ಚಿಕ್ಕಮಗಳೂರು

ಸಹಕಾರ ಸಂಘಕ್ಕೆ ರಾಜಕೀಯ ಬೇಡ

Published On :

ಚಿಕ್ಕಮಗಳೂರು: ಸಹಕಾರ ಸಂಘಗಳು ರಾಜಕೀಯದಿಂದ ದೂರವಿರಬೇಕು. ಬಡವರು, ದೀನರು, ದುರ್ಬಲರು ಮತ್ತು ರೈತರನ್ನು ಆರ್ಥಿಕವಾಗಿ ಮೇಲೆತ್ತುವ ಕೆಲಸ ಮಾಡಬೇಕು ಎಂದು ಶಾಸಕ ಸಿ.ಟಿ. ರವಿ ಹೇಳಿದ್ದಾರೆ.
ತಾಲೂಕಿನ ಮೂಗ್ತಿಹಳ್ಳಿಯಲ್ಲಿ ಶನಿವಾರ ನಡೆದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಹಕಾರ ಸಂಘಗಳು ಬಡವರು ಮತ್ತು ರೈತರನ್ನು ಯಾವುದೇ ಕಾರಣಕ್ಕೂ ಕಡೆಗಣಿಸಬಾರದು. ಅವರಿಗೆ ಪ್ರಾಮಾಣಿಕವಾಗಿ ಆರ್ಥಿಕ ನೆರವು ನೀಡಬೇಕು, ಸಹಕಾರಿ ಸಂಘಗಳ ಅಳಿವು ಮತ್ತು ಉಳಿವು ಷೇರುದಾರರ ಕೈಯಲ್ಲಿದೆ ಅವರು ನಿಗಾವಹಿಸದಿದ್ದರೆ ಸಂಘಗಳು ಅಡ್ಡದಾರಿ ಹಿಡಿದು ಹಾಳಾಗುತ್ತವೆ ಎಂದು ಎಚ್ಚರಿಸಿದರು.
ಪ್ರಕೃತಿಯಲ್ಲಿ ಸಹಕಾರಿ ತತ್ವವಿದೆ ಅದನ್ನು ನಾವು ನಮ್ಮ ಬದುಕಿನಲ್ಲಿ ಅಳವಡಿಸಿಕೊಂಡು ಪರಸ್ಪರ ಸಹಕಾರಿಯಾಗಿ ಬದುಕಿದರೆ ದೇಶ ಮತ್ತು ಸಮಾಜ ಸುಖವಾಗಿರುತ್ತದೆ ಎಂದು ತಿಳಿಸಿದರು.
ಜಿಲ್ಲಾ ಸಹಕಾರ ಯೂನಿಯನ್ ನಗರದಲ್ಲಿ ನಿರ್ಮಿಸುತ್ತಿರುವ ಭವನಕ್ಕೆ ಅನುದಾನ ಒದಗಿಸುವ ಭರವಸೆ ನೀಡಿದರು.
ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಮಾಜಿ ಶಾಸಕ ಎಸ್.ಎಲ್. ಧರ್ಮೇಗೌಡ, ಸಹಕಾರಿ ಕ್ಷೇತ್ರ ಉಳಿದು ಬೆಳೆಯಬೇಕಾದರೆ ರಾಜಕೀಯದಿಂದ ದೂರವಿರಬೇಕು. ಸಹಕಾರ ಸಂಘಗಳು ರೈತರ ಸಮಸ್ಯೆಗಳಿಗೆ ಪ್ರಾಮಾಣಿಕವಾಗಿ ಸ್ಪಂದಿಸಬೇಕು ಎಂದು ಕಿವಿಮಾತು ಹೇಳಿದರು.
ಶಾಸಕರಿಗೆ ಮನವಿ: ರಾಜ್ಯ ಸಹಕಾರ ಮಹಾಮಂಡಳದ ನಿರ್ದೇಶಕ ಬಿ.ಸಿ. ಲೋಕಪ್ಪಗೌಡ ಮಾತನಾಡಿ, ಜಿಲ್ಲಾ ಸಹಕಾರ ಯೂನಿಯನ್ ನಗರದಲ್ಲಿ ನಿರ್ಮಿಸುತ್ತಿರುವ ಭವನಕ್ಕೆ ಅನುದಾನ ನೀಡುವಂತೆ ಶಾಸಕ ಸಿ.ಟಿ. ರವಿ ಅವರಿಗೆ ಮನವಿ ಮಾಡಿದರು. ಸಂಘದ ಸ್ಥಾಪನೆಗೆ ದುಡಿದವರು ಮತ್ತು ಸಹಕರಿಸಿದವರನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು. ಗ್ರಾಮದ ಹಿರಿಯ ಎಂ.ಆರ್. ಸಣ್ಣಸಿದ್ದೇಗೌಡ ಸಹಕಾರಿ ಧ್ವಜಾರೋಹಣ ನೆರವೇರಿಸಿದರು.
ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್. ರಾಜಶೇಖರ್, ಜಿ.ಪಂ. ಸದಸ್ಯೆ ಹೇಮಾವತಿ ದೇವೇಗೌಡ, ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಕೆ.ಟಿ. ವೆಂಕಟೇಶ್, ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಅಧ್ಯಕ್ಷ  ಟಿ.ಇ. ಮಂಜುನಾಥ್, ಮೂಗ್ತಿಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಎಸ್.ಟಿ. ಚಂದ್ರೇಗೌಡ, ತೇಗೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ದಿನೇಶ್ ರಾಜ್ ಅರಸ್, ಕೂದುವಳ್ಳಿ ಸಹಕಾರ ಸಂಘದ ಅಧ್ಯಕ್ಷ ವಿ.ಪಿ. ಕೃಷ್ಣೇಗೌಡ, ನೂತನ ಸಂಘದ ಮುಖ್ಯ ಪ್ರವರ್ತಕ ಸಿ. ಆನಂದ್ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.