ಚಿಕ್ಕಮಗಳೂರು

ದರ್ಗಾ ಅಪವಿತ್ರ: 2 ಬಂಧನ

Published On :

ಚಿಕ್ಕಮಗಳೂರು: ದರ್ಗಾ ಅಪವಿತ್ರಗೊಳಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇಬ್ಬರನ್ನು ಗುರುವಾರ ಬಂಧಿಸಿದ್ದಾರೆ.
ಇಲ್ಲಿನ ಅರವಿಂದ ನಗರದ ನಿವಾಸಿ ಪುಟ್ಟರಾಜ ಹಾಗೂ ನರಿಗುಡ್ಡನಹಳ್ಳಿ ಗ್ರಾಮದ ಸಿದ್ದರಾಜ ಬಂಧಿತ ಆರೋಪಿಗಳು.
ಡಿಸೆಂಬರ್ 28ರ ಬೆಳಗಿನ ಜಾವ ನಗರದ ಎಂ.ಜಿ. ರಸ್ತೆಯಲ್ಲಿರುವ ದರ್ಗಾವನ್ನು ಅಪವಿತ್ರಗೊಳಿಸಿದ್ದ ಸಂಬಂಧ ಪ್ರಕರಣ ದಾಖಲಾಗಿತ್ತು. ಈ ಸಂಬಂಧ ನಗರದಲ್ಲಿ ಅಶಾಂತಿ ನಿರ್ಮಾಣಗೊಂಡಿತ್ತು ಎಂದು ಜಿಲ್ಲಾ ರಕ್ಷಣಾಧಿಕಾರಿ ಆರ್. ಚೇತನ್ ಅವರು ಸುದ್ದಿಗೋಷ್ಠಿಯಲ್ಲಿ ಗುರುವಾರ ತಿಳಿಸಿದರು.
ಈ ಕೃತ್ಯ ಎಸಗಿರುವ ಆರೋಪಿಗಳ ಪತ್ತೆಗಾಗಿ ಚಿಕ್ಕಮಗಳೂರು ಉಪ ವಿಭಾಗದ ಡಿವೈಎಸ್ಪಿ ರಮೇಶ್ ಕುಮಾರ್ ಅವರ ನೇತೃತ್ವದಲ್ಲಿ ಕಡೂರು ವೃತ್ತ ನಿರೀಕ್ಷಕ ಮಧುಸೂದನ್ ಮತ್ತು ಡಿಸಿಆರ್‌ಬಿ ಸಿಪಿಐ ಯಶವಂತ್ ಮಲ್ಯ, ಸಬ್‌ಇನ್ಸ್‌ಸ್ಪೆಕ್ಟರ್ ರಾಕೇಶ್, ಸಂತೋಷ್ ಶೆಟ್ಟಿ, ಗಿರೀಶ್ ಅವರುಗಳು ಒಳಗೊಂಡ ವಿಶೇಷ ತನಿಖಾ ತಂಡ ರಚನೆ ಮಾಡಲಾಗಿತ್ತು ಎಂದು ಹೇಳಿದರು.
ವಿಚಾರಣೆ: ಈ ತನಿಖಾ ತಂಡಕ್ಕೆ ಸಿಕ್ಕ ಪೂರಕ ಮಾಹಿತಿಯ ಮೇರೆಗೆ ಗುರುವಾರ ಬೆಳಿಗ್ಗೆ ಇಲ್ಲಿನ ಬಸವನಹಳ್ಳಿ ಕೆರೆ ಏರಿ ಬಳಿ ಮೋಟಾರ್ ಬೈಕನ್ನು ನಿಲ್ಲಿಸಿಕೊಂಡು ಯಾರನ್ನೋ ಕಾಯುತ್ತಿದ್ದ ಅರವಿಂದನಗರದ ನಿವಾಸಿ ಪುಟ್ಟರಾಜ ಹಾಗೂ ನರಿಗುಡ್ಡನಹಳ್ಳಿಯ ಸಿದ್ದರಾಜ ಅವರನ್ನು ವಿಚಾರಣೆಗೆ ಒಳಪಡಿಸಿದ್ದ ಸಂದರ್ಭದಲ್ಲಿ ದರ್ಗಾ ಅಪವಿತ್ರಗೊಳಿಸಿರುವ ಕೃತ್ಯವನ್ನು ತಾವೇ ನಡೆಸಿದ್ದಾಗಿ ಒಪ್ಪಿಕೊಂಡ ಮೇರೆಗೆ ಅವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ತಿಳಿಸಿದರು.
ಬಂಧಿತ ಆರೋಪಿಗಳ ಪೈಕಿ ಓರ್ವರಾದ ಸಿದ್ದರಾಜು 2009ರಲ್ಲಿ ಇದೇ ರೀತಿಯ ಕೃತ್ಯವನ್ನು ನಡೆಸಿದ್ದರು ಎಂಬುದು ತನಿಖೆಯ ವೇಳೆಯಲ್ಲಿ ತಿಳಿದು ಬಂದಿದೆ. ಈ ಇಬ್ಬರು ಆರೋಪಿಗಳು ಹಂದಿ ಸಾಕಾಣಿಕೆ ಹಾಗೂ ಹಂದಿ ಮಾಂಸ ಮಾರಾಟ ಕೆಲಸ ಮಾಡುತ್ತಿದ್ದರು ಎಂದು ಹೇಳಿದರು.
ಈ ಕೃತ್ಯವನ್ನು ಎಸಗಲು ಕಾರಣ ಏನೆಂಬುದು ಈವರೆಗೆ ತಿಳಿದು ಬಂದಿಲ್ಲ, ತನಿಖೆ ಮುಂದುವರೆದಿದೆ. ಈ ಪ್ರಕರಣದ ಹಿಂದೆ ಕೆಲವರ ಕೈವಾಡ ಇರುವ ಶಂಕೆಯೂ ಇದ್ದು, ಅವಶ್ಯಕತೆ ಬಿದ್ದರೆ ನ್ಯಾಯಾಂಗ ಬಂಧನದಲ್ಲಿರುವ ಆರೋಪಿಗಳನ್ನು ವಶಕ್ಕೆ ತೆಗೆದುಕೊಳ್ಳಲಾಗುವುದು. ಈ ಕೃತ್ಯದ ಹಿಂದೆ ಯಾರೇ ಇರಲಿ ಅವರನ್ನು ಬಂಧಿಸುವ ಕೆಲಸ ಪೊಲೀಸ್ ಇಲಾಖೆ ಮಾಡಲಿದೆ ಎಂದರು.
ಈ ಪ್ರಕರಣ ಭೇದಿಸುವಲ್ಲಿ ಯಶಸ್ವಿಯಾದ ಪೊಲೀಸ್ ಸಿಬ್ಬಂದಿಗಳಿಗೆ ಜಿಲ್ಲಾ ರಕ್ಷಣಾಧಿಕಾರಿ ಚೇತನ್ ಅವರು ಪ್ರಶಂಸೆ ವ್ಯಕ್ತಪಡಿಸಿದರು.
ತಿರುವು ಸಾಧ್ಯತೆ: ದರ್ಗಾ ಅಪವಿತ್ರಗೊಳಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಬಂಧಿಸಿರುವ ವಿಶೇಷ ತನಿಖಾ ತಂಡ ಕೆಲವು ರಾಜಕೀಯ ಪಕ್ಷಗಳ ಮುಖಂಡರುಗಳ ಮನೆಗಳಿಗೆ ಭೇಟಿ ನೀಡಿತ್ತು.
ಇದರಿಂದಾಗಿ ಈ ಪ್ರಕರಣದ ಹಿಂದೆ ರಾಜಕೀಯ ಮುಖಂಡರ ಕೈವಾಡ ಇರುವ ಬಗ್ಗೆ ಸಂಶಯದ ಗಾಳಿ ನಗರದಲ್ಲೆಡೆ ದಟ್ಟವಾಗಿ ಹರಡಿಕೊಂಡಿತ್ತು.
ಮುಂದಿನ ದಿನಗಳಲ್ಲಿ ಈ ಪ್ರಕರಣ ರಾಜಕೀಯ ತಿರುವು ಪಡೆದುಕೊಳ್ಳುವ ಸಾಧ್ಯತೆಯನ್ನು ತಳ್ಳಿ ಹಾಕುವಂತ್ತಿಲ್ಲ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.