ಚಿಕ್ಕಮಗಳೂರು

ಬಿಎಸ್ವೈ ಆಗಮನದಿಂದ ಭೀಮಬಲ

Published On :

ಕ.ಪ್ರ.ವಾರ್ತೆ, ಕಡೂರು, ಜ.11
ಬಿ.ಎಸ್. ಯಡಿಯೂರಪ್ಪ ಅವರ ಸೇರ್ಪಡೆಯಿಂದ ರಾಜ್ಯದಲ್ಲಿ ಬಿಜೆಪಿ ಮತ್ತಷ್ಟು ಬಲಗೊಳ್ಳುವ ಮೂಲಕ ಅಧಿಕಾರಕ್ಕೆ ಬರಲಿದೆ. ಬಿಎಸ್ವೈ ಆಗಮನದಿಂದ ರಾಜ್ಯದ ಲಕ್ಷಾಂತರ ಕಾರ್ಯಕರ್ತರಲ್ಲಿ ಹರ್ಷ ಮೂಡಿದೆ. ತಾಲೂಕು ಮಟ್ಟದಲ್ಲೂ ವಿಲೀನ ಪ್ರಕ್ರಿಯೆ ನಡೆದಿದೆ ಎಂದು ತಾಲೂಕು ಬಿಜೆಪಿ ಅಧ್ಯಕ್ಷ ಕೆ.ಎಚ್. ಶಂಕರ್ ಹೇಳಿದರು.
ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಕೆಜೆಪಿ ಮುಖಂಡ ಹಾಗೂ ಮಾಜಿ ಜಿ.ಪಂ. ಅಧ್ಯಕ್ಷ ಬೆಳ್ಳಿ ಪ್ರಕಾಶ್, ಕೆಜೆಪಿ ಮುಖಂಡ ಎಸ್.ವಿ. ಉಮಾಪತಿ ಅವರನ್ನು ಬಿಜೆಪಿಗೆ ಬರಮಾಡಿಕೊಂಡು ಅವರು ಮಾತನಾಡಿದರು.
ಬಿಜೆಪಿ ಅಧಿಕಾರಕ್ಕೆ ನಿಶ್ಚಿತ:  23 ವರ್ಷ ಕಾಲ ನಾನೂ ಕೂಡ ಬಿಜೆಪಿ ಪಕ್ಷದಲ್ಲಿ ದುಡಿದಿದ್ದು, ರಾಜ್ಯದಲ್ಲಿ ಉಂಟಾದ ರಾಜಕೀಯ ಬದಲಾವಣೆಗಳಿಂದ ನಾವು ಅನಿವಾರ್ಯವಾಗಿ ಬೇರೆ ಬೇರೆ ಕಡೆ ಗುರ್ತಿಸಿಕೊಳ್ಳುವಂತಾಯಿತು. ಇದೀಗ ಪರ್ವಕಾಲ ಆರಂಭವಾಗಿ ರಾಜಕೀಯ ಧ್ರುವೀಕರಣ ನಡೆಯುತ್ತಿರುವ ಬೆನ್ನಲ್ಲೇ ಕೆಜೆಪಿ ಪಕ್ಷದ ನಾಯಕರು ಹಾಗೂ  ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಬಿಜೆಪಿಗೆ ಮರಳಿ ಬಂದಿದ್ದಾರೆ. ಇದರಿಂದ ರಾಜ್ಯದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದರು.
ಕಡೂರು ಕ್ಷೇತ್ರದಲ್ಲಿ ಬಿಜೆಪಿಯಲ್ಲಿಯೇ ಇದ್ದ ಮಿತ್ರರಾದ ಬೆಳ್ಳಿ ಪ್ರಕಾಶ್ ಮತ್ತು ಎಸ್.ವಿ. ಉಮಾಪತಿ ಅವರು ಯಡಿಯೂರಪ್ಪ ಅವರನ್ನು ಬೆಂಬಲಿಸಿದ್ದರಿಂದ ಕೆಜೆಪಿಯಲ್ಲಿ ಗುರ್ತಿಸಿಕೊಳ್ಳುವಂತಾಯಿತು. ಈರ್ವರು ಇದೀಗ ಮರಳಿ ಬಿಜೆಪಿಗೆ ಸೇರ್ಪಡೆಗೊಳ್ಳುತ್ತಿರುವುದರಿಂದ ಪಕ್ಷಕ್ಕೆ ಆನೆ ಬಲ ಬಂದಿದೆ ಎಂದರು.
ಕಂಕಣಬದ್ಧರಾಗಬೇಕು:  ಬೆಳ್ಳಿ ಪ್ರಕಾಶ್ ಮಾತನಾಡಿ, ಈಗ ನನ್ನ ಹಿಂದಿನ ರಾಜಕೀಯ ಮಿತ್ರರ ಜೊತೆ ಕೆಲಸ ಮಾಡುವ ಅವಕಾಶ ಸಿಕ್ಕಿದೆ. ಹಿಂದಿನ ಯಾವ ಘಟನೆಗಳ ವಿಶ್ಲೇಷಣೆ ಬೇಡ ರಾಜಕೀಯ ಹೊಟ್ಟೆಪಾಡಿಗಲ್ಲ. ಪ್ರವೃತ್ತಿ ಪಕ್ಷದ ತತ್ವ, ಸಿದ್ಧಾಂತಕ್ಕೆ ಬದ್ಧರಾಗಿ ರಾಜಕೀಯ ಮಾಡಿದ್ದೇವೆ ಎಂದ ಅವರು, ಬರಲಿರುವ ಚುನಾವಣೆಯನ್ನು ಸಮರ್ಥವಾಗಿ ಎದುರಿಸುವ ಮೂಲಕ ನರೇಂದ್ರ ಮೋದಿ ಅವರನ್ನು ಪ್ರಧಾನಿ ಮಾಡಲು ಕಂಕಣಬದ್ಧರಾಗಬೇಕಿದೆ ಎಂದರು.
ಎಸ್.ವಿ. ಉಮಾಪತಿ ಮಾತನಾಡಿದರು. ಬಿಜೆಪಿ ನಗರ ಘಟಕದ ಅಧ್ಯಕ್ಷ ಎ.ಮಣಿ, ಬಿಜೆಪಿ ಮುಖಂಡರಾದ ಕೆ.ಎನ್. ಗೋಪಿಕುಮಾರ್, ರಾಜೇಶ್, ಬಂಕ್ ಮಂಜು, ಪ್ರಕಾಶ್, ಮಂಜುನಾಥ್, ವಿಠ್ಠಲ ರಾವ್, ಶಿವಶಂಕರ್, ಶ್ರೀನಿವಾಸ್, ಕುರುಬಗೆರೆ ಮಹೇಶ್, ಮೌನೇಶ್, ಕೇಬಲ್ ಜಗದೀಶ್ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.