ಪೂಜಾ ಕಾರ್ಯದಿಂದ ನೆಮ್ಮದಿ
ಚಿಕ್ಕಮಗಳೂರು: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಸ್ತಾರೆ ವಲಯದ ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟದ ಮಹಿಳೆಯರಿಂದ ತಾಲೂಕಿನ ವಸ್ತಾರೆಯಲ್ಲಿ ಬುಧವಾರ ಸಾಮೂಹಿಕ ಶ್ರೀಸತ್ಯನಾರಾಯಣಪೂಜೆ ವೈಭವದಿಂದ ನಡೆಯಿತು.
ಗ್ರಾಮದ ಶ್ರೀರಂಗನಾಥಸ್ವಾಮಿ ದೇವಾಲಯದಲ್ಲಿ ನಿರ್ಮಿಸಲಾಗಿದ್ದ ಸಾಲಂಕೃತ ಮಂಟಪದಲ್ಲಿ ಶ್ರೀ ಸತ್ಯ ನಾರಾಯಣಸ್ವಾಮಿ ಮೂರ್ತಿಯನ್ನು ಪ್ರತಿಷ್ಠಾಪಿಸಿ ಧಾರ್ಮಿಕ ವಿಧಿವಿಧಾನಗಳ ನಡುವೆ ವ್ರತವನ್ನು ಆಚರಿಸಲಾಯಿತು. ನಂತರ ಒಕ್ಕೂಟದ ಮಹಿಳೆಯರು ಸಾಮೂಹಿಕವಾಗಿ ಶ್ರೀಸತ್ಯನಾರಾಯಣಸ್ವಾಮಿಯ ಪೂಜೆ ನೆರವೇರಿಸಿದರು. ಮಹಾಮಂಗಳಾರತಿ ನಂತರ ಸಾರ್ವಜನಿಕ ಅನ್ನಸಂತರ್ಪಣೆ ಜರುಗಿತು.
ಈ ಸಂದರ್ಭ ನಡೆದ ಧಾರ್ಮಿಕ ಸಭೆ ಉದ್ಘಾಟಿಸಿ ಮಾತನಾಡಿದ ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ತೇಗೂರು ಜಗದೀಶ್, ಭಗವಂತನಿಗೆ ಶರಣಾಗಿ ಧಾರ್ಮಿಕ ಆಚರಣೆ ಮಾಡುವುದರಿಂದ ಮನುಷ್ಯನಿಗೆ ಸುಖ, ಸಂತಸ ಮತ್ತು ಮನಃಶಾಂತಿ ಲಭಿಸುತ್ತವೆ ಎಂದರು.
ನಿವೃತ್ತ ಹಿರಿಯ ಪಶುಪರೀಕ್ಷಕ ಲಕ್ಷ್ಮಣರಾಜು ಮಾತನಾಡಿ, ಹಳ್ಳಿಹಳ್ಳಿಗಳಲ್ಲಿ ಹೋಮ, ಹವನ ಸೇರಿದಂತೆ ಧಾರ್ಮಿಕ ಆಚರಣೆಗಳನ್ನು ಮಾಡುವುದರಿಂದ ಕಾಲಕಾಲಕ್ಕೆ ಮಳೆ, ಬೆಳೆಯಾಗಿ ದೇಶ ಸುಭಿಕ್ಷವಾಗುತ್ತದೆ ಎಂದು ಹೇಳಿದರು.
ಶ್ರೀಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕಿ ಗೀತಾ ಮಾತನಾಡಿ, ಎಲ್ಲವೂ ತಮಗೆ ಬೇಕೆಂಬ ಅತಿಯಾಸೆಯಿಂದ ಹಣದ ಹಿಂದೆ ಓಡುತ್ತಾ ಸದಾ ಒತ್ತಡದ ನಡುವೆ ಬದುಕುತ್ತಿರುವ ಇಂದಿನ ಪೀಳಿಗೆಯ ಮಾನಸಿಕ ಶಾಂತಿ ಮತ್ತು ನೆಮ್ಮದಿಗೆ ಧಾರ್ಮಿಕ ಆಚರಣೆಗಳು ಸಹಕಾರಿ ಆಗುತ್ತದೆ ಎಂದು ತಿಳಿಸಿದರು.
ಜನರಲ್ಲಿ ಧಾರ್ಮಿಕತೆ ಬೆಳೆಸಿ ಅವರಲ್ಲಿ ನಮ್ಮ ಸಂಸ್ಕೃತಿ, ಸಂಪ್ರದಾಯ ಮತ್ತು ಸಂಸ್ಕಾರಗಳನ್ನು ತುಂಬುವ ಉದ್ದೇಶದಿಂದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಾಮೂಹಿಕ ಶ್ರೀಸತ್ಯನಾರಾಯಣಪೂಜೆ ಯನ್ನು ಜಿಲ್ಲೆಯ ವಿವಿಧ ಭಾಗಗಳಲ್ಲಿ ನಡೆಸುತ್ತಿದೆ ಎಂದು ಹೇಳಿದರು.
ಪ್ರಗತಿಪರ ಕೃಷಿಕ ಪರಮೇಶ್ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಡಿ.ಜೆ. ಸುರೇಶ್, ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷೆ ಮೀನಾಕ್ಷಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪ್ರಕಾಶ್, ಪ್ರಗತಿಪರ ಕೃಷಿಕರಾದ ದುಗ್ಗೇಗೌಡ, ವಾಜುವಳ್ಳಿ ರಮೇಶ್, ಪಳನಿ, ಯೋಜನೆಯ ವಲಯ ಮೇಲ್ವಿಚಾರಕಿ ಅನಸೂಯ, ಎಂ.ವೀರೇಂದ್ರಕುಮಾರ್ ಜೈನ್, ಮರುಳಪ್ಪ ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

