ಹೈಕೋರ್ಟ್ ಆದೇಶದನ್ವಯ ತೆರವು
ಕ.ಪ್ರ.ವಾರ್ತೆ, ಬಾಳೆಹೊನ್ನೂರು, ಜೂ. 1
ಮೂಡಿಗೆರೆ ತಾಲೂಕು ಕಳಸ ಅರಣ್ಯ ವಲಯದ ಮೇರ್ತಿಖಾನ್ ಎಸ್ಟೇಟ್ ಒತ್ತುವರಿ ಮಾಡಿದ್ದನ್ನು ರಾಜ್ಯ ಉಚ್ಚ ನ್ಯಾಯಾಲಯದ ಆದೇಶದ ಅನುಸಾರ ತೆರವುಗೊಳಿಸಲಾಗಿದೆಯೇ ಹೊರತು ಇನಾಂ ಭೂಮಿಯನ್ನು ತೆರವುಗೊಳಿಸಲಾಗಿಲ್ಲ ಎಂದು ಪ್ರಜಾಪ್ರಭುತ್ವ ಉಳಿಸಿ ಆಂದೋಲನ ವೇದಿಕೆಯ ಸುಮಾ ನಾಗೇಶ್ ಹೇಳಿದ್ದಾರೆ.
2012ನೇ ಇಸವಿಯಲ್ಲಿ ಪಿಸಿಸಿಎಫ್ ರಾಜ್ಯ ಉಚ್ಚ ನ್ಯಾಯಾಲಯಕ್ಕೆ ಮೇಲ್ಕಂಡ ತೋಟದ 119 ಎಕರೆ ಅರಣ್ಯ ಒತ್ತುವರಿ ತೆರವುಗೊಳಿಸಲು ಪ್ರಮಾಣಪತ್ರ ಸಲ್ಲಿಸಿತ್ತು. ಜಿಲ್ಲೆಯ ಮೂಡಿಗೆರೆ ತಾಲೂಕಿನ ತೋಟದೂರು ಗ್ರಾಮದ ಸರ್ವೆ ನಂ. 58ರ ಅಸುಪಾಸಿನಲ್ಲಿ ಅರಣ್ಯ ವ್ಯಾಪ್ತಿಗೆ ಒಳಪಡುವ ಸುಮಾರು 55.36 ಎಕರೆ ಒತ್ತುವರಿಯನ್ನು ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ ತೆರವುಗೊಳಿಸಲಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಇದಲ್ಲದೆ ಇನ್ನೂ ಹೆಚ್ಚಿನ ಒತ್ತುವರಿಯನ್ನು ಆ ಎಸ್ಟೇಟ್ ಅನುಭವಿಸುತ್ತಿದ್ದು, ಅದನ್ನು ಖುಲ್ಲಾಗೊಳಿಸುವ ಜತೆಗೆ ದಂಡ ಹಾಕುವಂತೆ ಅವರು ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಕಳಸ ಇನಾಂ ಸಂತ್ರಸ್ತರ ಹೋರಾಟ ದಿಕ್ಕು ತಪ್ಪುತ್ತಿದೆ ಎಂದು ಆರೋಪಿಸಿರುವ ಅವರು, ನಿಜವಾದ ಪರಿಹಾರ ಕಂಡುಕೊಳ್ಳುವ ದಿಕ್ಕಿನಲ್ಲಿ ವಾಸ್ತವ ನೆಲೆಗಟ್ಟಿನಲ್ಲಿ ಚರ್ಚೆ ನಡೆಯುತ್ತಿಲ್ಲ. ಭೀಮೇಶ್ವರ ಜೋಷಿ ನೇತೃತ್ವದ ಹೋರಾಟ ಸಮಿತಿ ತಳಮಟ್ಟದ ಇನಾಂ ಸಂತ್ರಸ್ತ ಕುಟುಂಬಗಳನ್ನು ತಲುಪಲೂ ವಿಫಲವಾಗಿದೆ. ಬೀದಿಯಲ್ಲಿ ಇಳಿದು ಹೋರಾಟ ಮಾಡುವ ಸಾಮರ್ಥ್ಯ ಹೊಂದಿದ ಕಮ್ಯುನಿಸ್ಟ್ ಹೋರಾಟವನ್ನು ಇನಾಂ ಹೋರಾಟ ಸಮಿತಿ ಹಾಗೂ ರಾಜಕೀಯ ಪಕ್ಷಗಳು ಅಸ್ಪೃಶ್ಯರಂತೆ ಪರಿಗಣಿಸಿರುವುದು ಇದರ ಜತೆಗೆ ಬಹುತೇಕ ಇನಾಂ ಕುಟುಂಬಗಳು ಒಂದಲ್ಲಾ ಒಂದು ರಾಜಕೀಯ ಪಕ್ಷಗಳ ಫಲಾನುಭವಿಗಳಾಗಿರುವುದು ವಿಪರ್ಯಾಸ.
ಸಮಸ್ಯೆಯ ತೀವ್ರತೆ: ಸಮಸ್ಯೆ ಪರಿಹರಿಸಬೇಕಾದ ಮೂಡಿಗೆರೆ ಶಾಸಕರು ತಾವು ಹೊಂದಿದ ಸಾಂವಿಧಾನಿಕ ಇತಿಮಿತಿ ಅರಿಯದೆ ಇನಾಂ ಸಂತ್ರಸ್ತರ ಸಭೆ ಮತ್ತು ಪತ್ರಿಕಾಗೋಷ್ಠಿಗಳಲ್ಲಿ ಪದೇ ಪದೇ ಸರ್ಕಾರಕ್ಕೆ ಗಡುವು ನೀಡುವ ಮೂಲಕ ಸಮಸ್ಯೆಯ ತೀವ್ರತೆಗೆ ಕಾರಣರಾಗಿದ್ದಾರೆ ಎಂದು ಆರೋಪಿಸಿದ್ದಾರೆ.
ಜಿಲ್ಲಾಧಿಕಾರಿಗಳು ಸಾಂವಿಧಾನಿಕ ಅಧಿಕಾರ ಬಳಸಿ ಕ್ರಿಯಾಶೀಲ ಅಧಿಕಾರಿಗಳ ಮೂಲಕ ಕಳಸ, ಹೊರನಾಡು, ಸಂಸೆ ಹಾಗೂ ತೋಟದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅರಣ್ಯಹಕ್ಕು ಕಾಯ್ದೆ ಅಡಿಯಲ್ಲಿ 10 ಎಕರೆವರೆಗೆ ಜಾಗ ಮಂಜೂರು ಮಾಡುವ ಮೂಲಕ ಸಮಸ್ಯೆ ಬಗೆಹರಿಸಬಹುದು.
ಪ್ರಸ್ತಾವನೆ ಸಲ್ಲಿಸಿ: ಅರಣ್ಯಹಕ್ಕು ಕಾಯ್ದೆಗೆ ಒಳಪಡದ 10 ಎಕರೆಗಿಂತ ಜಾಸ್ತಿ ಖಾತಾ ಭೂಮಿ ಹೊಂದಿರುವ ಇನಾಂ ಸಂತ್ರಸ್ತ ಕುಟುಂಬಗಳಲ್ಲಿ ಅಂತಹ ಕುಟುಂಬಗಳಿಗೆ ಸರ್ಕಾರದ ಪುನರ್ವಸತಿ ಯೋಜನೆ ಅಡಿಯಲ್ಲಿ ಎಕರೆವಾರು ಮೌಲ್ಯ ನಿಗದಿಪಡಿಸಿ ಸರ್ಕಾರಕ್ಕೆ ಜಿಲ್ಲಾಧಿಕಾರಿಗಳು ಪ್ರಸ್ತಾವನೆ ಸಲ್ಲಿಸಿ ಹಣ ಬಿಡುಗಡೆ ಮಾಡಿದಲ್ಲಿ ಆಸಕ್ತ ಕುಟುಂಬಗಳು ಒಲವು ತೋರುವ ಸಾಧ್ಯತೆ ಇದೆ ಎಂದು ಸಲಹೆ ನೀಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

