ಚಿಕ್ಕಮಗಳೂರು

ಕರಗಡ ಪ್ರತಿಭಟನೆ ನಿಲ್ಲಲ್ಲ...

Published On :

ಚಿಕ್ಕಮಗಳೂರು: ಕರಗಡ ಕುಡಿಯುವ ನೀರಿನ ಯೋಜನೆ ಕಾಮಗಾರಿ ಒಂದಲ್ಲಾ ಒಂದು ಕಾರಣದಿಂದಾಗಿ ಹಲವು ಅಡೆ ತಡೆಗಳನ್ನು ಎದುರಿಸುತ್ತಿದೆ. ಇದು, ಬೆಳವಾಡಿ, ಕಳಸಾಪುರ, ದೇವನೂರು ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ಜನರ ಆಕ್ರೋಶಕ್ಕೆ ಕಾರಣವಾಗಿದೆ.
ಕರಗಡ ಕುಡಿಯುವ ನೀರಿನ ಯೋಜನೆಯಡಿ ತಮ್ಮ ಗ್ರಾಮಗಳಿಗೆ ನೀರು ಬಂದೇ ಬರುತ್ತದೆ ಎಂದು ತುಂಬಾ ಕಾತುರದಿಂದ ಹಲವು ವರ್ಷಗಳಿಂದ ಕಾಯುತ್ತಿದ್ದಾರೆ. ಆದರೆ, ಈವರೆಗೆ ನೀರು ತರುವ ಕೆಲಸ ಆಗಿಲ್ಲ. ಇದರಿಂದಾಗಿ ರೈತರು ಮತ್ತೊಂದು ಹಂತದಲ್ಲಿ ಹೋರಾಟ ಹಮ್ಮಿಕೊಂಡಿದ್ದಾರೆ.
ಜು. 7 ರಿಂದ ಕರಗಡ ಕುಡಿಯುವ ನೀರಿನ ಯೋಜನೆ ಹೋರಾಟ ಸಮಿತಿ ನೇತೃತ್ವದಲ್ಲಿ ಕಳಸಾಪುರ, ಬೆಳವಾಡಿ, ದೇವನೂರು ಸುತ್ತಮುತ್ತಲ ಗ್ರಾಮಸ್ಥರು ಸರಣಿ ಧರಣಿಯನ್ನು ಹಮ್ಮಿಕೊಂಡಿದ್ದಾರೆ.
ಈ ಸಂಬಂಧ ಜಿಲ್ಲಾಧಿಕಾರಿ ಬಿ.ಎಸ್. ಶೇಖರಪ್ಪ ಶನಿವಾರ ಹೋರಾಟ ಸಮಿತಿ ಮುಖಂಡರ ಹಾಗೂ ಆ ಭಾಗದ ರೈತರ ಸಭೆಯನ್ನು ಕರೆದಿದ್ದರು. ಕರಗಡ ಯೋಜನೆಯ ಕುರಿತು ಗ್ರಾಮಸ್ಥರಲ್ಲಿ ಉಂಟಾಗಿರುವ ಗೊಂದಲ ನಿವಾರಣೆ ಮಾಡಲು ಈ ಸಭೆಯನ್ನು ಕರೆಯಲಾಗಿದೆ. ಸೋಮವಾರದಿಂದ ನಡೆಸಲು ಉದ್ದೇಶಿಸಿರುವ ಪ್ರತಿಭಟನೆಯನ್ನು ಕೈಬಿಡುವಂತೆ ಜಿಲ್ಲಾಧಿಕಾರಿಗಳು ಕೋರಿದರು.
ಸಭೆಯಲ್ಲಿ ಹಾಜರಿದ್ದ ಸಣ್ಣ ನೀರಾವರಿ ಇಲಾಖೆ ಸಹಾಯಕ ನಿರ್ದೇಶಕ ಕೃಷ್ಣಮೂರ್ತಿ ಯೋಜನೆಯ ಬಗ್ಗೆ ಮಾಹಿತಿ ನೀಡಿ, ಈ ಕಾಮಗಾರಿ ಮುಂದುವರೆದಿದೆ ಎಂದು ಹೇಳಿದರು.
ಅವಕಾಶ ನೀಡುತ್ತಿಲ್ಲ:  ಮಾಳೇನಹಳ್ಳಿಯಿಂದ ಹನಿಕೆವರೆಗೆ ನಿರ್ಮಾಣಗೊಳ್ಳಬೇಕಾಗಿರುವ ಕಾಲುವೆಯ ಮಾರ್ಗದಲ್ಲಿ ಸುಮಾರು 950 ಮೀಟರ್ ದೂರದವರೆಗೆ ಕಲ್ಲು ಬಂಡೆ ಇದ್ದು, ಇದನ್ನು ಸಿಡಿಸಿದರೆ ಕಾಮಗಾರಿ ಶೀಘ್ರದಲ್ಲೇ ಮುಕ್ತಾಯಗೊಳ್ಳಲಿದೆ. ಆದರೆ, ಅಲ್ಲಿನ ಜನರು ಬಂಡೆ ಸಿಡಿಸಲು ಅವಕಾಶ ನೀಡುತ್ತಿಲ್ಲ ಎಂದು ನುಡಿದರು.
ಸಣ್ಣ ನೀರಾವರಿ ಇಲಾಖೆಯ ಸಹಾಯಕ ಕಾರ್ಯಪಾಲಕರಿಂದ ಮಾಹಿತಿ ಪಡೆದ ನಂತರ ಮಾತನಾಡಿದ ಜಿಲ್ಲಾಧಿಕಾರಿಯವರು, ಜಿಲ್ಲಾ ಉಸ್ತುವಾರಿ ಸಚಿವರು, ಸಣ್ಣ ನೀರಾವರಿ ಇಲಾಖೆ ಸಚಿವರು ಹಾಗೂ ಈ ಭಾಗದ ಶಾಸಕರು ಮತ್ತು ವಿಧಾನ ಪರಿಷತ್ ಸದಸ್ಯರೊಂದಿಗೆ ಬೆಂಗಳೂರಿನಲ್ಲಿ ಶೀಘ್ರದಲ್ಲೇ ಸಭೆ ಕರೆಯಲು ಉದ್ದೇಶಿಸಲಾಗಿದೆ. ಈ ಸಭೆಯಲ್ಲಿ ಹಾಸನ ಹಾಗೂ ಚಿಕ್ಕಮಗಳೂರು ಜಿಲ್ಲಾಧಿಕಾರಿಗಳು ಸಹ ಭಾಗವಹಿಸಲಿದ್ದಾರೆ. ಕಲ್ಲು ಬಂಡೆ ತೆಗೆಸಿ ಕಾಲುವೆ ನಿರ್ಮಾಣಕ್ಕೆ ಸೂಕ್ತ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.
ಹೋರಾಟ ಸಮಿತಿ ಸ್ಪ್ಟಷ್ಟನೆ:  ಸದ್ಯದ ಪರಿಸ್ಥಿತಿ ನೋಡಿದರೆ ಕಲ್ಲು ಬಂಡೆ ಸಿಡಿಸಿ ಕಾಲುವೆ ನಿರ್ಮಾಣ ಮಾಡುವಂತೆ ಕಾಣುತ್ತಿಲ್ಲ. ಮಾಳೇನಹಳ್ಳಿ ಗ್ರಾಮಸ್ಥರ ಮನವೊಲಿಸುವ ಕೆಲಸ ಸರ್ಕಾರ ಮತ್ತು ಅಧಿಕಾರಿಗಳು ಮಾಡಲಿ. ಅದು ಯಶಸ್ವಿಯಾಗಿ ಕಾಮಗಾರಿ ನಡೆಸುವವರೆಗೆ ತಾವು ಸೋಮವಾರದಿಂದ ಅಹೋರಾತ್ರಿ ಸರಣಿ ಧರಣಿ ಮುಂದುವರೆಸುವುದಾಗಿ ಕರಗಡ ಕುಡಿಯುವ ನೀರಿನ ಯೋಜನೆಯ ಹೋರಾಟ ಸಮಿತಿಯವರು ಜಿಲ್ಲಾಧಿಕಾರಿಗೆ ಸ್ಪಷ್ಟಪಡಿಸಿದರು.
ಕಳಸಾಪುರ, ಬೆಳವಾಡಿ, ದೇವನೂರು ಸೇರಿದಂತೆ ಸುತ್ತಮುತ್ತಲ ಗ್ರಾಮಗಳಲ್ಲಿ ಮಳೆ ಇಲ್ಲದೆ ಪ್ರತಿ ವರ್ಷ ಬರಗಾಲ ಬರುತ್ತಿದೆ. ಜನ ಮತ್ತು ಜಾನುವಾರುಗಳಿಗೆ ಕುಡಿಯಲು ನೀರಿಲ್ಲ. ಕರಗಡ ಕಾಮಗಾರಿ ಪೂರ್ಣಗೊಂಡರೆ ಈ ಭಾಗದ ಜನರ ನೀರಿನ ಸಮಸ್ಯೆ ಬಗೆಹರಿಯಲಿದೆ. ಈ ನಿಟ್ಟಿನಲ್ಲಿ ಸರ್ಕಾರ ಚಿಂತಿಸಿ ಕಾಲುವೆ ಕಾಮಗಾರಿ ಪೂರ್ಣಗೊಳಿಸಲು ಕ್ರಮ ವಹಿಸಬೇಕೆಂದು ಆಗ್ರಹಿಸಿದರು.
ಕರಗಡ ಕುಡಿಯುವ ನೀರಿನ ಹೋರಾಟ ಸಮಿತಿಯ ಬಿ. ಅಮ್ಜದ್, ಗುರುಶಾಂತಪ್ಪ, ರವೀಶ್ ಕ್ಯಾತನಬೀಡು, ಶಶಿಧರ, ಎಚ್.ಎಂ. ರೇಣುಕಾರಾಧ್ಯ, ಅಚ್ಚುತ್ ಕಳಸಾಪುರ, ಕೆಂಚಪ್ಪ ದೇವನೂರು ಹಾಗೂ ರೈತರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.