ಕರಗಡ ಯೋಜನೆ: ಸರಣಿ ಧರಣಿ ಅಂತ್ಯ
ಚಿಕ್ಕಮಗಳೂರು: ಕರಗಡ ಕುಡಿಯುವ ನೀರಿನ ಯೋಜನೆ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸುವಂತೆ ಆಗ್ರಹಿಸಿ 15 ದಿನದಿಂದ ಜಿಲ್ಲಾಧಿಕಾರಿ ಕಚೇರಿ ಎದುರು ನಡೆಯುತ್ತಿದ್ದ ಸರಣಿ ಧರಣಿ ಸೋಮವಾರ ಅಂತ್ಯಗೊಂಡಿತು. ಜಿಲ್ಲಾಧಿಕಾರಿ ಬಿ.ಎಸ್. ಶೇಖರಪ್ಪ ಮನವಿ ಮೇರೆಗೆ ರೈತರು ಧರಣಿಯನ್ನು ಹಿಂದಕ್ಕೆ ಪಡೆದರು.
ಕರಗಡ ಕುಡಿಯುವ ನೀರಿನ ಯೋಜನೆ ಕಾಮಗಾರಿ ಪೂರ್ಣಗೊಳಿಸುವಂತೆ ಆಗ್ರಹಿಸಿ ಕಳೆದ 15 ದಿನಗಳಿಂದ ಜಿಲ್ಲಾಧಿಕಾರಿ ಕಚೇರಿ ಎದುರು, ಅಹೋರಾತ್ರಿ ಸರಣಿ ಧರಣಿ, ಸತ್ಯಾಗ್ರಹ ನಡೆಸಲಾಗುತ್ತಿತ್ತು. ಸೋಮವಾರ ಜಿಲ್ಲಾಧಿಕಾರಿ ಶೇಖರಪ್ಪ ರೈತರೊಂದಿಗೆ ಸಭೆ ನಡೆಸಿ ಕರಗಡ ಕಾಮಗಾರಿಯನ್ನು ಸಮಾರೋಪದಿಯಲ್ಲಿ ನಡೆಸಿ ಶೀಘ್ರವೇ ಪೂರ್ಣಗೊಳಿಸಲಾಗುವುದು. ಇದಕ್ಕೆ ಒಂದು ತಿಂಗಳು ಕಾಲಾವಕಾಶ ಬೇಕಾಗಬಹುದು. ಆದುದರಿಂದ ಪ್ರತಿಭಟನೆ ಕೈಬಿಡುವಂತೆ ಮಾಡಿಕೊಂಡ ಮನವಿ ಸ್ಪಂದಿಸಿದ ರೈತರು ಧರಣಿಯನ್ನು ಕೈಬಿಟ್ಟರು.
11 ಗ್ರಾಮ ವ್ಯಾಪ್ತಿಯಲ್ಲಿ ಮುಂದುವರಿಕೆ: ಆದರೆ, ಈ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸುವಂತೆ ಆಗ್ರಹಿಸಿ ಕರಗಡ ಕುಡಿಯುವ ನೀರಿನ ಯೋಜನೆಯ ವ್ಯಾಪ್ತಿಯ 11 ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಸ್ವಯಂ ಘೋಷಿತ ಬಂದ್ ಚಳವಳಿಯನ್ನು ಮುಂದುವರೆಸಲಾಗಿದೆ.
ಸೋಮವಾರ ಸಿಂದಿಗೆರೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿನ ಶಾಲೆ, ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು. ಇದೇ ವೇಳೆಯಲ್ಲಿ ಸಿಂದಿಗೆರೆ ಗ್ರಾಮದಲ್ಲಿ ರೈತರು ಮೆರವಣಿಗೆ ನಡೆಸಿ ಕಾಮಗಾರಿ ಕೂಡಲೇ ಪೂರ್ಣಗೊಳಿಸುವಂತೆ ಆಗ್ರಹಿಸಿದರು. ಜಿಲ್ಲಾಧಿಕಾರಿ ಕಚೇರಿ ಎದುರು ನಿಡಘಟ್ಟ ಗ್ರಾಮಸ್ಥರು ಸರದಿ ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದರು. ಮಂಗಳವಾರ ನಿಡಘಟ್ಟ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಬಂದ್ ನಡೆಯಲಿದೆ.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಹೋರಾಟ ಸಮಿತಿಯ ಗುರುಶಾಂತಪ್ಪ, ರವೀಶ್ ಕ್ಯಾತನಬೀಡು, ಬಿ. ಅಮ್ಜದ್, ರೇಣುಕಾರಾಧ್ಯ, ಶಶಿಧರ್ ಹಾಗೂ ರೈತರು ಪಾಲ್ಗೊಂಡಿದ್ದರು.
ಬೆಂಬಲ: ಜಿಲ್ಲೆಯ ಬಯಲು ಪ್ರದೇಶಕ್ಕೆ ನೀರುಣಿಸುವ ಕರಗಡ ಏತ ನೀರಾವರಿ ಯೋಜನೆ ಕಾಮಗಾರಿಯನ್ನು ಪೂರ್ಣಗೊಳಿಸುವಂತೆ ಒತ್ತಾಯಿಸಿ ಕಳೆದ 15 ದಿನಗಳಿಂದ ಆ ಭಾಗದ ರೈತರು ಜಿಲ್ಲಾಧಿಕಾರಿ ಕಚೇರಿ ಎದುರು ನಡೆಸುತ್ತಿರುವ ಅನಿರ್ಧಿಷ್ಟಾವಧಿ ಧರಣಿಯನ್ನು ಕರ್ನಾಟಕ ದಲಿತ ಸಂಘರ್ಷ ಸಮಿತಿ ಬೆಂಬಲಿಸಿದೆ.
ಜಿಲ್ಲಾ ಸಂಚಾಲಕ ತರೀಕೆರೆ ಎನ್. ವೆಂಕಟೇಶ್ ನೇತೃತ್ವದಲ್ಲಿ ಸೋಮವಾರ ಧರಣಿ ನಿರತ ಸ್ಥಳಕ್ಕೆ ಆಗಮಿಸಿದ ಸಮಿತಿ ಕಾರ್ಯಕರ್ತರು ಚಳವಳಿಗೆ ಬೆಂಬಲ ಸೂಚಿಸಿ ಪ್ರತಿಭಟನೆಯಲ್ಲಿ ಪಾಲ್ಗೊಂಡರು.
ಈ ಸಂದರ್ಭದಲ್ಲಿ ಮಾತನಾಡಿದ ತರೀಕೆರೆ ಎನ್. ವೆಂಕಟೇಶ್, ವಾಡಿಕೆ ಮಳೆ ಕಾಣದೇ ಜಿಲ್ಲೆಯ ಬಯಲು ಸೀಮೆಯಲ್ಲಿ ಬರಗಾಲದ ಛಾಯೆ ಮೂಡಿದೆ. ಮಳೆ ಕೊರತೆಯಿಂದಾಗಿ ಆ ಭಾಗದ ರೈತರು ಕಂಗಾಲಾಗಿದ್ದಾರೆ. ಮಳೆಯನ್ನು ನಂಬಿ ಸಾಲ ಸೋಲ ಮಾಡಿ ರೈತರು ಬಿತ್ತಿರುವ ಬೆಳೆ ಭೂಮಿಯಲ್ಲೇ ನಾಶವಾಗುತ್ತಿದ್ದು ಕುಡಿಯುವ ನೀರಿಗೂ ಪರದಾಡುವಂತಾಗಿದೆ ಎಂದು ಹೇಳಿದರು.
ಬಯಲು ಭಾಗ ತೀವ್ರ ಬರಗಾಲಕ್ಕೆ ತುತ್ತಾಗುತಿರುವ ಹಿನ್ನೆಲೆಯಲ್ಲಿ ಕರಗಡ ಏತ ನೀರಾವರಿ ಯೋಜನೆಯಲ್ಲಿ ಯಾವುದೇ ರಾಜಕಾರಣ ಮಾಡದೇ ಕಾಮಗಾರಿಯನ್ನು ತಕ್ಷಣ ಪೂರ್ಣಗೊಳಿಸಬೇಕು ಎಂದು ಆಗ್ರಹಿಸಿದರು.
ನೀರಿಗಾಗಿ ರೈತರು ನಡೆಸುವ ಚಳವಳಿಯನ್ನು ದಲಿತ ಸಂಘರ್ಷ ಸಮಿತಿ ಸಂಪೂರ್ಣವಾಗಿ ಬೆಂಬಲಿಸುವುದರ ಜೊತೆಗೆ ಸದಾ ಕಾಲ ಅವರ ಹೋರಾಟದಲ್ಲಿ ಭಾಗಿಯಾಗಿರುತ್ತದೆ ಎಂದು ಭರವಸೆ ನೀಡಿದರು.
ಸಮಿತಿಯ ತಾಲೂಕು ಸಂಚಾಲಕ ಮರ್ಲೆ ಅಣ್ಣಯ್ಯ, ಸಂಘಟನಾ ಸಂಚಾಲಕ ಚಂದ್ರಪ್ಪ, ಕೋದಂಡರಾಮ, ಸಿ.ಜಿ. ಗುರುಸ್ವಾಮಿ, ಶ್ರೀಗಂಗಾ, ಪ.ಜಾತಿ ಪ.ವರ್ಗದ ಮೀನುಗಾರರ ಸಹಕಾರ ಸಂಘದ ಅಧ್ಯಕ್ಷ ವಿ. ಧರ್ಮೇಶ್, ದಲಿತ ಮಹಿಳಾ ಒಕ್ಕೂಟದ ಸಂಘಟನಾ ಸಂಚಾಲಕಿ ಶಶಿಕಲಾ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

