ಕರಗಡ: ನಾಳೆಯಿಂದ ಸರಣಿ ಉಪವಾಸ
ಚಿಕ್ಕಮಗಳೂರು: ಕರಗಡ ಕುಡಿಯುವ ನೀರಿನ ಯೋಜನೆ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸುವಂತೆ ಆಗ್ರಹಿಸಿ ಕಳೆದ 10 ದಿನಗಳಿಂದ ನಡೆಯುತ್ತಿರುವ ಅಹೋರಾತ್ರಿ ಸರಣಿ ಧರಣಿ, ಶುಕ್ರವಾರದಿಂದ ಎರಡನೇ ಹಂತದಲ್ಲಿ ನಡೆಸಲು ಯೋಜನಾ ವ್ಯಾಪ್ತಿಯಲ್ಲಿರುವ ಗ್ರಾಮಸ್ಥರು ತೀರ್ಮಾನ ತೆಗೆದುಕೊಂಡಿದ್ದಾರೆ.
ಜಿಲ್ಲಾಧಿಕಾರಿಗಳ ಕಚೇರಿ ಎದುರು ನಡೆಯುತ್ತಿರುವ ಅಹೋರಾತ್ರಿ ಸರಣಿ- ಧರಣಿ ಗುರುವಾರ ಮುಕ್ತಾಯಗೊಳ್ಳಲಿದೆ. ಶುಕ್ರವಾರದಿಂದ ಈ ಯೋಜನೆ ವ್ಯಾಪ್ತಿಯ 11 ಗ್ರಾಮ ಪಂಚಾಯಿತಿಗಳ ಗ್ರಾಮಸ್ಥರು ಪ್ರತಿದಿನ ಒಂದು ಪಂಚಾಯಿತಿಯವರಂತೆ ಜಿಲ್ಲಾಧಿಕಾರಿಗಳ ಕಚೇರಿಯ ಎದುರು ಬೆಳಗ್ಗೆಯಿಂದ ಸಂಜೆಯವರೆಗೆ ಸರದಿ ಉಪವಾಸ ಸತ್ಯಾಗ್ರಹ ನಡೆಸಲಿದ್ದಾರೆ.
ಇನ್ನೊಂದೆಡೆ ಜು. 18ರಿಂದ 28ರವರೆಗೆ ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಒಂದೊಂದು ದಿನ ಶಾಲಾ- ಕಾಲೇಜು ಮತ್ತು ಅಂಗಡಿ ಮುಗ್ಗಟ್ಟುಗಳು ಸ್ವಯಂ ಪ್ರೇರಿತ ಬಂದ್ ಮಾಡಲು ಧರಣಿ ನಿರತ ಸ್ಥಳದಲ್ಲಿ ರೈತರು ತೀರ್ಮಾನ ತೆಗೆದುಕೊಂಡರು.
ಅಸಹಕಾರ ಚಳವಳಿ: ಸರಣಿ ಧರಣಿಯಲ್ಲಿ ಪಾಲ್ಗೊಂಡಿದ್ದ ಯಳನಾಡು ಮಠದ ಜ್ಞಾನಪ್ರಭು ಸಿದ್ದರಾಮ ದೇಶೀಕೇಂದ್ರ ಸ್ವಾಮೀಜಿ ಮಾತನಾಡಿ, ದೇವನೂರು ಭಾಗಕ್ಕೆ ಶಾಶ್ವತವಾಗಿ ನೀರಿನ ಯೋಜನೆಯಾಗಬೇಕು ಎಂಬುದು ಸುಮಾರು 25 ವರ್ಷಗಳಿಂದ ಹೋರಾಟ ನಡೆಯುತ್ತಿದೆ. ಈ ಹೋರಾಟಗಳಿಗೆ ಸರ್ಕಾರಗಳು ಸ್ಪಂದಿಸಿಲ್ಲ. ಜನ ಮತ್ತು ಜಾನುವಾರುಗಳು ಕುಡಿಯುವ ನೀರಿನ ಹಾಹಾಕಾರ ಎದುರಿಸುತ್ತಿವೆ. ಜಾನುವಾರುಗಳಿಗೆ ಮೇವಿಲ್ಲ. ಈ ಪರಿಸ್ಥಿತಿ ತಿಳಿಸಿದ್ದರೂ ಸರ್ಕಾರ ಕಿವಿಗೊಡುತ್ತಿಲ್ಲ ಎಂದರು.
ನಮ್ಮಲ್ಲಿರುವ ಹಣ ಖರ್ಚಾದರೆ ಅದನ್ನು ಸಂಪಾದಿಸಬಹುದು. ಆದರೆ, ಕುಡಿಯುವ ನೀರು ತರಲು ಸಾಧ್ಯವಿಲ್ಲ. ಈ ಪ್ರದೇಶದಲ್ಲಿ ನೀರಿನ ಬವಣೆ ಎದುರಾಗಿದೆ. ಕರಗಡ ಕುಡಿಯುವ ನೀರಿನ ಕಾಮಗಾರಿ ಬೇಗ ಮುಗಿಸಿ ತಮ್ಮ ಗ್ರಾಮಗಳಿಗೆ ನೀರು ಹರಿಸುವಂತೆ ಒತ್ತಾಯಿಸಿ ನಡೆಯುತ್ತಿರುವ ಹೋರಾಟದಿಂದ ಹಿಂದೆ ಸರಿಯಬಾರದು. ನೀರು ತೆಗೆದುಕೊಂಡು ಹೋಗೇ ಹೋಗ್ತಿವಿ ಎಂಬ ಶಪಥ ಮಾಡಬೇಕು. ಸರ್ಕಾರ ನಿಮ್ಮ ಹೋರಾಟಕ್ಕೆ ಈಗಲೂ ಸ್ಪಂದಿಸದೆ ಹೋದರೆ ಅಸಹಕಾರ ಚಳವಳಿ ಮಾಡಿ ಎಂದು ಕರೆ ನೀಡಿದರು.
ಸರ್ಕಾರದ ರೈತ ವಿರೋಧಿ ಧೋರಣೆ ಖಂಡಿಸಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಶಾಲಾ- ಕಾಲೇಜುಗಳು ಬಂದ್ ಮಾಡಿ ಸರ್ಕಾರಕ್ಕೆ ಗಟ್ಟಿ ಕೂಗು ಮುಟ್ಟಿಸಿ ಎಂದ ಶ್ರೀಗಳು, ಆದರೆ, ಗಲಾಟೆ ಮಾತ್ರ ಮಾಡಬೇಡಿ. ಆದೇ ರೀತಿ ಈಗ ನಡೆಯುತ್ತಿರುವ ಹೋರಾಟದ ಬಗ್ಗೆ ಉದಾಸೀನ ತೋರಬೇಡಿ ಎಂದರು.
ದೇವನೂರು ಭಾಗದಲ್ಲಿ ನೋಡಿದರೆ ಕರಳು ಕಿವುಚಿ ಬರುತ್ತದೆ. ತೋಟಗಳು ನೀರಿಲ್ಲದೆ ಒಣಗಿ ಹಾಳಾಗಿ ಹೋಗಿವೆ. ಈಗ ಅಲ್ಪ- ಸ್ವಲ್ಪ ಉಳಿಸಿಕೊಂಡಿರುವ ತೋಟಗಳನ್ನು ಉಳಿಸಿಕೊಳ್ಳಿ, ಈ ಪ್ರದೇಶಕ್ಕೆ ನೀರು ತರಲು ರೈತರು ಒಗ್ಗಟ್ಟು ಪ್ರದರ್ಶನ ಮಾಡಬೇಕು ಎಂದರು.
ಉದಾಸೀನ: ಈ ಬಾರಿ ಮಲೆನಾಡಿನಲ್ಲಿ ಮಳೆ ಇಲ್ಲ, ಈ ಜಿಲ್ಲೆಯಲ್ಲಿ ತುಂಗಾ, ಭದ್ರಾ ನದಿಗಳು ಹುಟ್ಟಿದರೂ ಅವುಗಳ ನೀರು ನಮ್ಮ ಜಿಲ್ಲೆಯಲ್ಲಿ ಬಳಕೆಯಾಗುತ್ತಿಲ್ಲ. ತರೀಕೆರೆ, ಕಡೂರು ಹಾಗೂ ಚಿಕ್ಕಮಗಳೂರು ತಾಲೂಕಿನ ಕೆಲವು ಪ್ರದೇಶಗಳಲ್ಲಿನ ಕೆರೆ ಕಟ್ಟೆಗಳು ನೀರಿಲ್ಲದೆ ಒಣಗಿವೆ.
ಈ ಪ್ರದೇಶಕ್ಕೆ ನೀರೋದಗಿಸಲು ಶಾಶ್ವತವಾಗಿ ಯೋಜನೆ ರೂಪಿಸಬೇಕು ಎಂದ ಶ್ರೀಗಳು, ಬೇರೆ ಜಿಲ್ಲೆಗಳಿಗೆ ನೀರು ಕೊಡುವ ಭದ್ರಾ ಮೇಲ್ದಂಡೆ ಯೋಜನೆಯಲ್ಲಿ ಹಣ ಸಿಗುತ್ತದೆ. ಆದ್ದರಿಂದ ಆ ಯೋಜನೆಯ ಬಗ್ಗೆ ಸರ್ಕಾರ, ಜನಪ್ರತಿನಿಧಿಗಳು ಮಾತನಾಡುತ್ತಾರೆ. ಆದರೆ, ಕರಗಡ ಕುಡಿಯುವ ನೀರಿನ ಯೋಜನೆಯಂತಹ ಕಾಮಗಾರಿಯಲ್ಲಿ ಯಾರಿಗೂ ಏನೂ ಸಿಗುವುದಿಲ್ಲ. ಆದ್ದರಿಂದ ಅವರು ಉದಾಸೀನ ತೋರುತ್ತಿದ್ದಾರೆ ಎಂದರು.
ಕರಗಡ ಯೋಜನೆ ಕಾಮಗಾರಿ ಮುಕ್ತಾಯಗೊಳ್ಳುವವರೆಗೆ ಹೋರಾಟ ಕೈಬಿಡಬೇಡಿ, ಸರ್ಕಾರಕ್ಕೆ ಬಿಸಿ ಮುಟ್ಟಿಸಿ ಎಂದು ರೈತರಿಗೆ ಹಾಗೂ ಹೋರಾಟಗಾರರಿಗೆ ಕರೆ ನೀಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

