ಚಿಕ್ಕಮಗಳೂರು

ಜಿಪಂ ಚೆಲ್ಲಾಟ, ಗ್ರಾಪಂ ಪೀಕಲಾಟ

Published On :

 ಆರ್. ತಾರಾನಾಥ್
ಕಪ್ರ. ವಾರ್ತೆ, ಚಿಕ್ಕಮಗಳೂರು, ಜ.3
ಜಿಲ್ಲಾ ಪಂಚಾಯ್ತಿಯ ಅಧಿಕಾರಿಗಳು ಬೆಣ್ಣೆಯಲ್ಲಿ ಕೂದಲು ತೆಗೆಯವಂತೆ ಸಲಿಸಾಗಿ ಹಣ ಮಾಡುವ ದಾರಿಯನ್ನು ಕಂಡು ಹಿಡಿದಿದ್ದಾರೆ.
ಈ ಹಿಂದೆ ಹಾಸ್ಟಲ್ಗಳಿಗೆ ಚಪ್ಪಲಿ ಸ್ಟ್ಯಾಂಡ್ ಸರಬರಾಜು ಮಾಡುವ ಸಂದರ್ಭದಲ್ಲಿ ದುಬಾರಿ ಹಣ ಪಾವತಿ ಮಾಡಿ ಸಿಕ್ಕಿ ಹಾಕಿಕೊಂಡು, ಇದರಿಂದ ಬಚಾವ್ ಆಗಲು ತನಿಖೆಯ ಅಸ್ತ್ರ ಪ್ರಯೋಗ ಮಾಡಿ ಕೈ ತೊಳೆದುಕೊಂಡಿದ್ದರು. ಈಗ ಮತ್ತೆ ಅದೇ ಪ್ರವೃತ್ತಿ ಮುಂದುವರಿದಿದೆ.
ಕೈಂಡ್ ಹಾರ್ಟ್ಸ್: ಚಿಕ್ಕಮಗಳೂರು ಜಿಲ್ಲೆಯಲ್ಲಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಜಾರಿಗೆ ಬಂದಾಗ, ಪ್ರಚಾರಕ್ಕಾಗಿ ಬಜೆಟ್ನಲ್ಲಿ ಇಂತಿಷ್ಟು ಹಣ ಮೀಸಲಾಗಿಡಲಾಗಿತ್ತು. ಗ್ರಾಮ ಪಂಚಾಯ್ತಿಯಲ್ಲಿ ಈ ಕಾರ್ಯಕ್ರಮದ ಬಗ್ಗೆ ಅರಿವು ಮೂಡಿಸಲು ಬಹಿರಂಗ ಟೆಂಡರ್ ಕರೆಯದೇ ಬೆಂಗಳೂರಿನ ಕೈಂಡ್ ಹಾರ್ಟ್ಸ್ ಸಂಸ್ಥೆಗೆ ಗೋಡೆ ಬರಹ ಬರೆಯಲು ಅವಕಾಶ ನೀಡಲಾಗಿತ್ತು. ಪ್ರತಿಯೊಂದು ಗ್ರಾಮ ಪಂಚಾಯ್ತಿಗಳು ತಮಗೆ ಬಂದಿರುವ ಅನುದಾನದಲ್ಲಿ ತಲಾ 36 ಸಾವಿರ ರುಪಾಯಿಯನ್ನು ಸಂಸ್ಥೆಯ ಚಕ್ ಮೂಲಕ ಸಂದಾಯ ಮಾಡಿದವು.
 ಜಿಲ್ಲೆಯಲ್ಲಿರುವ 226 ಗ್ರಾಮ ಪಂಚಾಯ್ತಿಗಳಿಂದ ಒಟ್ಟು 81.36 ಲಕ್ಷ ರುಪಾಯಿ ಕೈಂಡ್ ಹಾರ್ಟ್ಸ್ ಸಂಸ್ಥೆಗೆ ತಲುಪಿತು. ಇದೀಗ ಅದೇ ಸಂಸ್ಥೆ ನಿರ್ಮಲ ಭಾರತ ಅಭಿಯಾನದ ಗೋಡೆ ಬರಹ ಬರೆದು ಒಂದೊಂದು ಗ್ರಾಮ ಪಂಚಾಯ್ತಿಯಿಂದ ತಲಾ 10 ಸಾವಿರ ರುಪಾಯಿಯನ್ನು ವಸೂಲಿ ಮಾಡುತ್ತಿದೆ.
ಆದರೆ, 5 ಸಾವಿರ ರುಪಾಯಿಗಿಂತ ಹೆಚ್ಚಿನ ಹಣ ಸಂದಾಯ  ಮಾಡಬೇಕಾದರೆ ಕೊಟೇಷನ್ ಕರೆಯಬೇಕು. 10 ಸಾವಿರ ರುಪಾಯಿಯ ಗೋಡೆ ಬರಹ ಬರೆಸಿರುವ ಗ್ರಾಮ ಪಂಚಾಯ್ತಿಗಳು ಯಾವುದೇ ಕೋಟೆಷನ್ ಕರೆಯದೆ ಜಿಲ್ಲಾ ಪಂಚಾಯ್ತಿಯ ಮೌಖಿಕ ಆದೇಶದ ಮೇರೆಗೆ ಕೈಂಡ್ ಹಾರ್ಟ್ಸ್ ಸಂಸ್ಥೆಗೆ ಚೆಕ್ ಮೂಲಕ ಹಣ ನೀಡುತ್ತಿವೆ.
ಆಗಿದ್ದೇನು?: ಕೈಂಡ್ ಹಾರ್ಟ್ಸ್ ಸಂಸ್ಥೆಯವರು ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯ್ತಿಯ ಸಮೀಪದಲ್ಲಿ ನಿರ್ಮಲ ಭಾರತ ಅಭಿಯಾನದ ಗೋಡೆ ಬರಹ ಬರೆದಿದೆ.
ಈ ಗೋಡೆ ಬರಹ ಬರೆಯಲು ಈ ಸಂಸ್ಥೆಗೆ ಗ್ರಾಮ ಪಂಚಾಯ್ತಿಗಳು ಲಿಖಿತವಾಗಿ ತಿಳಿಸಿಲ್ಲ. ಆದರೆ, ಜಿಲ್ಲಾ ಪಂಚಾಯ್ತಿಯಿಂದ ಗೋಡೆ ಬರಹ ಬರೆಸಲಾಗಿದೆ. ಇದಕ್ಕೆ ತಗಲುವ ವೆಚ್ಚ 10 ಸಾವಿರ ರುಪಾಯಿ ನೀಡುವಂತೆ ಗ್ರಾಮ ಪಂಚಾಯ್ತಿಗೆ ತಿಳಿಸಿದೆ. ಜಿಲ್ಲಾ ಪಂಚಾಯ್ತಿ ಹೇಳಿದ್ದರಿಂದ ಹಣ ಕೊಡಲೇಬೇಕೆಂದು ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳು ಹಣ ಪಾವತಿ ಮಾಡುತ್ತಿದ್ದಾರೆ.
ಈ ಸಂಸ್ಥೆಯ ಪರವಾಗಿ ತಾಲೂಕು ಪಂಚಾಯ್ತಿಗಳಲ್ಲಿ ಕೆಲವು ಅಧಿಕಾರಿಗಳು ಕೆಲಸ ಮಾಡುತ್ತಿದ್ದಾರೆ. ಅವರ ಮೂಲಕ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳ ಮೇಲೆ ಒತ್ತಡ ಹೇರಿ ಹಣ ವಸೂಲಿ ಮಾಡಲಾಗುತ್ತಿದೆ.
ಗೋಡೆ ಬರಹ ಬರೆಸಲು ನಿರ್ಮಲ ಭಾರತ ಅಭಿಯಾನದಲ್ಲಿ ತಲಾ 10 ಸಾವಿರ ರುಪಾಯಿ ಮೀಸಲಿಡಲಾಗಿದೆ. ಕೈಂಡ್ ಹಾರ್ಟ್ಸ್ ಸಂಸ್ಥೆ ಗೋಡೆ ಬರಹ ಬರೆದು ಮುಗಿಸಿದ ಮೇಲೆ ಜಿಲ್ಲಾ ಪಂಚಾಯ್ತಿ ಅಧಿಕಾರಿಗಳ ಮೇಲೆ ಒತ್ತಡ ಹೇರಿದ್ದರಿಂದ ನಿರ್ಮಲ ಭಾರತ ಅಭಿಯಾನದಡಿ ತಲಾ 10 ಸಾವಿರ ರುಪಾಯಿ ಗ್ರಾಮ ಪಂಚಾಯ್ತಿಗಳಿಗೆ ಬಿಡುಗಡೆ ಮಾಡಲಾಗಿದೆ. ಈ ಹಣ ಬಿಡುಗಡೆಯಾಗುತ್ತಿದ್ದಂತೆ ಸಂಸ್ಥೆಯವರು ಗ್ರಾಮ ಪಂಚಾಯ್ತಿಗಳಿಗೆ ಹೋಗಿ ಹಣ ವಸೂಲಿ ಮಾಡುತ್ತಿದ್ದಾರೆ.
ಅಧಿಕಾರಿಗಳ ಮಧ್ಯಸ್ಥಿಕೆ: ಇನ್ನು ಬಾಕಿ ಇರುವ ಹಣವನ್ನು ತಾಲೂಕು ಪಂಚಾಯ್ತಿಯಲ್ಲಿ ಮಧ್ಯಸ್ಥಿಕೆ ವಹಿಸಿರುವ ತಾಲೂಕು ಪಂಚಾಯ್ತಿ ಅಧಿಕಾರಿಗಳು ಗ್ರಾಮ ಪಂಚಾಯ್ತಿಗಳ ಚೆಕ್ಗಳನ್ನು ಪಡೆದುಕೊಂಡು ಸಂಸ್ಥೆಯವರು ನೀಡುವ ಕೆಲಸವನ್ನು ಅತ್ಯಂತ ನಿಷ್ಟೇಯಿಂದ ಮಾಡುತ್ತಿದ್ದಾರೆ.
 ಈಗಾಗಲೇ ತರೀಕೆರೆ, ಕಡೂರು, ಚಿಕ್ಕಮಗಳೂರು ಹಾಗೂ ಮೂಡಿಗೆರೆ ತಾಲೂಕುಗಳ ಗ್ರಾಮ ಪಂಚಾಯ್ತಿಗಳು 10 ಸಾವಿರ ರುಪಾಯಿಗಳು ಪಾವತಿಸಿವೆ. ಇನ್ನುಳಿದಂತೆ ಮಲೆನಾಡಿನ ಕೊಪ್ಪ,  ಶೃಂಗೇರಿ ಹಾಗೂ ಎನ್.ಆರ್. ಪುರ ತಾಲೂಕುಗಳ ಗ್ರಾಮ ಪಂಚಾಯ್ತಿಗಳು ಚೆಕ್ ಗಳನ್ನು ನೀಡಬೇಕಾಗಿದೆ.
ಗ್ರಾಪಂಗೆ ಒತ್ತಡ: ಕೈಂಡ್ ಹಾರ್ಟ್ಸ್ ಸಂಸ್ಥೆಗೆ ಗೋಡೆ ಬರಹ ಬರೆಯಲು ಜಿಲ್ಲಾ ಪಂಚಾಯ್ತಿಯಿಂದ ಯಾವುದೇ ಲಿಖಿತವಾದ ಆದೇಶ ನೀಡಿಲ್ಲ. ಗೋಡೆ ಬರಹ ಬರೆಯುವ ವಿಷಯಕ್ಕೆ ಸಂಬಂಧಿಸಿದಂತೆ ಆಯಾ ಗ್ರಾಮಂ ಪಂಚಾಯ್ತಿಗಳ ವಿವೇಚನೆಗೆ ಬಿಡಲಾಗಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಇನ್ನೊಂದೆಡೆ ಕೈಂಡ್ ಹಾರ್ಟ್ಸ್ ಸಂಸ್ಥೆಯಿಂದ ಗೋಡೆ ಬರಹ ಬರೆಸಿ ಹಣ ವಸೂಲಿ ಮಾಡಲು ಪರೋಕ್ಷವಾಗಿ ಗ್ರಾಮ ಪಂಚಾಯ್ತಿಗಳ ಒತ್ತಡ ಹಾಕುತ್ತಿದ್ದಾರೆ.
ಹಾಲಿ ಇರುವ ಗೋಡೆಗಳ ಮೇಲೆ ಬೆರೆಯಲು 10 ಸಾವಿರ ಖರ್ಚಾಗುತ್ತದೆಯೇ ಎಂಬುದು ಇಲ್ಲಿರುವ ಪ್ರಶ್ನೆ. ಈ ಕೆಲಸವನ್ನು ಮಾಡಲು ಸ್ಥಳೀಯವಾಗಿ ಯಾರೂ ಇಲ್ಲವೆ. 10 ಸಾವಿರಕ್ಕಿಂತ ಕಡಿಮೆ ಹಣದಲ್ಲಿ ಗೋಡೆ ಬರಹ ಬರೆಯ ಬಲ್ಲವರು ಸ್ಥಳೀಯವಾಗಿ ಇದ್ದರೂ ಕೂಡ ಬೆಂಗಳೂರಿನ ಸಂಸ್ಥೆಗೆ ಈ ಜವಬ್ದಾರಿ ವಹಿಸಿರುವುದು. ಅಕ್ರಮಕ್ಕೆ ದಾರಿ ಮಾಡಿಕೊಟ್ಟಿರುವುದು ಮೇಲ್ನೋಟಕ್ಕೆ ಕಂಡು ಬರುತ್ತದೆ. ಒಟ್ಟಾರೆ ಈ ಪ್ರಕರಣದಲ್ಲಿ ಹಿರಿಯ ಅಧಿಕಾರಿಗಳು ಜಾರಿಕೆಯ ಉತ್ತರ ನೀಡುತ್ತಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.