ಚಿಕ್ಕಮಗಳೂರು

ಕಸಾಪ ಆರ್ಥಿಕವಾಗಿ ಬೆಳೆಯಲಿ

Published On :

ಕ.ಪ್ರ.ವಾರ್ತೆ  ಕಡೂರು  ಫೆ.1
ರಾಜ್ಯ ಸರ್ಕಾರವು ಕನ್ನಡ ಸಾಹಿತ್ಯ ಪರಿಷತ್ತಿಗೆ ಆರ್ಥಿಕ ಅನುದಾನ ನೀಡದಿದ್ದಲ್ಲಿ ಪರಿಷತ್ತಿಗೆ ಬೀಗ ಹಾಕಿ ಸರ್ಕಾರದ ವಿರುದ್ಧ ಧರಣಿ ನಡೆಸುವುದಾಗಿ ಹೇಳಿರುವ ಪರಿಷತ್ತಿನ ರಾಜ್ಯಾಧ್ಯಕ್ಷರ ಹೇಳಿಕೆಯು ಪ್ರತಿಯೊಬ್ಬ ಕನ್ನಡಿಗರ ಸ್ವಾಭಿಮಾನ ಕೆಣಕುವ, ಕನ್ನಡಿಗರ ಸ್ವಾಭಿಮಾನಕ್ಕೆ ಧಕ್ಕೆ ತರುವ ವಿಷಯವಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ರಾಜ್ಯಾಧ್ಯಕ್ಷ ಗೊ.ರು. ಚನ್ನಬಸಪ್ಪ ಹೇಳಿದರು.
ತಾಲೂಕಿನ ಚಿಕ್ಕನಲ್ಲೂರು ಗ್ರಾಮದಲ್ಲಿ ನಡೆದ ಹಿರೇನಲ್ಲೂರು ಹೋಬಳಿಯ ದ್ವಿತೀಯ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ಕನ್ನಡ ಸಾಹಿತ್ಯ ಪರಿಷತ್ತನ್ನೂ ಯಾವತ್ತೂ ಕೂಡ ಸರ್ಕಾರದ ಮುಂದೆ ಭಿಕ್ಷೆ ಬೇಡುವ ಸ್ಥಿತಿಗೆ ತರಲು ಬಿಡದೆ ಹಣಕಾಸಿನ ಅಭಾವ ನೀಗಿಸಲು ಪ್ರತಿಯೊಬ್ಬ ಕನ್ನಡಿಗನೂ ಕಂಕಣಗೈಯ್ಯಬೇಕು ಎಂದರು.
ಆರ್ಥಿಕವಾಗಿ ಬಲಿಷ್ಠಗೊಳಿಸಿ: ಕಸಾಪದ ರಾಜ್ಯಾಧ್ಯಕ್ಷರು ಆ ಹೇಳಿಕೆ ನೀಡಿರುವುದು ಅವರ ಅಧ್ಯಕ್ಷ ಸ್ಥಾನದ ಘನತೆಗೆ ತಕ್ಕುದಲ್ಲ ಎಂದು ಕಿಡಿಕಾರಿದ ಗೊರುಚ, ಕನ್ನಡ ಸಾಹಿತ್ಯ ಪರಿಷತ್ತು ಕನ್ನಡಿಗರ ಏಕೈಕ ಪ್ರಾತಿನಿಧಿಕ ಸಂಸ್ಥೆಯಾಗಿದ್ದು ಇದು ಮುಂದೆ ಯಾರ ಮುಂದೆಯೂ ಮಂಡಿಯೂರದಂತೆ ಈ ಸಂಸ್ಥೆಯನ್ನು ಆರ್ಥಿಕವಾಗಿ, ಸಾಂಸ್ಕೃತಿಕವಾಗಿ ಬಲಿಷ್ಠಗೊಳಿಸಿ ಮುನ್ನಡೆಸಬೇಕಾಗಿರುವುದು ಪ್ರತಿಯೊಬ್ಬ ಕನ್ನಡಿಗರ ಆದ್ಯ ಕರ್ತವ್ಯ. ಕನ್ನಡದ ಉಳಿವಿಗೆ ಇಂತಹ ಗ್ರಾಮೀಣ ಮಟ್ಟದ ಸಮ್ಮೇಳನಗಳು ಅತೀ ಅವಶ್ಯಕತೆಯಿವೆ ಎಂದು ಒತ್ತಿ ಹೇಳಿದರು.
 ಅಧ್ಯಕ್ಷತೆ ವಹಿಸಿದ್ದ ಸಮ್ಮೇಳನಾಧ್ಯಕ್ಷ ಬಿ.ಎಂ. ಪರಮೇಶ್ವರಪ್ಪ ಮಾತನಾಡಿ, ಭಾಷೆ ಬೆಳೆಸುವಲ್ಲಿ ಸಾಹಿತಿಗಳ ಪಾತ್ರ ಎಷ್ಟು ಮಹತ್ವದ್ದೋ ಭಾಷೆಯನ್ನು ಒಲವಿನಿಂದ ಓದುವ ಶ್ರೀಸಾಮಾನ್ಯನ ಪಾತ್ರ ಕೂಡ ಅಷ್ಟೇ ಮುಖ್ಯ.
 ಸಾವಿರಾರು ಸಂತರು ಸಾಧುಗಳು, ಶರಣರು, ದಾಸರು, ಕವಿಗಳು, ಕಲಾವಿದರು, ಜನಪದ ಸಾಹಿತಿಗಳು ಮುಂತಾದ ಮಹಾನ್ ವ್ಯಕ್ತಿಗಳು ತಮ್ಮದೇ ಆದ ಸೇವೆ ಮೂಲಕ ಕನ್ನಡ ನಾಡು ಕನ್ನಡ ಭಾಷೆಯನ್ನು ಶ್ರೀಮಂತಗೊಳಿಸಿದ್ದಾರೆ ಎಂದರು.
ನೀರಾವರಿ ಅನುಷ್ಠಾನಕ್ಕೆ ಆಗ್ರಹ: ಸಮ್ಮೇಳನದ ಸಾನ್ನಿಧ್ಯ ವಹಿಸಿದ್ದ ಹಣ್ಣೇಮಠದ ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಿ, ಕನ್ನಡ ನಾಡಿನ ಸಮಗ್ರ ಪ್ರಗತಿಗೆ ಮರಾಠಿಗರು ಮತ್ತು ತಮಿಳರಿಂದ ಧಕ್ಕೆ ಉಂಟಾಗುತ್ತಿದೆ.
  ಇದರ ವಿರುದ್ಧ ಎಲ್ಲ ಕನ್ನಡಿಗರೂ ಸೆಟೆದು ನಿಂತಲ್ಲಿ ಕನ್ನಡ ನಾಡಿನ ರಕ್ಷಣೆ ಸಾಧ್ಯ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಪಂಚನದಿಗಳು ಹುಟ್ಟಿ ಹರಿಯುತ್ತಿದ್ದರೂ ಕೂಡ ತಾಲೂಕಿನ ಜನತೆಗ ಬೊಗಸೆ ನೀರು ಉಪಯೋಗವಿಲ್ಲದ ಸ್ಥಿತಿ ಉಂಟಾಗಿದೆ. ರಾಜಕಾರಣಿಗಳು ಮತ ಯಾಚಿಸಲು ಬಂದಾಗ ತರಾಟೆಗೆ ತೆಗೆದುಕೊಂಡು ನೀರಾವರಿ ಸವಲತ್ತುಗಳನ್ನು ಅನುಷ್ಠಾನಗೊಳಿಸುವಂತೆ ಪಟ್ಟು ಹಿಡಿಯಬೇಕು ಎಂದು ಕರೆ ನೀಡಿದರು.
 ಸಮ್ಮೇಳನದ ಅಂಗವಾಗಿ ಸುಂದರವಾಗಿ ಸಿಂಗರಿಸಲಾಗಿದ್ದ ವಿಶೇಷ ರಥದಲ್ಲಿ ಸಮ್ಮೇಳನಾಧ್ಯಕ್ಷರಾದ ಬಿ.ಎಂ.ಪರಮೇಶ್ವರಪ್ಪ ಅವರನ್ನು ಶ್ರೀಕಲ್ಲೇಶ್ವರ ದೇಗುಲದಿಂದ ರಥವನ್ನು ಮೆರವಣಿಗೆ ಆರಂಭಿಸಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ದಾರಿಯುದ್ದಕ್ಕೂ ಜಾನಪದ ಕಲಾತಂಡಗಳು, ಗ್ರಾಮೀಣ ಜನಪದ ವಾದ್ಯಗಳು ಮೆರವಣಿಗೆಗೆ ಶೋಭೆ ತಂದವು.
ಮೆರವಣಿಗೆಗೆ ಚಾಲನೆ: ಗಿರಿಯಾಪುರ ಗ್ರಾಮ ಪಂಚಾಯ್ತಿ ಅಧ್ಯಕ್ಷ ಶಶಿಧರ್ ಮತ್ತು ತಾಲೂಕು ಕಸಾಪ ಅಧ್ಯಕ್ಷ ಸೂರಿ ಶ್ರೀನಿವಾಸ್ ಧ್ವಜಾರೋಹಣ ಮಾಡಿದರು. ಜಿಪಂ ಸದಸ್ಯೆ ಪದ್ಮಾ ಚಂದ್ರಪ್ಪ ಮೆರವಣಿಗೆಗೆ ಚಾಲನೆ ನೀಡಿದರು.
 ಸಮ್ಮೇಳನದಲ್ಲಿ ನಿಕಟಪೂರ್ವ ಅಧ್ಯಕ್ಷ ಜಿ.ಸಿ.ಸಿದ್ದಪ್ಪ, ಜಿಲ್ಲಾ ಕಸಾಪ ಅಧ್ಯಕ್ಷ ನಾ.ಸು. ಶಿವಸ್ವಾಮಿ, ಸ್ವಾಗತಿ ಸಮಿತಿ ಅಧ್ಯಕ್ಷ ಸಿ.ಎನ್. ಕ್ಷೇತ್ರಪಾಲ್, ಕಾರ್ಯಾಧ್ಯಕ್ಷ ಸೀಗೇಹಡ್ಲು ಹರೀಶ್, ಜಿ. ಪಿ.ಪ್ರಭುಕುಮಾರ್, ಮಾಜಿ ಜಿ.ಪ. ಅಧ್ಯಕ್ಷ ಬೆಳ್ಳಿ ಪ್ರಕಾಶ್ ಮುಂತಾದವರು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.