗೆ ನೀರಿನ ಸಮಸ್ಯೆ ತಲೆದೋರಿದೆ. ತೆಂಗು, ಅಡಕೆ ತೋಟಗಳು ಒಣಗುತ್ತಿವೆ. ಅಂತರ್ಜಲ ಬತ್ತುತ್ತಿದೆ. ನುಸಿಪೀಡೆ, ಗರಿರೋಗದಿಂದ ತೆಂಗಿನ ಸುಳಿಗಳು ನೆಲಕ್ಕುರುಳುತ್ತಿವೆ.
ಬರಿದಾಗಿರುವ ಕೆರೆಗಳು, ಜನರ ಸಮಸ್ಯೆಗೆ ಸ್ಪಂದಿಸದ ಅಧಿಕಾರಿಗಳಿಂದಾಗಿ ಜನ ಕೆಲಸ ಅರಸಿ ಗುಳೆ ಹೋಗುತ್ತಿದ್ದಾರೆ. ಆದರೆ, ಸಮಸ್ಯೆಗಳ ಬಗ್ಗೆ ಇಬ್ಬರು ಶಾಸಕರು ಹಾಗೂ ಜನಪ್ರತಿನಿಧಿಗಳೊಂದಿಗೆ ಸಮಾಲೋಚಿಸಿ ಪರಿಹಾರ ಕಂಡುಕೊಳ್ಳುವ ಯಾವ ಪ್ರಯತ್ನವನ್ನೂ ನಡೆಸಿಲ್ಲ. ಜಿಲ್ಲಾ ಉಸ್ತುವಾರಿ ಸಚಿವ ಅಭಯಚಂದ್ರ ಜೈನ್ ಅವರಿಗೆ ಜವಾಬ್ದಾರಿ ಇಲ್ಲವೆ ಎಂದು ತಾಲೂಕಿನ ಜನ ಪ್ರಶ್ನಿಸುತ್ತಿದ್ದಾರೆ.
ಕ್ಷೇತ್ರದ ಶಾಸಕ ವೈ.ಎಸ್.ವಿ. ದತ್ತ ಬರದಲ್ಲಿ 3.25 ಕೋಟಿ ಮೊತ್ತದ ಕ್ರಿಯಾಶೀಲ ಯೋಜನೆ ರೂಪಿಸಿದ್ದರೂ ಸರ್ಕಾರ ಬಿಡಿಗಾಸು ನೀಡಿಲ್ಲ ಎನ್ನುತ್ತಿದ್ದಾರೆ. ಇತ್ತ ಆಡಳಿತಾರೂಢ ಕಾಂಗ್ರೆಸ್ ಮುಖಂಡರಾದ ಕೆ.ಬಿ. ಮಲ್ಲಿಕಾರ್ಜುನ್, ಶಾಸಕರ ಆರೋಪ ಸರಿಯಲ್ಲ. ಈಗಾಗಲೇ 70 ಲಕ್ಷ ಬಿಡುಗಡೆಯಾಗಿದೆ. ಶಾಸಕರು ವೃಥಾ ಆರೋಪ ಮಾಡುತ್ತಿದ್ದಾರೆ ಎನ್ನುತ್ತಾರೆ. ಈ ರಾಜಕೀಯದಲ್ಲಿ ತಾಲೂಕಿನ ಜನರ ಸ್ಥಿತಿ ಕೂಸು ಬಡವಾಯಿತು ಎನ್ನುವಂತಾಗಿದೆ.
ಅಭಿವೃದ್ಧಿಗೆ ಆಗಮಿಸುವರೇ?: ಬರಪೀಡಿತ ತಾಲೂಕುಗಳ ಪಟ್ಟಿಗೆ ಕಡೂರು ಸೇರ್ಪಡೆ ಆಗಿದೆ. ಆದರೂ, ಇಲ್ಲಿನ ಸಮಸ್ಯೆ ಅರಿಯಲು ಉಸ್ತುವಾರಿ ಸಚಿವರು ಒಮ್ಮೆಯೂ ಇತ್ತ ಬಂದಿಲ್ಲ. ಕಡೂರಿನ ತಾ.ಪಂ. ಸಭಾಂಗಣದಲ್ಲಿ ಅಧಿಕಾರಿಗಳ ಸಭೆ ನಡೆಸಿದ್ದು ಬಿಟ್ಟರೆ ಉಳಿದಂತೆ ಉಸ್ತುವಾರಿ ಸಚಿವರು ನಾಪತ್ತೆ ಆಗಿದ್ದಾರೆ. ಆ ಮೇಲೆ ಜಿಲ್ಲಾಧಿಕಾರಿ 2 ಸಭೆ ನಡೆಸಿದ್ದು ಯಾವ ಅಭಿವೃದ್ಧಿಯ ರೂಪುರೇಷೆ ಸಿದ್ಧವಾಗಿಲ್ಲ. ಬಿಜೆಪಿ ಸರ್ಕಾರದಲ್ಲಿ ಬರದಲ್ಲಿ ಮೇವು, ನೀರು ಹಾಗೂ ಚೆಕ್ ಡ್ಯಾಂ ಎಂಬ ಕಾರ್ಯಕ್ರಮ ರೂಪಿಸಲಾಗಿತ್ತು. ಈ ಬಾರಿ ಅದೂ ಇಲ್ಲ. ತಾಲೂಕಿನಲ್ಲಿ ನೀರಾವರಿ ಇಲ್ಲ, ಕೈಗಾರಿಕೆಗಳು ಮೊದಲೇ ಇಲ್ಲ. ಇನ್ನು ಉದ್ಯೋಗ ಸೃಷ್ಟಿ ಎಲ್ಲಿಂದ ಎಂಬಂತಾಗಿದೆ. ಇನ್ನಾದರೂ ಜಿಲ್ಲಾ ಉಸ್ತುವಾರಿ ಸಚಿವ ಅಭಯಚಂದ್ರ ಜೈನ್ ತಾಲೂಕಿನ ಅಭಿವೃದ್ಧಿಗೆ ಆಗಮಿಸುವರೇ?
ಕಡೂರು ಕೃಷ್ಣಮೂರ್ತಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

