ಮಕ್ಕಳ ಸಂತೆಗೆ ಜನಜಂಗುಳಿ
ಚಿಕ್ಕಮಗಳೂರು: ಇಲ್ಲಿನ ನಲ್ಲೂರು ರಸ್ತೆ ತಿರುವಿನ ಶ್ರೀ ಶಂಕರ ವಿದ್ಯಾ ಮಂದಿರ ಆವರಣದಲ್ಲಿ ಜನಜಂಗುಳಿ. ಸೊಪ್ಪು, ಈರುಳ್ಳಿ, ಮೆಣಸಿನಕಾಯಿ, ಟೊಮೆಟೋ, ಹೂಕೋಸು ಸೇರಿದಂತೆ ಹಸಿರು ತರಕಾರಿ, ತಾಜಾ ಹಣ್ಣುಗಳ ರಾಶಿ, ತಂಪು ಪಾನೀಯಗಳು, ಕರುಕಲು ತಿಂಡಿ ಮಾರುತ್ತಿದ್ದ ಪುಟಾಣಿ ಮಕ್ಕಳು. ಅಭಿಮಾನದಿಂದ ಖರೀದಿಸುತ್ತಿದ್ದ ನಾಗರಿಕರು. ಬುಧವಾರದ ಸಂತೆ ನೆನಪಿಸುವಂತಿತ್ತು.
ಹೊತ್ತೇರಿದಂತೆಲ್ಲಾ ಜನಜಂಗುಳಿಯೂ ಹೆಚ್ಚುತ್ತಿತ್ತು. ಇದನ್ನು ಗಮನಿಸಿದವರು ಕೈಚೀಲ ಹಿಡಿದು ಗುಂಪು-ಗುಂಪಾಗಿ ಧಾವಿಸುತ್ತಿದ್ದರು. ಸಂಜೆಯ ವೇಳೆಗೆ ಜನಜಂಗುಳಿ ನಿಧಾನವಾಗಿ ಕರಗಿತು. ಶಂಕರ ವಿದ್ಯಾಮಂದಿರ ಶಾಲೆ ವತಿಯಿಂದ ಶನಿವಾರ ಆಯೋಜಿಸಿದ್ದ ಮಕ್ಕಳ ಸಂತೆ ಚಿತ್ರಣವಿದು.
ತಾಜಾ ಫಸಲು: ವ್ಯಾಪಾರ, ವಹಿವಾಟಿನ ಬಗ್ಗೆ ಜೊತೆಗೆ ಸಂವಹನ ಕೌಶಲ್ಯವನ್ನು ಅರ್ಥ ಮಾಡಿಸುವ ಹಿನ್ನೆಲೆಯಲ್ಲಿ ಮಕ್ಕಳ ಸಂತೆ ಯೋಜಿಸಲಾಗಿತ್ತು. ಗ್ರಾಮೀಣ ಪರಿಸರದ ಮಕ್ಕಳು ಗಣನೀಯ ಸಂಖ್ಯೆಯಲ್ಲಿ ಈ ಶಾಲೆಯಲ್ಲಿ ಕಲಿಯುತ್ತಿದ್ದು, ಅವರು ತಮ್ಮ ಹೊಲಗದ್ದೆಗಳಲ್ಲಿ ಬೆಳೆದ ತಾಜಾ ಫಸಲನ್ನು ವ್ಯಾಪಾರಕ್ಕೆ ತಂದಿದ್ದರು.
ಮನೆಯಲ್ಲಿ ಚಕ್ಕುಲಿ, ಕೋಡುಬಳೆ, ಚುರುಮುರಿ, ಮಿಠಾಯಿ, ಸಿಹಿ ತಿನಿಸುಗಳನ್ನು ಮಾಡಿಸಿಕೊಂಡು ಬಂದಿದ್ದ ಕೆಲವು ಮಕ್ಕಳು ಅಂದವಾಗಿ ಪ್ಯಾಕ್ ಮಾಡಿ ಮಾರುತ್ತಿದ್ದರೆ, ಕೆಲವರು ಚುರುಮುರಿ, ಮಂಡಕ್ಕಿ ಅಲ್ಲೆ ತಯಾರಿಸಿ ಕೊಡುತ್ತಿದ್ದರು. ಬಾಯಲ್ಲಿ ನೀರೂರಿಸುವ ಕಲ್ಲಂಗಡಿ ಕತ್ತರಿಸಿ ಕೊಡುತ್ತಿದ್ದರೆ, ಇನ್ನೊಂದೆಡೆ ಬಣ್ಣ, ಬಣ್ಣದ ಶರಬತ್ತು, ತಂಪು ಪಾನೀಯಗಳನ್ನು ಕೂಗಿ ಕರೆದು ಮಾರಾಟ ಮಾಡುತ್ತಿದ್ದರು.
ಇನ್ನು ಹಲವರು ಬೆಳ್ಳಂಬೆಳಗ್ಗೆಯೇ ಎಪಿಎಂಸಿ ಯಾರ್ಡ್‌ಗೆ ತೆರಳಿ ಹಣ್ಣು ಹಂಪಲು, ಕಾಯಿಪಲ್ಲೆ, ಸಗಟು ಬೆಲೆಯಲ್ಲಿ ಖರೀದಿಸಿ ತಂದಿದ್ದರು.
ಚಿನ್ನರ ಮಾತು ಮುದ್ದು: ಪರಿಚಯಸ್ಥರಿಂದ ತಕ್ಕಡಿ- ಬಟ್ಟುಗಳು, ಸೇರು- ಪಾವು, ತಡ್ಪಲ್- ಚೀಲ ಎರವಲು ತಂದು ಹರವಿಕೊಂಡಿದ್ದರು. ವಿತರಿಕರಿಂದಲೇ ತಂಪು ಪಾನೀಯ, ಸೋಪು- ಬ್ರಶ್‌ಗಳು, ಸೌಂದರ್ಯ ವರ್ಧಕಗಳನ್ನು ತಂದು ಗುಡ್ಡೇ ಹಾಕಿಕೊಂಡಿದ್ದ ವಿದ್ಯಾರ್ಥಿಗಳು ಮೈದಾನಕ್ಕೆ ಬಂದವರಲ್ಲಿ ಆಂಟಿ- ಅಂಕಲ್ ಕಡಿಮೆ ಬೆಲೆ ಚೆನ್ನಾಗಿದೆ, ತಗೊಳ್ಳಿ ಎನ್ನುತ್ತಾ ಅದರ ವಿಶೇಷಗಳನ್ನು ವಿವರಿಸುತ್ತಾ ದುಂಬಾಲು ಬೀಳುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಮುದ್ದು ಮಕ್ಕಳ ತೊದಲು ನುಡಿಗೆ ಮನಸೋತು ಹಲವರು ಖರೀದಿಸುತ್ತಿದ್ದರಿಂದ ಸಂಜೆಗೆ ಮುನ್ನವೇ ಸಂತೆಬರ್ಕಾಸ್ತಾಯಿತು.
ಶಾಲಾ ಮುಖ್ಯಸ್ಥರಾದ ಶಂಕರದೇವರ ಮಠದ ಶ್ರೀ ಚಂದ್ರಶೇಖರ ಸ್ವಾಮೀಜಿ ಹಣ್ಣುಗಳನ್ನು ಖರೀದಿಸುವ ಮೂಲಕ ಬೆಳಗ್ಗೆ ಮಕ್ಕಳ ಸಂತೆಯನ್ನು ಉದ್ಘಾಟಿಸಿದರು. ಶಾಲಾ ಆಡಳಿತಾಧಿಕಾರಿ ಗುರುಪ್ರಸಾದ್, ಸಿಇಒ ರುದ್ರಮುನಿಸ್ವಾಮಿ ಚರಂತಿಮಠ, ಮುಖ್ಯ ಶಿಕ್ಷಕಿ ಭವಾನಿ ಮಾರ್ಗದರ್ಶನದಲ್ಲಿ ಶಾಮಿಯಾನ, ಮಾರಾಟ ಮಳಿಗೆ, ಕುಡಿಯುವ ನೀರು, ಪಾನೀಯದ ವ್ಯವಸ್ಥೆ ಮಾಡಲಾಗಿತ್ತು.
ಶಾಲಾ ಕೊಠಡಿಯಲ್ಲಿ ರಂಗೋಲಿ ಸ್ಪರ್ಧೆ ನಡೆದಿತ್ತು. ಮಕ್ಕಳೇ ಸಂಗ್ರಹಿಸಿದ ಪುರಾತನ ನಾಣ್ಯಗಳ ಪ್ರದರ್ಶನ, ಕರಕುಶಲ ವಸ್ತುಗಳ ಪ್ರದರ್ಶನ ಗಮನ ಸೆಳೆಯಿತು. ಪೋಷಕರಿಗೆ ವಿವಿಧ ಆಟೋಟ ಸ್ಪರ್ಧೆಗಳೂ ನಡೆದವು. ಸಂತೆಯ ಸಂಭ್ರಮ ಮಕ್ಕಳಲ್ಲಿ ಸಂತಸ ಹೊಸ ಅನುಭವ ಕಟ್ಟಿಕೊಟ್ಟಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

