ಬಿಂದಿಗೆ ಒಡೆದು ಪ್ರತಿಭಟನೆ
ಕ.ಪ್ರ.ವಾರ್ತೆ ಕಡೂರು ಫೆ.26
ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷದಿಂದ ನಮ್ಮ ಬಡಾವಣೆಗಳಿಗೆ ನೀರು ನೀಡದೆ ದಲಿತ ಸಮುದಾಯವನ್ನು ಧಿಕ್ಕರಿಸಲಾಗುತ್ತಿದೆ ಎಂದು ಆರೋಪಿಸಿ ಬಿಂದಿಗೆಗಳನ್ನು ಒಡೆದು ಕಡೂರು ಪುರಸಭೆಗೆ ಮುತ್ತಿಗೆ ದಿಢೀರ್ ಪ್ರತಿಭಟನೆ ನಡೆಸಲಾಯಿತು.
ಪಟ್ಟಣದ 21ನೇ ವಾರ್ಡಿನ ನಿವಾಸಿಗಳು ಡಿಎಸ್ಎಸ್ ತಾಲೂಕು ಸಂಚಾಲಕ ಶೂದ್ರ ಶ್ರೀನಿವಾಸ್, ಮುಖಂಡರಾದ ಮೈಲಾರಿ, ಜಯಂತ್, ಕೃಷ್ಣಪ್ಪ ಅವರ ನೇತೃತ್ವದಲ್ಲಿ ಮಧ್ಯಾಹ್ನ ಸುಡುಬಿಸಿಲನ್ನೂ ಲೆಕ್ಕಿಸದೆ ಮಹಿಳೆಯರು, ಪುರುಷರು ಖಾಲಿ ಕೊಡಗಳೊಂದಿಗೆ ಪುರಸಭೆ ಆಡಳಿತದ ವಿರುದ್ಧ ಘೋಷಣೆ ಕೂಗಿದರು. ಕೊಡಪಾನಗಳನ್ನು ಪುರಸಭೆ ಮುಂಭಾಗ ಒಡೆದು ಹಾಕಿ ಪುರಸಭೆ ಬಾಗಿಲು ಮುಚ್ಚಿ ಅಧಿಕಾರಿಗಳಿಗೆ ದಿಗ್ಬಂಧನ ವಿಧಿಸಿದರು.
ಸ್ಥಳದಿಂದ ಕದಲದ ಪ್ರತಿಭಟನಾಕಾರರು: ದಲಿತರ ವಾರ್ಡು ಎಂದು ನಿರ್ಲಕ್ಷಿಸಿ 2 ತಿಂಗಳಿಂದ ನಮ್ಮ ಬಡಾವಣೆಗೆ ನೀರು ಪೂರೈಸುತ್ತಿಲ್ಲ. ಸ್ನಾನಕ್ಕೆ ಹಾಗೂ ಕುಡಿಯಲು ನೀರಿಲ್ಲದೆ ಹೆಣ್ಣು ಮಕ್ಕಳೂ ಕೂಡ ರಾತ್ರಿ 2 ಗಂಟೆ ವೇಳೆಯಲ್ಲಿ ದೂರದಿಂದ ನೀರು ತರಬೇಕಾಗಿದೆ. ಕೆ.ಹೊಸಳ್ಳಿಯಿಂದ ನಮ್ಮ ವಾರ್ಡಿಗೆ ಬರಬೇಕಾದ ನೀರು ಉದ್ದೇಶಪೂರ್ವಕವಾಗಿ ತಪ್ಪಿಸಿ ತಾರತಮ್ಯ ಮಾಡಲಾಗುತ್ತಿದೆ. ಈ ಸ್ಥಿತಿಗೆ ಪುರಸಭೆಯ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಕಾರಣರಾಗಿದ್ದಾರೆ. ಸಮಸ್ಯೆ ನಿವಾರಣೆಗೆ ಹಲವು ಬಾರಿ ಮನವಿ ಮಾಡಿದರೂ ಸಹ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿ, ಸಮಸ್ಯೆ ಬಗೆಹರಿಸದ ಹೊರತು ತಾವು ಸ್ಥಳ ಬಿಟ್ಟು ಕದಲುವುದಿಲ್ಲ ಎಂದು ಪುರಸಭೆ ಮುಂಭಾಗ ಧರಣಿ ಕುಳಿತು ಪ್ರತಿಭಟಿಸತೊಡಗಿದರು.
ಆಗ್ರಹ: ಧರಣಿನಿರತರನ್ನು ಉದ್ದೇಶಿಸಿ ಶೂದ್ರ ಶ್ರೀನಿವಾಸ್, ಮುಖಂಡ ಮೈಲಾರಿ ಮಾತನಾಡಿ, ಪಟ್ಟಣದ 21ನೇ ವಾರ್ಡು ಸೇರಿದಂತೆ ಅನೇಕ ಕಡೆ ನೀರಿನ ಸಮಸ್ಯೆ ಉದ್ಭವವಾಗಿದೆ. ಈ ಬಗ್ಗೆ ಮನವಿ ಮಾಡಿದರೂ ಕೂಡ ಯಾವುದೇ ಕ್ರಮಕ್ಕೆ ಮುಂದಾಗುತ್ತಿಲ್ಲ. ಅಧಿಕಾರಿಗಳ ಈ ನಿರ್ಲಕ್ಷ ಧೋರಣೆಯಿಂದ ಬೇಸತ್ತು ಇಂದು ಪುರಸಭೆಗೆ ಮುತ್ತಿಗೆ ಹಾಕಿ ಪ್ರತಿಭಟಿಸಲಾಗುತ್ತಿದೆ. ಸಮಸ್ಯೆ ಬಗೆಹರಿಸದೇ ಹೋದರೆ ಅಧಿಕಾರಿಗಳಿಗೆ ಜನರೇ ಬುದ್ಧಿ ಕಲಿಸಿ ಕೇಳಬೇಕಾದ ಪರಿಸ್ಥಿತಿ ಉದ್ಭವವಾಗುತ್ತದೆ. ಅಧಿಕಾರಿಗಳು ಅದಕ್ಕೆ ಅವಕಾಶ ನೀಡದಂತೆ ಸಮಸ್ಯೆ ಬಗೆಹರಿಸಬೇಕು ಎಂದು ಆಗ್ರಹಿಸಿದರು.
ಅಂತರ್ಜಲ ಕಡಿಮೆ: ಆಗ ಕಚೇರಿಯಿಂದ ಹೊರಬಂದ ಮುಖ್ಯಾಧಿಕಾರಿ ಕುಮಾರನಾಯ್ಕ, ಆರೋಗ್ಯ ನಿರೀಕ್ಷಕ ಹರೀಶ್, ಪುರಸಭಾ ಸದಸ್ಯರಾದ ಕೆ.ಎಂ. ಜಯಣ್ಣ, ಜಿ.ಸೋಮಯ್ಯ ಮಾತನಾಡಿ, ಜನರನ್ನು ಸಮಾಧಾನಪಡಿಸಲು ಮುಂದಾದರು. ಅಂತರ್ಜಲ ಕಡಿಮೆಯಾಗಿ ಕೊಳವೆಬಾವಿಗಳಲ್ಲಿ ನೀರಿಲ್ಲದೆ ಸಮಸ್ಯೆ ಉಂಟಾಗಿದೆ. ತಕ್ಷಣವೇ ಟ್ಯಾಂಕರ್ ಮೂಲಕ ನೀರು ಪೂರೈಸಲಾಗುವುದು. ಕೊಳವೆಬಾವಿಗಳನ್ನು ಫ್ಲಶ್ ಮಾಡಿಸಿ ನೀರು ಸರಬರಾಜು ಮಾಡಲು ಕ್ರಮ ಕೈಗೊಳ್ಳಲಾಗುವುದು. ಅಂತರ್ಜಲ ಕಡಿಮೆ ಆಗಿರುವುದರಿಂದ ಹೊಸ ಕೊಳವೆಬಾವಿ ಕೊರೆಯಲು ಈಗಾಗಲೇ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಮನವರಿಕೆ ಮಾಡಿಕೊಟ್ಟರು.
ಬಳಿಕ ಪ್ರತಿಭಟನಾಕಾರರು ಧರಣಿ ಕೈಬಿಟ್ಟರು. ಪ್ರತಿಭಟನೆಯಲ್ಲಿ ಮುಖಂಡರಾದ ಆರ್.ಎಂ.ಬಸವರಾಜ್,ಪರಮೇಶ್, ಕೃಷ್ಣಪ್ಪ ಸೇರಿದಂತೆ ಅನೇಕ ಮಹಿಳೆಯರು ಪಾಲ್ಗೊಂಡಿದ್ದರು.
--
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

