ಮಳೆನಾಡಿಗೆ 'ನೆರೆ'ಹೊರೆ
ಆರ್. ತಾರಾನಾಥ್
ಚಿಕ್ಕಮಗಳೂರು: ಮುಂಗಾರು ಮಳೆ ಆರಂಭವಾಯಿತೆಂದರೆ ಮಲೆನಾಡಿನ ಹಲವೆಡೆ ರಸ್ತೆ ಸಂಪರ್ಕ ಕಡಿದು ಹೋಗಿ, ಜನ ಜೀವನ ಅಸ್ತವ್ಯಸ್ತವಾಗಲಿದೆ. - ಇದು, ಬರೀ ಒಂದು ವರ್ಷದ ಸಮಸ್ಯೆ ಅಲ್ಲ. ಪ್ರತಿ ವರ್ಷ ಈ ಸಮಸ್ಯೆ ಎದುರಾದರೂ ಜಿಲ್ಲಾಡಳಿತವಾಗಲೀ, ಸರ್ಕಾರವಾಗಲೀ ತಲೆ ಕೆಡಿಸಿಕೊಳ್ಳುತ್ತಿಲ್ಲ.
ಮಲೆನಾಡಿನಲ್ಲಿ 24 ಗಂಟೆ ಮಳೆ ಬಿದ್ದರೆ ಸಾಕು ತುಂಗಾ, ಭದ್ರಾ ನದಿಗಳು ತುಂಬಿ ಹರಿಯುತ್ತವೆ. ನದಿ ಹರಿದು ಹೋಗುವ ಪ್ರದೇಶದ ಕೆಲವೆಡೆ ನೀರು ರಸ್ತೆಯ ಮೇಲೆ ಬಂದು ರಸ್ತೆ ಸಂಪರ್ಕ ಕಡಿದು ಹೋಗಲಿದೆ. ಈ ರೀತಿಯ ಸಮಸ್ಯೆ ಇರುವುದು ಕೆಲವೆಡೆ ಮಾತ್ರ. ಈ ಪ್ರದೇಶದಲ್ಲಿ ತಡೆಗೋಡೆ ನಿರ್ಮಾಣ, ರಸ್ತೆ ಅಗಲೀಕರಣ, ರಸ್ತೆಯ ಎತ್ತರ ಏರಿಸುವ ನಿಟ್ಟಿನಲ್ಲಿ ಸರ್ಕಾರ ಯಾವುದೇ ರೀತಿಯಲ್ಲಿ ಕ್ರಮ ಕೈಗೊಂಡಿಲ್ಲ.
ಕಳಸ- ಹೊರನಾಡು ರಸ್ತೆ: ಕಳಸ ಪಟ್ಟಣದಿಂದ ಹೊರನಾಡಿಗೆ ಹೋಗುವ ರಸ್ತೆಯಲ್ಲಿ ಭದ್ರಾ ನದಿಗೆ ಅಡ್ಡಲಾಗಿ ಸೇತುವೆ ನಿರ್ಮಾಣ ಮಾಡಲಾಗಿದೆ. ಇದರ ಎತ್ತರ ಅತ್ಯಂತ ಕಡಿಮೆ ಇದ್ದು, ಸ್ವಲ್ಪ ಮಳೆ ಬಂದರೆ ಸಾಕು ಇಲ್ಲಿನ ಸೇತುವೆ ಮೇಲೆ ನೀರು ಹರಿಯುತ್ತಿದೆ.
ಇಲ್ಲಿ ಸೇತುವೆ ನಿರ್ಮಾಣಕ್ಕಾಗಿ ಲೋಕೋಪಯೋಗಿ ಇಲಾಖೆ 2007-08ರಲ್ಲಿ ರು. 3 ಕೋಟಿ ಅಂದಾಜು ಪಟ್ಟಿಯನ್ನು ಸಿದ್ಧಪಡಿಸಿ ರಾಜ್ಯ ಸರ್ಕಾರಕ್ಕೆ ಕಳುಹಿಸಿಕೊಟ್ಟಿತ್ತು. ಆದರೆ, ಈವರೆಗೆ ಈ ಸೇತುವೆ ನಿರ್ಮಾಣಕ್ಕೆ ಸರ್ಕಾರ ಮುಂದಾಗಿಲ್ಲ.
ಈ ಸೇತುವೆ ನೀರಿನಲ್ಲಿ ಮುಳುಗಡೆಯಾದರೆ, ಹೊರನಾಡಿಗೆ ಕಳಸದಿಂದ ಹೋಗುವ ದಾರಿ ಮುಚ್ಚಿ ಹೋಗಲಿದೆ. ಹೊರನಾಡಿಗೆ ನೇರವಾಗಿ ಹೋಗುವ ಭಕ್ತರು ಹಾಗೂ ಪ್ರವಾಸಿಗರು ಬಾಳೆಹೊನ್ನೂರಿನ ಹಳುವಳ್ಳಿ ಮಾರ್ಗವಾಗಿ ಪ್ರಯಾಣಿಸಬೇಕು. ಹೊರನಾಡಿಗೆ ಹೋದವರು ಕಳಸಕ್ಕೆ ಹೋಗಬೇಕಾದರೆ ಹಳುವಳ್ಳಿಗೆ ವಾಪಸ್ ಬಂದು ಹೋಗಬೇಕು.
ಹೊರನಾಡು: ಕಳಸ ಮಾರ್ಗದಲ್ಲಿನ ಸೇತುವೆ ನೀರಿನಲ್ಲಿ ಮುಳುಗಡೆಯಾದರೆ ಬಲಿಗೆ, ಮೆಣಸಿನಹಾಡ್ಯ, ಕೊಗ್ರೆ ಗ್ರಾಮಗಳಿಗೆ ತೆರಳುವ ವಿದ್ಯಾರ್ಥಿಗಳಿಗೆ, ಸಾರ್ವಜನಿಕರಿಗೆ ತುಂಬಾ ತೊಂದರೆಯಾಗಲಿದೆ. ಪ್ರತಿ ವರ್ಷ ಈ ತೊಂದರೆಯನ್ನು ಈ ಭಾಗದ ಜನರು ಎದುರಿಸುತ್ತಿದ್ದಾರೆ.
ರಸ್ತೆ ಸಂಪರ್ಕ ಕಡಿತ: ಮಳೆಗಾಲದಲ್ಲಿ ಜಿಲ್ಲೆಯ ಮಲೆನಾಡಿನಲ್ಲಿ ಅದರಲ್ಲೂ ತುಂಗಾ ಹಾಗೂ ಭದ್ರಾ ನದಿಗಳು ಹರಿಯುವ ಪ್ರದೇಶದಲ್ಲಿ ರಸ್ತೆಗಳು ಪ್ರತಿ ವರ್ಷ ಜಲಾವ್ರತವಾಗುತ್ತಿವೆ.
ಪ್ರಮುಖವಾಗಿ ಕಳಸ-ಹೊರನಾಡು- ಕೊಟ್ಟಿಗೆಹಾರ ರಸ್ತೆಯಲ್ಲಿರುವ ಮಾಗುಂಡಿಯ ಭೈರೇಗುಡ್ಡದ ಬಳಿ ಭದ್ರಾ ನದಿಯ ನೀರಿನಿಂದ ರಸ್ತೆ ಸಂಪರ್ಕ ಕಡಿದು ಹೋಗಲಿದೆ.
ಕೊಪ್ಪ ತಾಲೂಕಿನಲ್ಲಿ ತುಂಗಾ ನದಿ ಹಾಗೂ ಸೀತಾ ನದಿಯ ನೀರಿನ ಮಟ್ಟ ಏರಿಕೆಯಾದರೆ ನಾರ್ವೆ- ಹರಡಿಕೊಪ್ಪ, ಕಾರಂಗಿ, ಕಪಿಲ ನದಿಯಿಂದಾಗಿ ಕಾನೂರು- ಕಟ್ಟಿನಮನೆ ರಸ್ತೆಯ ಕುದುರೆಗುಂಡಿ, ನಾಗ್ಲಾಪುರ- ಹರಿಹರಪುರ ರಸ್ತೆ, ಶೃಂಗೇರಿ ತಾಲೂಕಿನ ಕೊರಕನಹಳ್ಳ- ಗುಲಗಂಜಿಮನೆ- ತನಿಕೋಡು, ನೆಮ್ಮಾರ್ ತೂಗು ಸೇತುವೆ ಬಳಿ ರಸ್ತೆ ಸಂಪರ್ಕ ಕಡಿದು ಹೋಗಲಿದೆ.
ಈ ಪ್ರದೇಶದಲ್ಲಿ ಪ್ರತಿ ಮಳೆಗಾಲದಲ್ಲಿ ರಸ್ತೆ ಸಂಪರ್ಕ ಕಡಿದು ಹೋಗಿ ಪ್ರಯಾಣಿಕರಿಗೆ ತುಂಬಾ ತೊಂದರೆಯಾಗುತ್ತಿದೆ. ಮಳೆ ಬಂದರೆ ಇಲ್ಲಿನ ಜನರು ಎದುರಿಸುವ ಸಮಸ್ಯೆ ಗಮನಕ್ಕೆ ಬರುತ್ತದೆ. ಇನ್ನುಳಿದಂತೆ ಮಳೆ ಇಲ್ಲದಿದ್ದರೆ, ಇದರ ಬಗ್ಗೆ ಆಡಳಿತ ಯಂತ್ರವಾಗಲೀ, ಜನಪ್ರತಿನಿಧಿಯಾಗಲೀ ತಲೆ ಕೆಡಿಸಿಕೊಳ್ಳುತ್ತಿಲ್ಲ. ಒಟ್ಟಾರೆ ಹೇಳುವುದಾದರೆ ಮನೆಗೆ ಬೆಂಕಿ ಬಿದ್ದ ಮೇಲೆ ಬಾವಿ ತೋಡುವ ಕೆಲಸಕ್ಕೆ ಮುಂದಾದರೂ ಎನ್ನುವ ಸ್ಥಿತಿ ಆಡಳಿಯ ಯಂತ್ರದ್ದಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

