ಮುಂಗಾರು ಲೀಲೆ; ತಲೆಶೂಲೆ!
ಅಪಾಯಮಟ್ಟ ಮೀರಿದ ತುಂಗಾ, ಭದ್ರ, ಹೇಮಾವತಿ ನದಿಗಳು, ಕಿಗ್ಗಾದಲ್ಲಿ 169.7 ಮಿಮೀ ಮಳೆ
ಚಿಕ್ಕಮಗಳೂರು: ಜಿಲ್ಲೆಯಲ್ಲಿ ಮುಂಗಾರು ಮಳೆ ಚುರುಕುಗೊಂಡಿದ್ದು, ಬುಧವಾರ ಮಲೆನಾಡಿನಲ್ಲಿ ಕೆಲವೆಡೆ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿತ್ತು. ಜನಜೀವನ ಅಸ್ತವ್ಯಸ್ತಗೊಂಡು ಒಂದು ರೀತಿ ತಲೆಶೂಲೆಗೆ ಕಾರಣವಾಗಿದೆ.
ಮಂಗಳವಾರ ಮಳೆಯ ಪ್ರಮಾಣ ಇಳಿಮುಖವಾಗಿತ್ತು. ಬುಧವಾರ ಮತ್ತೆ ಮಳೆ ಚುರುಕುಗೊಂಡಿದ್ದರಿಂದ ಕೊಪ್ಪ ಹಾಗೂ ಶೃಂಗೇರಿ ತಾಲೂಕುಗಳಲ್ಲಿ ಶಾಲಾ ಮತ್ತು ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು. ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರು ಹೋಬಳಿಯ 7 ಶಾಲೆಗಳಿಗೆ ಬುಧವಾರ ರಜೆ ನೀಡಲಾಗಿತ್ತು. ಮಳೆಯಿಂದಾಗಿ ಕೊಪ್ಪ ತಾಲೂಕಿನಲ್ಲಿ ಗುರುವಾರವೂ ರಜೆ ಘೋಷಿಸಲಾಗಿದೆ.
ಮಳೆಯಿಂದಾಗಿ ಜಿಲ್ಲೆಯ ಮಲೆನಾಡಿನ ಕೆಲವೆಡೆ ಮರಗಳು ರಸ್ತೆಗೆ ಬಿದ್ದಿದ್ದರಿಂದ ವಾಹನಗಳ ಸಂಚಾರಕ್ಕೆ ಅಡಚಣೆ ಉಂಟಾಯಿತು. ಮೂಡಿಗೆರೆ ತಾಲೂಕಿನ ಅಂಗಡಿ ಗ್ರಾಮದಲ್ಲಿ ಸರ್ಕಾರಿ ಶಾಲೆಯ ಗೋಡೆ ಕುಸಿದಿದ್ದು, ಯಾವುದೇ ಅವಘಡ ಸಂಭವಿಸಿಲ್ಲ. ಶೃಂಗೇರಿ, ಕೊಪ್ಪ ಸೇರಿ ಮಲೆನಾಡಿನ ತಾಲೂಕುಗಳಲ್ಲಿ ಬಲವಾಗಿ ಬೀಸುತ್ತಿರುವ ಗಾಳಿಯಿಂದಾಗಿ ಕೆಲವೆಡೆ ಮರಗಳು ವಿದ್ಯುತ್ ತಂತಿಗಳ ಮೇಲೆ ಬಿದ್ದಿರುವುದರಿಂದ ವಿದ್ಯುತ್ ಸರಬರಾಜಿನಲ್ಲಿ ಅಡಚಣೆ ಉಂಟಾಗಿದೆ.
ಬುಧವಾರ ಮೂಡಿಗೆರೆ, ಕೊಪ್ಪ, ಶೃಂಗೇರಿ, ಎನ್.ಆರ್.ಪುರ ಹಾಗೂ ಚಿಕ್ಕಮಗಳೂರು ತಾಲೂಕುಗಳು ಸೇರಿದಂತೆ ಬಯಲುಸೀಮೆಯ ತರೀಕೆರೆ ಹಾಗೂ ಕಡೂರು ತಾಲೂಕುಗಳಲ್ಲೂ ಮಳೆ ಎಂದಿನಂತೆ ಮುಂದುವರೆದಿದೆ.
ಮಳೆಯಿಂದಾಗಿ ತುಂಗಾ, ಭದ್ರಾ ಹಾಗೂ ಹೇಮಾವತಿ ನದಿಗಳ ನೀರಿನ ಮಟ್ಟದಲ್ಲಿ ಏರಿಕೆ ಕಂಡುಬಂದಿದ್ದು, ಹಲವೆಡೆ ನದಿಗಳು ಅಪಾಯಮಟ್ಟ ಮೀರಿ ತುಂಬಿ ಹರಿಯುತ್ತಿವೆ. ಮುಂದಿನ 24 ಗಂಟೆಗಳಲ್ಲಿ ತುಂಗಾ ಹಾಗೂ ಭದ್ರಾ ಜಲಾಶಯಗಳಲ್ಲಿ ನೀರಿನ ಒಳಹರಿವು ಹೆಚ್ಚಳವಾಗಲಿದೆ.
ಕಿಗ್ಗಾದಲ್ಲಿ ಹೆಚ್ಚು ಮಳೆ: ಕಳೆದ 24 ಗಂಟೆಗಳಲ್ಲಿ ಶೃಂಗೇರಿ ತಾಲೂಕಿನ ಕಿಗ್ಗಾದಲ್ಲಿ ಅತಿ ಹೆಚ್ಚು ಅಂದರೆ 169.7 ಮಿ.ಮೀ. ಮಳೆ ಬಂದಿದೆ. ಇನ್ನುಳಿದಂತೆ ಚಿಕ್ಕಮಗಳೂರು ನಗರದಲ್ಲಿ 15 ಮಿ.ಮೀ., ವಸ್ತಾರೆ- 36.2, ಜೋಳ್ದಾಳ್- 39.4, ಆಲ್ದೂರು- 32.7, ಅತ್ತಿಗುಂಡಿ- 33, ಸಂಗಮೇಶ್ವರಪೇಟೆ- 37.5, ಬ್ಯಾರವಳ್ಳಿ- 40.9, ಕಡೂರು- 4.4, ಗಿರಿಯಾಪುರ- 12.2, ಬೀರೂರು- 12.6, ಎಮ್ಮೆದೊಡ್ಡಿ- 15.4, ಕೊಪ್ಪ- 122.6, ಹರಿಹರಪುರ- 104, ಜಯಪುರ- 63.2, ಕಮ್ಮರಡಿ- 98.4, ಬಸರೀಕಟ್ಟೆ- 126.5, ಮೂಡಿಗೆರೆ- 47.8, ಕೊಟ್ಟಿಗೆಹಾರ- 46.4, ಜಾವಳಿ- 42.3, ಕಳಸ- 74.2, ಎನ್.ಆರ್.ಪುರ- 50, ಬಾಳೆಹೊನ್ನೂರು- 49, ಮೇಗರಮಕ್ಕಿ- 40, ಶೃಂಗೇರಿ- 93.2, ಕೆರೆಕಟ್ಟೆ- 134.2, ತರೀಕೆರೆ- 24.8, ಲಕ್ಕವಳ್ಳಿ- 33.4, ಅಜ್ಜಂಪುರ- 14, ಶಿವನಿ- 25.2, ಬುಕ್ಕಾಂಬೂದಿ- 23.1, ಲಿಂಗದಹಳ್ಳಿ- 27, ಉಡೇವಾ- 32.6, ಹುಣಸಘಟ್ಟ- 19.2, ರಂಗೇನಹಳ್ಳಿಯಲ್ಲಿ 24 ಮಿ.ಮೀ. ಮಳೆ ಬಂದಿದೆ.
ಜಯಪುರ: 24 ಗಂಟೆಗಳಿಂದ ಜಯಪುರ, ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭಾರಿ ಮಳೆಯಾಗುತ್ತಿದೆ. ಬುಧವಾರ ಮಧ್ಯಾಹ್ನ 12 ಗಂಟೆ ಸಮಯದಲ್ಲಿ ಜಯಪುರ- ಬಸರೀಕಟ್ಟೆ ರಸ್ತೆಯ ತೀರ್ಥಗುಂಡಿ ಬಳಿ ರಸ್ತೆಗೆ ಅಡ್ಡಲಾಗಿ ಮರ ಬಿದ್ದಿದ್ದು, 2 ಗಂಟೆಗೂ ಹೆಚ್ಚು ಕಾಲ ವಾಹನ ಸಂಚಾರ ಅಸ್ತವ್ಯಸ್ಥವಾಗಿತ್ತು.
ಕಳೆದ ಒಂದು ವಾರದಿಂದ ವಿದ್ಯುತ್ ಕಣ್ಣುಮುಚ್ಚಾಲೆಯಾಗುತ್ತಿದ್ದು, ದಿನದಲ್ಲಿ ಒಂದು ಗಂಟೆ ವಿದ್ಯುತ್ ಇರುವುದು ವಿರಳವಾಗಿದೆ. ಮೇಗುಂದಾ ಹೋಬಳಿಯ ಬಹುತೇಕ ಗ್ರಾಮಗಳಲ್ಲಿ ಅದರಲ್ಲೂ ಮುಖ್ಯವಾಗಿ ಗುಡ್ಡೇತೋಟ, ಬಿಳಾಲುಕೊಪ್ಪ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಕಳೆದ 9 ದಿನಗಳಿಂದ ವಿದ್ಯುತ್ ಪೂರೈಕೆ ಇಲ್ಲ. ಪ್ರಸ್ತುತ ಗ್ರಾಮ ಪಂಚಾಯ್ತಿಯ ಎಲ್ಲಾ ಕೆಲಸಗಳು ಇಂಟರ್ ನೆಟ್ ಮುಖೇನ ನಿರ್ವಹಿಸಬೇಕಾಗಿದ್ದು, ಬಹುತೇಕ ಕೆಲಸ-ಕಾರ್ಯಗಳು ಸ್ಥಗಿತವಾಗಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

