ಚಿಕ್ಕಮಗಳೂರು

ಜನರ ಜೀವನದ ಜತೆ 'ಕೈ' ಚೆಲ್ಲಾಟ

Published On :

ಕ.ಪ್ರ.ವಾರ್ತೆ, ಕಡೂರು, ಜ. 9
ಕಾಂಗ್ರೆಸ್ ನೇತೃತ್ವದ ಕೇಂದ್ರ ಸರ್ಕಾರ ಜನರ ಜೀವನದ ಜತೆ ಚೆಲ್ಲಾಟವಾಡುವ ಮೂಲಕ ಕಳೆದ 9 ವರ್ಷದಲ್ಲಿ 24 ಬಾರಿ ಅನಿಲ ಬೆಲೆ ಏರಿಕೆ ಮಾಡಿದೆ ಎಂದು ಮಾಜಿ ಶಾಸಕ ಡಾ. ವೈ.ಸಿ. ವಿಶ್ವನಾಥ್ ಟೀಕಿಸಿದರು.
ಪಟ್ಟಣದಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನೆಯಲ್ಲಿ ಮಾತನಾಡಿದರು. ಕೇಂದ್ರ ಸರ್ಕಾರವು ಭ್ರಷ್ಟಾಚಾರದಲ್ಲಿ ಮುಳುಗೆದ್ದಿದೆ. ಬೆಲೆ ಏರಿಕೆಯಿಂದ ಜನಸಾಮಾನ್ಯರು ತತ್ತರಿಸಿದ್ದಾರೆ. ಇನ್ನು ಕೆಲವೇ ತಿಂಗಳಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆ. ಕಾಂಗ್ರೆಸ್ ಸರ್ಕಾರವನ್ನು ಕಿತ್ತೊಗೆದು ನರೇಂದ್ರ ಮೋದಿ ಅವರು ಪ್ರಧಾನಿಯಾಗುವ ಮೂಲಕ ಎಲ್ಲ ವರ್ಗದ ಜನರಿಗೆ ಹೊರೆಯಾಗದಂತೆ ಉತ್ತಮ ಆಡಳಿತ ನೀಡಲಿದ್ದಾರೆ ಎಂದರು.
ಕೈಗೊಂಬೆ: ರಾಜ್ಯದಲ್ಲೂ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆರಂಭದಲ್ಲಿ ಒಳ್ಳೆಯ ಯೋಜನೆ ಹಾಕಿಕೊಂಡರು. ಆದರೆ, ತರಾತುರಿಯಲ್ಲಿ ಕಳಂಕಿತರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವುದಿಲ್ಲ ಎಂದು ಹೇಳಿದ್ದ ಅವರು ಇದೀಗ ಅಂಥವರನ್ನೆ ಸೇರಿಸಿಕೊಂಡಿದ್ದಾರೆ. ಕಾರಣ ಸಿದ್ದರಾಮಯ್ಯ ಅವರು ಕೂಡ ಕಾಂಗ್ರೆಸ್ ಹೈಕಮಾಂಡಿನ ಕೈಗೊಂಬೆ ಎಂದು ವ್ಯಂಗ್ಯವಾಡಿದರು.
ತಾಲೂಕು ಬಿಜೆಪಿ ಅಧ್ಯಕ್ಷ ಕೆ.ಎಚ್. ಶಂಕರ್ ಮಾತನಾಡಿ, ಬಿಜೆಪಿ ಸರ್ಕಾರದ ಅವಧಿಯಲ್ಲಿ ಭ್ರಷ್ಟರನ್ನು ಸಂಪುಟದಿಂದ ಕೈಬಿಡಬೇಕೆಂದು ಪಾದಯಾತ್ರೆ ಮಾಡಿದ್ದ ಸಿದ್ದರಾಮಯ್ಯ ಅವರು ಇದೀಗ ಅಂತಹ ಭ್ರಷ್ಟರನ್ನೇ ಸಂಪುಟಕ್ಕೆ ಸೇರಿಸಿಕೊಂಡಿದ್ದಾರೆ ಎಂದರು.
ತಪ್ಪು ಮಾಹಿತಿ: ಡಾ. ವೈ.ಸಿ. ವಿಶ್ವನಾಥ್ ಶಾಸಕರಾಗಿದ್ದಾಗ 280 ಕೋಟಿ ಕಾಮಗಾರಿ ನಡೆದಿದೆ. ಆದರೆ, ಶಾಸಕ ವೈಎಸ್‌ವಿ ದತ್ತ ಅವರು ಕ್ಷೇತ್ರದ ಜನತೆಗೆ ತಪ್ಪು ಮಾಹಿತಿ ನೀಡಿದ್ದಾರೆ.
ಅವರು ಮಾಡಿರುವ ಕೆಲಸಗಳ ಬಗ್ಗೆ  ಶ್ವೇತಪತ್ರ ಹೊರಡಿಸಲಿ. ಕಳೆದ ವಾರ ಬಿಜೆಪಿ ಬಂದ್‌ಗೆ ಕರೆಕೊಟ್ಟ ಸಂದರ್ಭದಲ್ಲಿ ಕಡೂರು ಬಂದ್ ಮಾಡುವುದರಿಂದ ನೀರು ಬರುತ್ತದೆಯೇ ಎಂದು ಪ್ರಶ್ನಿಸಿದ್ದಾರೆ. ಹಾಗಾದರೆ ಎಚ್.ಡಿ. ದೇವೇಗೌಡರು ಎಮ್ಮೇದೊಡ್ಡಿಯಲ್ಲಿ ಅಮಾಯಕರ ಮೇಲೆ ಅರಣ್ಯಾಧಿಕಾರಿಗಳು ಕೇಸು ಹಾಕಿದಾಗ ಧರಣಿ ಕುಳಿತು ಪ್ರತಿಭಟಿಸಿದ್ದರಿಂದ ಅಮಾಯಕರಿಗೆ ನ್ಯಾಯ ಕೊಡಿಸಿದರೆ ಎಂದು ಪ್ರಶ್ನಿಸಿದರು.
ಉಪ ತಹಸೀಲ್ದಾರ್ ತಿಪ್ಪೇಸ್ವಾಮಿ ಅವರ ಮೂಲಕ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಮನವಿ ಅರ್ಪಿಸಲಾಯಿತು. ಪ್ರತಿಭಟನೆಯಲ್ಲಿ ಬಿಜೆಪಿ ಮುಖಂಡ ಅರೇಕಲ್ ಪ್ರಕಾಶ್, ತಾಪಂ ಸದಸ್ಯ ಆರ್. ಶಿವಕುಮಾರ್, ಬಿಜೆಪಿ ನಗರ ಘಟದದ ಅಧ್ಯಕ್ಷ ಎ.ಮಣಿ, ಪುರಸಭಾ ಸದಸ್ಯ ರಾಜೇಶ್, ಕುರುಬಗೆರೆ ಮಹೇಶ್, ಶಿವಶಂಕರ್, ಬಂಕ್ ಮಂಜುನಾಥ್, ಗಂಗಾಧರ್, ಕೇಬಲ್ ಜಗದೀಶ್, ಗೋಪಿಕುಮಾರ್ ಸೇರಿದಂತೆ ಮತ್ತಿತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.